Bengaluru News: ಮಾಗಡಿ ಶಾಸಕ ಬಾಲಕೃಷ್ಣ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ ರಿಯಲ್ ಎಸ್ಟೇಟ್ ಉದ್ಯಮಿಯನ್ನು ಅಟ್ಟಾಡಿಸಿ ಕೊಂದ ಘಟನೆ ಹೆಸರುಘಟ್ಟ ಸಮೀಪದ ಬಿಜಾಡಿಯ ಬಿಡಿಎಸ್ ಲೇಔಟ್‌ನಲ್ಲಿ ನಡೆದಿದೆ.
33 ವರ್ಷದ ಲೋಕ್‌ನಾಥ್ ಸಿಂಗ್, ನಿನ್ನೆ ರಾತ್ರಿ ಸ್ನೇಹಿತರು ಕರೆದರು ಎಂದು ಪಾರ್ಟಿ ಮಾಡಲು, ತನ್ನ ಗನ್ ಮ್ಯಾನ್ ಮತ್ತು ಸ್ನೇಹಿತರೊಂದಿಗೆ ತೆರಳಿದ್ದ. ಪಾರ್ಟಿ ಶುರುವಾಗಿ, ಎಣ್ಣೆ ಹೊಡೆದ ಕೆಲ ಹೊತ್ತಿನಲ್ಲೇ ಗೆಳೆಯರ ನಡುವೆ ಕಿರಿಕ್ ಶುರುವಾಗಿದೆ. ಇದೇ ಸಣ್ಣ ಕಿರಿಕ್ ದೊಡ್ಡ ಜಗಳವಾಗಿ, ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡುವ ಹಂತಕ್ಕೆ ಹೋಗಿದೆ.
ಲೋಕನಾಥ್‌ನ ಮೇಲೆ ಗೆಳೆಯರು ಮಾರಕಾಸ್ತ್ರಗಳಿಂದ ಹಲ್ಲೆ ಮಾಡುತ್ತಿದ್ದಂತೆ, ತನ್ನ ಜೀವ ಉಳಿಸಿಕೊಳ್ಳಲು, ಆ ಸ್ಥಳದಿಂದ ಸ್ವಲ್ಪ ದೂರದಲ್ಲೇ ಇರುವ ಅಡಿಕೆ ತೋಟದಲ್ಲಿ ಓಡಿದ್ದಾನೆ. ಆದರೂ ಬಿಡದೇ ದುಷ್ಕರ್ಮಿಗಳು ಆತನನ್ನು ಅಟ್ಟಾಡಿಸಿಕೊಂಡು ಬಂದಿದ್ದಾರೆ. ಬಳಿಕ, ಅಲ್ಲೇ ಇದ್ದ ಆಟೋ ಹತ್ತಿದ್ದಾನೆ. ಆದರೆ ಆಟೋದಲ್ಲೂ ನುಗ್ಗಿ ದುಷ್ಕರ್ಮಿಗಳು ಆತನನ್ನು ಕೊಚ್ಚಿ ಕೊಂದಿದ್ದಾರೆ.
ಅಲ್ಲೇ ಇದ್ದ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿದ್ದು, ಪೊಲೀಸರು ಸ್ಥಳಕ್ಕಾಗಮಿಸುವಷ್ಟರಲ್ಲಿ ದುಷ್ಕರ್ಮಿಗಳು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಅಲ್ಲದೇ ಲೋಕನಾಥ್ ಸಿಂಗ್ ಜೊತೆಯಲ್ಲಿದ್ದ ಗನ್‌ಮ್ಯಾನ್ ಕೂಡ ನಾಪತ್ತೆಯಾಗಿದ್ದಾನೆ. ಹೀಗಾಗಿ ಅನುಮಾನ ಇನ್ನಷ್ಟು ಹೆಚ್ಚಾಗಿದೆ. ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ.