Friday, April 18, 2025

Latest Posts

ಅಧಿವೇಶನದಲ್ಲಿ ಪ್ರತಿಧ್ವನಿಸಿದ ರೈತರ ‘ಅರಣ್ಯ’ರೋಧನ- ಸ್ಪೀಕರ್ ಗಮನ ಸೆಳೆದ ಶಾಸಕ ನಿರಂಜನ್ ಕುಮಾರ್

- Advertisement -

www.karnatakatv.net: ಗುಂಡ್ಲುಪೇಟೆ: ನಗರದ ಕಾಡಂಚಿನ ಗ್ರಾಮದ ರೈತರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ, ಕಾಡಂಚಿನ ರೈತರು ತಾವು ಬೆಳೆದ ಬೆಳೆಯನ್ನು ಸಹ ಮಾರಾಟ ಮಾಡಲಾಗುತ್ತಿಲ್ಲ ಇದಕ್ಕೆ ಅನೇಕ ಕಾರಣಗಳಿವೆ ಆದುದರಿಂದ ಕಾಡಂಚಿನ ಗ್ರಾಮದ ರೈತರ ಜಮೀನುಗಳನ್ನು ಅರಣ್ಯ ಇಲಾಖೆ ಖರೀದಿಸಿ ಪರಿಹಾರ ಒದಗಿಸಿಕೊಡಲು ಅವಕಾಶ ಮಾಡಿಕೊಡಬೇಕೆಂದು ಗುಂಡ್ಲುಪೇಟೆ ಶಾಸಕ ಸಿ.ಎಸ್.ನಿರಂಜನ್ ಕುಮಾರ್ ಸರ್ಕಾರಕ್ಕೆ ಮತ್ತು ಅರಣ್ಯ ಸಚಿವ ಉಮೇಶ್ ಕತ್ತಿಯವರಿಗೆ ಒತ್ತಾಯಿಸಿ ರೈತರ ಪರ ಧನಿಯೆತ್ತಿದರು.

 ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಿ ಅನೇಕ ಕಾಡಂಚಿನ ಗ್ರಾಮಗಳಿದ್ದು  ಇಲ್ಲಿರುವ ಪಟ್ಟಾ ಭೂಮಿಯಲ್ಲಿ ಬೆಳೆಯನ್ನು ಬೆಳೆದ ರೈತರು ಮಾರಾಟ ಮಾಡಲು ಕೊಂಡೊಯ್ಯಲು ಆಗದಷ್ಟು ಸಮಸ್ಯೆಗೆ ಸಿಲುಕಿದ್ದಾರೆ. ಇಂತಹ ಸಂಧರ್ಭದಲ್ಲಿ ಅಸಹಾಯಕರಾಗಿರುವ ರೈತರು ಬಂಡೀಪುರ ಅರಣ್ಯಕ್ಕೆ ಹೊಂದಿಕೊಂಡಂತಿರುವ ನಮ್ಮ ವ್ಯವಸಾಯ ಭೂಮಿಗಳನ್ನು ಅರಣ್ಯ ಇಲಾಖೆಗೆ ವಹಿಸಿಬಿಡುತ್ತೇವೆ ಎಂಬ ನಿರ್ದಾರಕ್ಕೆ ಬಂದಿದ್ದಾರೆ. ಈ ಕುರಿತಾಗಿ ಅರಣ್ಯ ಇಲಾಖೆಗೆ ಮನವಿಯನ್ನು ಮಾಡಿದ್ದು  ನಮ್ಮ ಜಮೀನನ್ನು ಖರೀದಿಸಿ ನಮಗೆ ಪರಿಹಾರವನ್ನು ನೀಡಿದರೆ ಬೇರೆಡೆ ಜಮೀನನ್ನು ಖರೀದಿಸಿ ನಮ್ಮ ಜೀವನ ಸಾಗಿಸುತ್ತೇವೆ ಎಂದು ಮನವಿ ಮಾಡಿದ್ದಾರೆ. ಆದುದರಿಂದ ಘನ ಸರ್ಕಾರ ಮತ್ತು ಅರಣ್ಯ ಸಚಿವರು ಇದಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು. ಶಾಸಕ ಸಿ.ಎಸ್.ನಿರಂಜನ್ ಕುಮಾರ್ ಅವರ ಮನವಿಗೆ ಪ್ರತಿಕ್ರಿಯಿಸಿದ ಅರಣ್ಯ ಸಚಿವ ಉಮೇಶ್ ಕತ್ತಿ ಅರಣ್ಯದಂಚಿನಲ್ಲಿರುವ ರೈತರ ಜಮೀನುಗಳು ಕಂದಾಯ ಇಲಾಖೆಗೆ ಸೇರಿದ್ದಾಗಿವೆ, ಈ ಹಿನ್ನೆಲೆಯಲ್ಲಿ ಶಾಸಕ ನಿರಂಜನ್ ಕುಮಾರ್ ಸಮ್ಮುಖದಲ್ಲಿ ಸಂಬಂಧಪಟ್ಟ ಅಧಿಕಾರಿಗಳೊಡನೆ ಸಭೆ ನಡೆಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ರೈತರ ಸಮಸ್ಯೆಗಳ ಕುರಿತು ಸದನದಲ್ಲಿ ಸಂಚಲನ ಮೂಡಿಸಿದ ಶಾಸಕ ಸಿ.ಎಸ್. ನಿರಂಜನ್ ಕುಮಾರ್ ಅರಣ್ಯಕ್ಕೆ ಹೊಂದಿಕೊಂಡಂತಿರುವ ರೈತರ ಜಮೀನುಗಳನ್ನು ಅರಣ್ಯ ಇಲಾಖೆಯೇ ಖರೀದಿ ಮಾಡುವ ಅಧಿಕಾರವಿದೆ ಎಂದು ಸರ್ಕಾರ ರಚನೆ ಮಾಡಿರುವ ಸಮಿತಿಯೇ ವರದಿ ನೀಡಿದೆ ಈ ಹಿನ್ನೆಲೆಯಲ್ಲಿ ಕಾಡಿಗೆ ಹೊಂದಿಕೊಂಡಂತಿರುವ ಜಮೀನುಗಳನ್ನು ಖರೀದಿಸಿ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಪರಿಹಾರ ಒದಗಿಸಿ ಅವರ ಜೀವನ ಹಸನಾಗಲು ತ್ವರಿತವಾಗಿ ಕಾರ್ಯ ಯೋಜನೆ ರೂಪಿಸಬೇಕು ಎಂದು ಒತ್ತಾಯಿಸಿದರು. ಕೊನೆಗೂ ಶಾಸಕರ ಒತ್ತಾಯಕ್ಕೆ ಮಣಿದ ಅರಣ್ಯ ಸಚಿವ ಉಮೇಶ್ ಕತ್ತಿ ಕೂಡಲೇ ಜಿಲ್ಲಾಧಿಕಾರಿ ಮತ್ತು ಆ ವ್ಯಾಪ್ತಿಯ ಡಿಎಫ್ ಓ ಸಭೆ ನಡೆಸಿ ಕಾರ್ಯರೂಪಕ್ಕೆ ತರಲಾಗುವುದು ಅಂತ ಭರವಸೆ ನೀಡಿದರು.

ಪ್ರಸಾದ್, ಕರ್ನಾಟಕ ಟಿವಿ- ಚಾಮರಾಜನಗರ

- Advertisement -

Latest Posts

Don't Miss