Yadagiri News: ಯಾದಗಿರಿ: ಯಾದಗಿರಿಯಲ್ಲಿ (Yadgir) ಅನ್ನ ಭಾಗ್ಯ ಅಕ್ಕಿಗೆ ಕನ್ನ ಹಾಕಿರೋ ಘಟನೆ ನಡೆದಿದೆ. ಬೇಲಿಯೇ ಎದ್ದು ಹೊಲ ಮೇಯ್ದಂತಾಗಿರೋ ಈ ಪ್ರಕರಣದಲ್ಲಿ ಪಡಿತರ ಅಕ್ಕಿ ಸಂಗ್ರಹಿಸಿಟ್ಟಿದ್ದ ಗೋದಾಮಿನಿಂದಲೇ ಕಳ್ಳತನವಾಗಿದೆ. ಯಾದಗಿರಿ ಜಿಲ್ಲಾಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಅವರ ಕ್ಷೇತ್ರದ ಸರ್ಕಾರಿ ಗೋದಾಮಿನಲ್ಲಿ ಅಕ್ಕಿ ನಾಪತ್ತೆಯಾಗಿರುವ ಘಟನೆ ನಡೆದಿದೆ.

ಜಿಲ್ಲೆಯ ಶಹಾಪುರ ನಗರದ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಗೋದಾಮಿನಲ್ಲಿ ಪಡಿತರ ಅಕ್ಕಿ (Ration Rice) ಪರಿಶೀಲನೆ ವೇಳೆ ವ್ಯತ್ಯಾಸ ಕಂಡುಬಂದ ನಂತರ ಪ್ರಕರಣ ಬೆಳಕಿಗೆ ಬಂದಿದೆ.
ನ್ಯಾಯಬೆಲೆ ಅಂಗಡಿಗೆ ಸಾಗಾಟ ಮಾಡಬೇಕಾದ ಅಕ್ಕಿಯನ್ನ ಅಧಿಕಾರಿಗಳೇ ಸಾಗಾಟ ಮಾಡಿದ್ರಾ ಎಂಬ ಅನುಮಾನ ಕಾಡುತ್ತಿದೆ. ಕಳೆದ ಜೂನ್ 2 ರಿಂದ ನವೆಂಬರ್ 23ರ ಅವಧಿಯಲ್ಲಿ ಪಡಿತರ ಗೋಲ್ಮಾಲ್ ನಡೆದಿದೆ. ತಂತ್ರಾಂಶದಲ್ಲಿ ತೋರಿಸಿದ ದಾಸ್ತಾನಿಗೂ ಭೌತಿಕ ದಾಸ್ತಾನಿಗೂ ಅಜಗಜಾಂತರ ವ್ಯತ್ಯಾಸ ಕಂಡು ಬಂದಿದೆ. 6,077 ಕ್ವಿಂಟಲ್‌ನಷ್ಟು ಪಡಿತರ ಅಕ್ಕಿಯಲ್ಲಿ ವ್ಯತ್ಯಾಸ ಕಂಡುಬಂದಿದೆ. ಆಹಾರ ಇಲಾಖೆಯ ಉಪನಿರ್ದೇಶಕ ಭೀಮರಾಯ ಅವರು ಗೋದಾಮು ಪರಿಶೀಲನೆ ಮಾಡಿದಾಗ 2.66 ಕೋಟಿ ಮೌಲ್ಯದ ಅಕ್ಕಿ ಕಳವಾಗಿರುವುದು ಬೆಳಕಿಗೆ ಬಂದಿದೆ.
ಗೋದಾಮಿನ ಈಗಿನ ಮುಖ್ಯ ಕಾರ್ಯನಿರ್ವಾಹಕ ಶಿವಪ್ಪ ಹಾಗೂ ಈ ಹಿಂದಿನ ಸಿಇಒ ಶಿವರಾಜ ಅವರು ಸ್ವಂತ ಲಾಭಕ್ಕೆ ಬಳಸಿ ಸಾಗಾಟ ಮಾಡಿದ್ರಾ ಎಂಬ ಅನುಮಾನವಿದೆ. ಈ ಬಗ್ಗೆ ಶಹಾಪುರ ಠಾಣೆಯಲ್ಲಿ ಶಿವಪ್ಪ ಹಾಗೂ ಶಿವರಾಜ ಸಂಘದ ಆಡಳಿತ ಮಂಡಳಿ ವಿರುದ್ಧ ದೂರು ದಾಖಲಾಗಿದೆ.
