ಬೆಂಗಳೂರು : ನಾಗಮಂಗಲದಂತಹ ಕ್ಷೇತ್ರದಲ್ಲಿ ಗೆಲ್ಲುವುದು ಅಷ್ಟು ಸುಲಭವವಲ್ಲ, ಆದರೂ ಚೆಲುವರಾಯಸ್ವಾಮಿ ಚುನಾವಣೆಗೆ ನಿಂತು ಗೆದ್ದಿದ್ದಾರೆ. ಅವರಿಂದಲೇ ನಾಗಮಂಗಲ ಕ್ಷೇತ್ರದ ಅಭಿವೃದ್ಧಿಯಾಗಿದೆ. ಆದರೆ ಅದರ ಕ್ರೆಡಿಟ್ ಅನ್ನು ಬೇರೆ ಯಾರೋ ತೆಗೆದುಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರೋಧಿಗಳಿಗೆ ಟಾಂಗ್ ನೀಡಿದ್ದಾರೆ.
ಮಂಡ್ಯದ ನಾಗಮಂಗಲ ತಾಲ್ಲೂಕಿನ ಬಿಂಡಿಗನವಿಲೆ ಹೋಬಳಿಯ ದೊಡ್ಡಬಾಲ ಗ್ರಾಮದಲ್ಲಿ 39 ವರ್ಷಗಳ ಬಳಿಕ ನಡೆಯುತ್ತಿರುವ ಹುಚ್ಚಪ್ಪಸ್ವಾಮಿಯ ಹಾಗೂ ಹದಿನಾಲ್ಕು ಕೂಟದ ದೇವರುಗಳ ಜಾತ್ರಾ ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಭೆ ಎನ್ನುವುದು ಜಾತಿಯಿಂದ ಬರುವುದಿಲ್ಲ, ನಮ್ಮ ಶಕ್ತಿ ಹಾಗೂ ಸಾಮರ್ಥ್ಯದಿಂದ ಬರುತ್ತದೆ. ಜಾತಿಗೂ ಅದಕ್ಕೂ ಯಾವುದೇ ಸಂಬಂಧವಿಲ್ಲ. ಚೆಲುವರಾಯಸ್ವಾಮಿ ಅವರು ಈ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಮುಂದೆಯೂ ನಿಮ್ಮ ಏಳಿಗೆಗಾಗಿ ಅವರು ದುಡಿಯುತ್ತಾರೆ ಎಂದು ತಿಳಿಸಿದ್ದಾರೆ.
ಜೀವನದಲ್ಲಿ ಮನುಷ್ಯ ಪ್ರೀತಿ ಮುಖ್ಯ..!
ದೇವರನ್ನು ಪೂಜಿಸುವವರಿಗೆ ಆಷಾಡಭೂತಿತನ ಇರಬಾರದು. ಮಾಡಬಾರದ್ದನ್ನೆಲ್ಲಾ ಮಾಡಿ ದೇವರ ಪೂಜೆ ಮಾಡಿದ ತಕ್ಷಣ ಪಾಪಕಾರ್ಯ ಹೋಗಲ್ಲ. ಜೀವನದಲ್ಲಿ ಮನುಷ್ಯ ಪ್ರೀತಿ ಮುಖ್ಯ. ಮಾಡಬಾರದ ಪಾಪಗಳನ್ನು, ಮನುಷ್ಯ ವಿರೋಧಿ ಕೃತ್ಯಗಳನ್ನು ಮಾಡಿ ದೇವರನ್ನು ಅರಸಿ ಹೋಗುವುದರಿಂದ ಪ್ರಯೋಜನ ಇಲ್ಲ. ಮನುಷ್ಯ, ಮನುಷ್ಯನನ್ನು ಪ್ರೀತಿಸಬೇಕು. ಸಹಿಷ್ಣತೆ ಇರಬೇಕು ಎಂದು ಅವರು ಕರೆ ನೀಡಿದ್ದಾರೆ. ಈ ಸಮಾಜದಲ್ಲಿ ಎಲ್ಲಾ ಜಾತಿ, ಎಲ್ಲಾ ಧರ್ಮದವರಿಗೂ ಬೇರೆ ಬೇರೆ ನಂಬಿಕೆಗಳಿರುತ್ತವೆ. ಒಬ್ಬರ ನಂಬಿಕೆ ಬಗ್ಗೆ ಉಳಿದವರೆಲ್ಲರಿಗೂ ಗೌರವ ಇರಬೇಕು. ಪರಸ್ಪರ ಗೌರವಗಳಿಂದ ಎಲ್ಲರ ನಂಬಿಕೆಗಳನ್ನು ಕಾಣಬೇಕು ಎಂದು ಕಿವಿ ಮಾತು ಹೇಳಿದ್ದಾರೆ.
ಶಿಕ್ಷಣ ಪಡೆದು ಸಿಎಂ ಆದೆ..
