Movie News: ಗೋಧ್ರಾ ದುರಂತ ಯಾರಿಗೆ ಗೊತ್ತಿಲ್ಲ ಹೇಳಿ? 2002 ರ ಫೆಬ್ರವರಿ 27ರಂದು ನಡೆದ ಗೋಧ್ರಾ ರೈಲು ದುರಂತ ನಿಜಕ್ಕೂ ಇಡೀ ದೇಶವನ್ನು ಬೆಚ್ಚಿ ಬೀಳಿಸಿತ್ತು. ಈ ದುರಂತದಲ್ಲಿ 59 ಮಂದಿ ಸಾವನ್ನಪ್ಪಿದ್ದರು. 48 ಮಂದಿ ಗಂಭೀರ ಗಾಯಗೊಂಡಿದ್ದರು. ಈ ಘಟನೆಯಿಂದ ಗಲಭೆ ಎದ್ದಿತ್ತು. ಅದು ಮೂರು ತಿಂಗಳ ಕಾಲ ಮುಂದುವರೆದಿತ್ತು. ಅಷ್ಟೇ ಅಲ್ಲ, ಆಗ ಸಿಎಂ ಆಗಿದ್ದು ಮೋದಿ. ಈ ಘಟನೆಗೆ ಮೋದಿ ಕಾರಣ ಎಂಬ ಆರೋಪವೂ ಕೇಳಿಬಂದಿತ್ತು. ತದನಂತರ ಪ್ರಕರಣ ತಣ್ಣಗಾಯಿತು. ಇಷ್ಟಕ್ಕೂ ಈಗ ಯಾಕೆ ಗೋಧ್ರಾ ದುರಂತದ ಸುದ್ದಿ ಅನ್ನುವುದಕ್ಕೆ ಕಾರಣವೂ ಇದೆ. ಈ ಘಟನೆಯ ವಿಷಯ ಇಟ್ಟುಕೊಂಡು ತಯಾರಾಗಿದ್ದ ದಿ ಸಾಬರಮತಿ ರಿಪೋರ್ಟ್ ಚಿತ್ರ ನವೆಂಬರ್ 15ರಂದು ರಿಲೀಸ್ ಆಗಿತ್ತು. ಈ ಹಿಂದಿ ಚಿತ್ರವನ್ನು ಪ್ರಧಾನಿ ಮೋದಿ ಅವರು ಡಿ.2 ಅಂದರೆ ಇಂದು ದೆಹಲಿಯ ಸಂಸತ್ ಸಂಕೀರ್ಣದಲ್ಲಿರುವ ಗ್ರಂಥಾಲಯದ ಬಾಲಯೋಗಿ ಆಡಿಟೋರಿಯಂ ನಲ್ಲಿ ವೀಕ್ಷಿಸಿದ್ದಾರೆ. ಮೋದಿ ಅವರೊಂದಿಗೆ ಚಿತ್ರನಟ ವಿಕ್ರಾಂತ್ ಮಾಸ್ಸೆ, ನಿರ್ಮಾಪಕಿ ಏಕ್ತಾ ಕಪೂರ್ ಕೂಡ ವೀಕ್ಷಿಸಿದ್ದಾರೆ.
ಸಿನಿಮಾ ವೀಕ್ಷಿಸಿದ ಪ್ರಧಾನಿ ಮೋದಿ ದಿ ಸಾಬರಮತಿ ರಿಪೋರ್ಟ್’ ಸಿನಿಮಾಗೆ ಮೆಚ್ಚುಗೆ ಸೂಚಿಸಿದ್ದಾರೆ. ಅಷ್ಟೇ ಅಲ್ಲ, ಸಿನಿಮಾ ನಿರೂಪಣೆಯ ಬಗ್ಗೆಯೂ ಹಾಡಿ ಹೊಗಳಿದ್ದಾರೆ. ಅಂದಹಾಗೆ, ವಿವಾದಿತ ಗೋದ್ರಾ ಹತ್ಯಾಕಾಂಡದ ವಿಷಯವನ್ನು ಇಟ್ಟುಕೊಂಡು ಮಾಡಿದ್ದ ‘ದಿ ಸಾಬರಮತಿ ರಿಪೋರ್ಟ್’ ಸಿನಿಮಾ ವೀಕ್ಷಿಸಿದ ಮೋದಿ ಅವರು, ತಮ್ಮ ಎಕ್ಸ್ ಖಾತೆಯಲ್ಲೂ ಫೋಟೋ ಸಮೇತ ಹಂಚಿಕೊಂಡಿದ್ದಾರೆ.
ಬಾಲಿವುಡ್ ನಟ ವಿಕ್ರಾಂತ್ ಮಾಸ್ಸಿ ಹೈಲೆಟ್ ಆಗಿರುವ ‘ದಿ ಸಾಬರಮತಿ ರಿಪೋರ್ಟ್’ ಚಿತ್ರವನ್ನು ಮೋದಿ ಅವರ ಜೊತೆಗೆ ಅನೇಕ ಸಚಿವರು, ಸಂಸದರು ಹಾಗೂ ಚಿತ್ರತಂಡದವರು ಕೂಡ ವೀಕ್ಷಿಸಿದ್ದಾರೆ. ಸಿನಿಮಾ ವೀಕ್ಷಣೆ ಬಳಿಕ ಮೋದಿ ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಚಿತ್ರತಂಡಕ್ಕೆ ಭೇಷ್ ಎಂದಿದ್ದಾರೆ.
ನಿರ್ದೇಶಕ ಧೀರಜ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಏಕ್ತಾ ಕಪೂರ್, ಶೋಭಾ ಕಪೂರ್, ಅಮೂಲ್ ವಿ. ಮೋಹನ್, ಅನ್ಶೂಲ್ ಮೋಹನ್ ಅವರು ಈ ಚಿತ್ರದ ನಿರ್ಮಾಪಕರು. ವಿಕ್ರಾಂತ್ ಮಾಸಿ, ರಾಶಿ ಖನ್ನಾ, ರಿಧಿ ಡೋಗ್ರ, ಬರ್ಕಾ ಸಿಂಗ್ ಇತರರು ಸಿನಿಮಾದಲ್ಲಿ ನಟಿಸಿದ್ದಾರೆ. ಚಿತ್ರತಂಡದ ಶ್ರಮ ಮತ್ತು ಪ್ರಯತ್ನವನ್ನು ಮೋದಿ ಹೊಗಳಿದ್ದಾರೆ.
ಇನ್ನು, ಸಿನಿಮಾ ವೀಕ್ಷಿಸಿದ ನಂತರ ನರೇಂದ್ರ ಮೋದಿ ಅವರು ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ‘ಎನ್ ಡಿ ಎ ಸಂಸದರ ಜೊತೆಗೂಡಿ ದಿ ಸಾಬರಮತಿ ರಿಪೋರ್ಟ್ ಸಿನಿಮಾ ನೋಡಿದೆ. ಚಿತ್ರತಂಡದ ಪ್ರಯತ್ನಕ್ಕೆ ನಾನು ಶ್ಲಾಘನೆ ವ್ಯಕ್ತಪಡಿಸುತ್ತೇನೆ’ ಎಂದು ಮೋದಿ ಪೋಸ್ಟ್ ಮಾಡಿದ್ದಾರೆ. ಅವರಿಂದ ಈ ಹೊಗಳಿಕೆ ಸಿಕ್ಕದ್ದಕ್ಕೆ ‘ದಿ ಸಾಬರಮತಿ ರಿಪೋರ್ಟ್’ ಚಿತ್ರತಂಡದವರಿಗೆ ತುಂಬ ಖುಷಿ ಆಗಿದೆ. ಸಾಕಷ್ಟು ಕಾಮೆಂಟ್ಸ್ ಕೂಡ ಬರುತ್ತಿದೆ.
ನರೇಂದ್ರ ಮೋದಿ ಜೊತೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸಚಿವ ಜೆಪಿ ನಡ್ಡಾ ಕೂಡ ಸಿನಿಮಾ ವೀಕ್ಷಿಸಿದರು. ಚಿತ್ರತಂಡದವರಾದ ವಿಕ್ರಾಂತ್ ಮಾಸಿ, ಏಕ್ತಾ ಕಪೂರ್, ರಿದ್ಧಿ ಡೋಗ್ರ, ನಿರ್ದೇಶಕ ಧೀರಜ್ ಮುಂತಾದವರು ಸಹ ಮೋದಿ ಜೊತೆ ಕುಳಿತು ಸಿನಿಮಾ ನೋಡಿದ್ದಾರೆ. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ವಿಕ್ರಾಂತ್ ಮಾಸಿ ಅವರು, ‘ಇದು ತುಂಬ ಭಿನ್ನ ಅನುಭವ. ನನಗೆ ತುಂಬ ಖುಷಿ ಆಗಿದೆ. ಈ ಅನುಭವವನ್ನು ಪದಗಳಲ್ಲಿ ಹೇಳಲು ಸಾಧ್ಯವಾಗುತ್ತಿಲ್ಲ. ಪ್ರಧಾನಿ ಮೋದಿ ಜೊತೆ ಕುಳಿತು ಸಿನಿಮಾ ನೋಡಿದ್ದು, ನನ್ನ ವೃತ್ತಿಜೀವನದ ಉತ್ತುಂಗ ಕ್ಷಣ’ ಎಂದು ಹೇಳಿದ್ದಾರೆ.