ಕಳೆದ ಜೂನ್ ತಿಂಗಳಲ್ಲಿ ಅಕ್ಕಿ ಸಹಿತ ಲಾರಿ ಕಳ್ಳತನ ಘಟನೆ ನಡೆದಿತ್ತು. ಈ ಘಟನೆ ನಂತರ ಆಹಾರ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳು ಎಚ್ಚೆತ್ತುಕೊಂಡು ಕಟ್ಟುನಿಟ್ಟಿನ ಕ್ರಮಕೈಗೊಂಡಿದ್ದರೇ ಇಂತಹ ಘಟನೆ ಮರುಕಳಿಸ್ತಿರಲಿಲ್ಲ. ಅದೇ ರೀತಿ ಗೋದಾಮಿನ ಸುತ್ತಲೂ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಮಾಡಿಲ್ಲ. ತಡೆಗೋಡೆ ಕೂಡ ನಿರ್ಮಾಣವಾಗಿಲ್ಲ. ಪಡಿತರ ಸಾಗಾಟ ಮಾಡುವ ಲಾರಿಗಳಿಗೆ ಜಿಪಿಎಸ್ ಅಳವಡಿಕೆ ಮಾಡಿಲ್ಲ. ಇದು ಕಳ್ಳತನಕ್ಕೆ ದಾರಿ ಮಾಡಿ ಕೊಟ್ಟಂತಾಗಿದೆ. 6 ತಿಂಗಳ ಅವಧಿಯಲ್ಲಿ 2.66 ಕೋಟಿ ಮೌಲ್ಯದ 6 ಸಾವಿರ ಕ್ವಿಂಟಲ್ ಪಡಿತರ ಅಕ್ಕಿ ಕಳ್ಳತನ ಆಗಿರೋದು ಗೊತ್ತಾದ ಬಳಿಕ ಕೇಸ್ ದಾಖಲಾಗಿದೆ.
ಕೇಸ್ ದಾಖಲಾದ ಮೇಲೆ ಅಧಿಕಾರಿಗಳ ಮೊಬೈಲ್ ಸ್ವಿಚ್ ಆಫ್ ಆಗಿದೆ. ಆಹಾರ ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ಭೀಮರಾಯ ಅವರ ಮೊಬೈಲ್ ಕೂಡ ಆಫ್ ಆಗಿದ್ದು, ಮಾಹಿತಿ ನೀಡಲು ಹಿಂದೇಟು ಹಾಕ್ತಿದ್ದಾರೆ.
ಸದ್ಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರೋ ಶಹಾಪುರ ಪೊಲೀಸರು ಎಸ್ಕೇಪ್ ಆಗಿರೋ ಆರೋಪಿಗಳ ಬೆನ್ನು ಬಿದ್ದಿದ್ದಾರೆ. ಆರೋಪಿಗಳಿಬ್ಬರೂ ಪ್ರಕರಣ ದಾಖಲಾಗುತ್ತಿದ್ದಂತೆ ನಾಪತ್ತೆ ಆಗಿರೋದ್ರಿಂದ ಆರೋಪಿಗಳ ಮೊಬೈಲ್ ನಂಬರ್ ಲೊಕೇಷನ್ ಆಧಾರದಲ್ಲಿ ಹುಡುಕಾಟಕ್ಕೆ ಮುಂದಾಗಿದ್ದಾರೆ. ಇದರ ನಡುವೆ ಆರೋಪಿಗಳಿಗೆ ದೊಡ್ಡವರ ಶ್ರೀ ರಕ್ಷೆ ಇದೆ. ಅದರಿಂದಲೇ ಪಡಿತರ ಅಕ್ಕಿ ಕಳ್ಳತನ ಆಗ್ತಿದೆ ಅಂತ ಜನ ಆರೋಪಿಸುತ್ತಿದ್ದಾರೆ. ಹೀಗಾಗಿ ಪೊಲೀಸರು ಕೂಡಲೇ ಬಡವರ ಅನ್ನಕ್ಕೆ ಕನ್ನ ಹಾಕಿರೋ ಆರೋಪಿಗಳನ್ನ ಹೆಡೆಮುರಿ ಕಟ್ಟಿ, ಕಠಿಣ ಕ್ರಮ ಕೈಗೊಳ್ಳಬೇಕಿದೆ ಎಂದು ಜನ ಒತ್ತಾಯಿಸಿದ್ದಾರೆ.
ನಕಲಿ ಟಿಕೆಟ್ ತೋರಿಸಿ ಏರ್‌ಪೋರ್ಟ್ ಒಳಗೆ ನುಗ್ಗಿದ ಮಹಿಳೆ- ಎಫ್‍ಐಆರ್ ದಾಖಲು
ಚೀನಾದಲ್ಲಿ H9N2 ಆರ್ಭಟ : ಕೇಂದ್ರ ಸರ್ಕಾರದಿಂದ ದೇಶಾದ್ಯಂತ ಮುನ್ನೆಚ್ಚರಿಕಾ ಕ್ರಮ