ಅಂಬೇಡ್ಕರ್ ಅವರು ಕೊಟ್ಟಿರುವ ಸಂವಿಧಾನದಲ್ಲಿ ಎಲ್ಲರ ನಂಬಿಕೆಗಳ ಆಚರಣೆಗೆ ಅವಕಾಶ ಇದೆ. ಸಂವಿಧಾನ ಕೊಟ್ಟ ಅವಕಾಶದಿಂದ ನಾನು ಶಿಕ್ಷಣ ಪಡೆದು ಮುಖ್ಯಮಂತ್ರಿಯಾದೆ. ಅಂಬೇಡ್ಕರ್ ಅವರು ಶಿಕ್ಷಣಕ್ಕೆ ಪ್ರಥಮ ಆಧ್ಯತೆ ನೀಡಿದ್ದಾರೆ. ಅದ್ದರಿಂದ ಪ್ರತಿಯೊಬ್ಬರೂ ಇದನ್ನು ಪಾಲಿಸಬೇಕು. ಜಾತಿ ವ್ಯವಸ್ಥೆಗೆ ಚಲನೆ ಇಲ್ಲ. ಆರ್ಥಿಕ ಶಕ್ತಿ ಬಂದಾಗ, ಸಾಮಾಜಿಕ ಶಕ್ತಿ ಬಂದಾಗ ಚಲನೆ ಸಿಗುತ್ತದೆ. ಸಂಸ್ಕೃತ ಕಲಿಯುವ ಶೂದ್ರರ ಕಿವಿಗೆ ಕಾದ ಸೀಸವನ್ನು ಸುರಿಯುತ್ತಿದ್ದರು. ಸಂವಿಧಾನದ ಕಾರಣದಿಂದ ಇಂಥಾ ಸ್ಥಿತಿ ಹೋಗಿ ನಮಗೆಲ್ಲಾ ಶಿಕ್ಷಣ ಸಿಕ್ಕಿದೆ ಎಂದು ಸಿದ್ದರಾಮಯ್ಯ ಪ್ರತಿಪಾದಿಸಿದ್ದಾರೆ.
ಬಿಜೆಪಿಗೆ ನೈತಿಕತೆ ಇಲ್ಲ..
ರಾಜ್ಯದಲ್ಲಿನ ಜಾತಿ ಗಣತಿ ವರದಿ ವಿಚಾರವಾಗಿ ಮಾತನಾಡಿರುವ ಅವರು, ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನೇಮಕವಾಗಿದ್ದ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗಡೆಯವರು ನೀಡಿದ ವರದಿ ಸರಿಯಿಲ್ಲವೆಂದು ಹೇಳಲು ಬಿಜೆಪಿಯವರಿಗೆ ನೈತಿಕ ಹಕ್ಕಿಲ್ಲ ಎಂದು ಕಿಡಿ ಕಾರಿದ್ದಾರೆ.
ವರದಿಯಲ್ಲಿ ಯಾವುದೇ ನ್ಯೂನ್ಯತೆಗಳಿದ್ದರೆ ಸರಿಪಡಿಸಲಾಗುವುದು. ವರದಿ ಬಗ್ಗೆ ಅಭಿಪ್ರಾಯಗಳನ್ನು ವ್ಯಕ್ತಪಡಿಸುವಂತೆ ಸಚಿವರಿಗೆ ತಿಳಿಸಲಾಗಿದ್ದು, ಅವುಗಳನ್ನು ಪರಿಶೀಲಿಸಿ ನಂತರ ಸೂಕ್ತ ತೀರ್ಮಾನವನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.
1984 ರಲ್ಲಿ ನಡೆದಿದ್ದ ಸಮೀಕ್ಷೆಯಲ್ಲಿದ್ದ ಮುಸ್ಲಿಮರ ಸಂಖ್ಯೆ ಈಗ ವರದಿಯಲ್ಲಿ ಶೇಕಡಾ 90 ರಷ್ಟು ಹೆಚ್ಚಾಗಿದ್ದು, ಲಿಂಗಾಯತರ ಸಂಖ್ಯೆ ಕೇವಲ ಶೇಕಡಾ 8 ರಷ್ಟು ಜಾಸ್ತಿಯಾಗಿರುವುದಾಗಿ ಬಿಜೆಪಿಯ ಆರೋಪಕ್ಕೆ ಪ್ರತಿಕ್ರಿಯಿಸಿ, ಇದು ಕಾಂತರಾಜು ಆಯೋಗದ ಅಂಕಿಅಂಶಗಳ ಆಧಾರದ ಮೇಲೆ ಜಯಪ್ರಕಾಶ್ ಹೆಗಡೆಯವರು ಶಿಫಾರಸ್ಸು ಮಾಡಿದ್ದಾರೆ ಎನ್ನುವ ಮೂಲಕ ಸಿದ್ದರಾಮಯ್ಯ ತಮ್ಮ ಮೇಲಿನ ಆರೋಪಗಳನ್ನು ತಳ್ಳಿ ಹಾಕಿದ್ದಾರೆ.