ಇನ್ನು, ‘ದಿ ಸಾಬರಮತಿ ರಿಪೋರ್ಟ್’ ಸಿನಿಮಾ ಬಿಡುಗಡೆ ಆದಾಗ ಕೂಡ ಮೋದಿ ಅವರು ಟ್ವೀಟ್ ಮಾಡಿದ್ದರು. ‘ಜನಸಾಮಾನ್ಯರು ನೋಡುವ ರೀತಿಯಲ್ಲಿ ಸತ್ಯ ಹೊರಗೆ ಬರುತ್ತಿರುವುದು ಒಳ್ಳೆಯ ವಿಷಯ. ಕ್ಷಣಿಕ ಕಾಲದವರೆಗೆ ಮಾತ್ರ ಸುಳ್ಳಿನ ನಿರೂಪಣೆ ಇರಬಹುದು. ಅಂತಿಮವಾಗಿ ಸತ್ಯ ಹೊರಗೆ ಬರುತ್ತದೆ’ ಎಂದು ಅವರು ಪೋಸ್ಟ್ ಮಾಡಿದ್ದರು. 2002ರ ಫೆಬ್ರವರಿ 27ರಂದು ನಡೆದ ಗೋದ್ರಾ ರೈಲು ದುರಂತದ ಘಟನೆ ಆಧರಿಸಿ ‘ದಿ ಸಾಬರಮತಿ ರಿಪೋರ್ಟ್’ ಸಿನಿಮಾ ಮೂಡಿಬಂದಿದೆ. ಹಲವು ರಾಜ್ಯಗಳಲ್ಲಿ ಈ ಸಿನಿಮಾಗೆ ತೆರಿಗೆ ವಿನಾಯಿತಿ ನೀಡಲಾಗಿದೆ ಎಂಬುದು ವಿಶೇಷ.
ಏನಿದು ಗೋಧ್ರಾ ಪ್ರಕರಣ ಅಂದರೆ, ಬಿಹಾರದ ಮುಜಾಫರ್‌ಪುರದಿಂದ ಗುಜರಾತ್‌ನ ಅಹಮದಾಬಾದ್‌ಗೆ ಹೊರಟಿದ್ದ ಸಾಬರಮತಿ ಎಕ್ಸ್‌ಪ್ರೆಸ್ ರೈಲು , 2002ರ ಫೆ.27,ರ ಬೆಳಗ್ಗೆ ತನ್ನ ನಿಗದಿತ ಸಮಯಕ್ಕೆ ಗುಜರಾತ್‌ನ ಗೋಧ್ರಾ ರೈಲು ನಿಲ್ದಾಣಕ್ಕೆ ಹೋಗಿತ್ತು. ಈ ರೈಲಿನಲ್ಲಿ ಕರಸೇವಕರು, ಹಿಂದೂ ಸ್ವಯಂಸೇವಕರು ಅಯೋಧ್ಯೆಯಲ್ಲಿ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡು ಹಿಂದಿರುಗುತ್ತಿದ್ದರು. ರೈಲಿಗೆ ಸುಮಾರು 2,000 ಜನರಿದ್ದ ಗುಂಪು ಕಲ್ಲು ತೂರಿ ನಾಲ್ಕು ಕೋಚ್‌ಗಳಿಗೆ ಬೆಂಕಿ ಹಚ್ಚಿತ್ತು. ಈ ದುರಂತದಲ್ಲಿ 27 ಮಹಿಳೆಯರು ಮತ್ತು 10 ಮಕ್ಕಳು ಸೇರಿದಂತೆ 59 ಜನರು ಸಾವನ್ನಪ್ಪಿದ್ದರು. ದಾಳಿಯಲ್ಲಿ 48 ಪ್ರಯಾಣಿಕರು ಗಾಯಗೊಂಡಿದ್ದರು. ಇದರಿಂದ ಆದ ಗಲಭೆ ಮೂರು ತಿಂಗಳವರೆಗೆ ಮುಂದುವರೆದಿತ್ತು. ಈ ಗಲಭೆಗೆ ಆಗಿನ ಸಿಎಂ ಆಗಿದ್ದ ಮೋದಿ ಕಾರಣ ಎಂಬ ಆರೋಪ ಕೇಳಿಬಂದಿತ್ತು. ಈ ದುರಂತದ ತನಿಖೆ ನಡೆಸಿದ್ದ ಸುಪ್ರೀಂ ಕೋರ್ಟ್ ನೇಮಿಸಿದ್ದ ತನಿಖಾ ತಂಡ, ವರದಿಯಲ್ಲಿ ಈ ಬಗ್ಗೆ ಯಾವುದೇ ಪುರಾವೆಗಳು ಇಲ್ಲ ಎಂದು ಉಲ್ಲೇಖಿಸಿತ್ತು.
ವಿಜಯ್ ಭರಮಸಾಗರ, ಫಿಲ್ಮ್‌ಬ್ಯೂರೋ, ಕರ್ನಾಟಕ ಟಿವಿ