Friday, July 4, 2025

Latest Posts

ಹಣ ಬಂತು ಆದ್ರೆ ಮಗ ಬರಲಿಲ್ಲ : ಕುಟುಂಬದ ನೋವನ್ನ ದುಡ್ಡಿನಿಂದ ಭರಿಸೋಕೆ ಸಾಧ್ಯವಿಲ್ಲ

- Advertisement -

Bengaluru News: ಕಳೆದ ಜೂನ್ 4ರಂದು ಆರ್ಸಿಬಿಯ ವಿಜಯೋತ್ಸವದ ವೇಳೆ ಭೀಕರ ಕಾಲ್ತುಳಿತ ಸಂಭವಿಸಿ 11 ಜನ ಅಭಿಮಾನಿಗಳು ಸಾವನ್ನಪ್ಪಿದ್ದರು. ಅಲ್ಲದೆ 47ಕ್ಕೂ ಅಧಿಕ ಜನರು ಗಾಯಗೊಂಡಿದ್ದರು. ಈ ಘಟನೆಗೆ ಇಡೀ ರಾಜ್ಯಾದ್ಯಂತ ವ್ಯಾಪಕ ಆಕ್ರೋಶ ಹೆಚ್ಚಾಗಿತ್ತು. ಅಲ್ಲದೆ ಈ ದುರಂತಕ್ಕೆ ನೇರವಾಗಿ ಸರ್ಕಾರದ ವೈಫಲ್ಯವೇ ಕಾರಣವೆಂದು ವಿಪಕ್ಷಗಳೂ ಸಹ ಆರೋಪಿಸಿದ್ದವು. ದುರ್ಘಟನೆಯ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವರು ರಾಜೀನಾಮೆ ನೀಡಬೇಕೆಂದು ಒತ್ತಾಯಿಸುತ್ತಿವೆ.

ಇನ್ನೂ ಪ್ರಮುಖವಾಗಿ ಘಟನೆ ನಡೆದ ಮರುದಿನವೇ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೃತ ಅಭಿಮಾನಿಗಳ ವಾರಸುದಾರರಿಗೆ ಅಂದರೆ ಕುಟುಂಬಸ್ಥರಿಗೆ ತಲಾ 10 ಲಕ್ಷ ರೂಪಾಯಿಗಳನ್ನು ಪರಿಹಾರದ ರೂಪದಲ್ಲಿ ಸರ್ಕಾರದಿಂದ ನೀಡಲಾಗುವುದು ಎಂದು ಘೋಷಿಸಿದ್ದರು. ಆದರೆ ದಿನಕಳೆದಂತೆ ಇದರ ವಿರುದ್ದವೂ ಅಪಸ್ವರವೆದ್ದು ತೀವ್ರ ಅಸಮಾಧಾನ ವ್ಯಕ್ತವಾಗಿತ್ತು. ಸರ್ಕಾರದಲ್ಲಿರುವ ಮಂತ್ರಿಗಳೇ ಇರದ ಬಗ್ಗೆ ಬೇಸರ ಹೊರಹಾಕಿದ್ದರು ಅಲ್ಲದೆ ವಿಪಕ್ಷಗಳೂ ತೀವ್ರ ಟೀಕೆಯನ್ನು ಮಾಡಿದ್ದವು.

ಮೃತ ಪೂರ್ಣಚಂದ್ರ ಕುಟುಂಬಕ್ಕೆ ಸಚಿವ ಚಲುವರಾಯಸ್ವಾಮಿಯಿಂದ ಚೆಕ್ ವಿತರಣೆ..

ಆದರೆ ಈ ಎಲ್ಲದರಿಂದ ಎಚ್ಚೆತ್ತ ರಾಜ್ಯ ಸರ್ಕಾರ ಪರಿಹಾರದ ಮೊತ್ತವನ್ನು 25 ಲಕ್ಷ ರೂಪಾಯಿಗಳಿಗೆ ಏರಿಕೆ ಮಾಡಿದ್ದು, ಇದೀದ ಒಂದೊಂದು ಕುಟುಂಬಕ್ಕೂ ಆಯಾ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳ ಮೂಲಕ ಚೆಕ್ ಹಸ್ತಾಂತರದ ಕಾರ್ಯ ನಡೆಯುತ್ತಿದೆ. ಇನ್ನೂ ಇದಕ್ಕೆ ಪೂರಕವಾಗಿ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ರಾಯಸಮುದ್ರ ಗ್ರಾಮಕ್ಕೆ ಭೇಟಿ ನೀಡಿದ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಕಾಲ್ತುಳಿತದಲ್ಲಿ ಮೃತ ಪಟ್ಟಿದ್ದ ಪೂರ್ಣಚಂದ್ರ ಅವರ ಮನೆಗೆ ಭೇಟಿ ನೀಡಿ ಪೋಷಕರಿಗೆ ಸಾಂತ್ವನ ತಿಳಿಸಿದ್ದಾರೆದ.

ಬಳಿಕ ಸರ್ಕಾರದ ಪರಿಹಾರದ ಚೆಕ್ ಅನ್ನು ಹಸ್ತಾಂತರ ಮಾಡಿದ್ದಾರೆ. ಈ ವೇಳೆ ಪೂರ್ಣಚಂದ್ರ ಅವರ ಪೋಷಕರಾದ ಶಿಕ್ಷಕ ಆರ್.ಬಿ.ಚಂದ್ರು ಹಾಗೂ ಕಾಂತಾಮಣಿ ಅವರು ಮಗನ ನೆನೆದು ಸಚಿವರೆದುರು ಕಣ್ಣೀರಿಟ್ಟಿದ್ದಾರೆ. ಕ್ಷಮಿಸಪ್ಪಾ, ನಮ್ಮ ಕೈಯಿಂದ ಇಷ್ಟನ್ನೆ ಮಾಡಲಾಗುವುದು, ನಿಮ್ಮ ಅಳಿಯನಿಗೆ ಕೆ.ಆರ್.ಪೇಟೆ ಫುಡ್‌ಪಾರ್ಕ್‌ನಲ್ಲಿ ನೌಕರಿ ಕೊಡಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಪೂರ್ಣಚಂದ್ರ ಪೋಷಕರಿಗೆ ಚಲುವರಾಯಸ್ವಾಮಿ ಇದೇ ವೇಳೆ ಭರವಸೆ ನೀಡಿದ್ದಾರೆ.

ಕುಟುಂಬದ ನೋವನ್ನು ಹಣದಿಂದ ಭರಿಸಲು ಸಾಧ್ಯವಿಲ್ಲ, ಅದು ಸಮಾಧಾನಕ್ಕಷ್ಟೇ..!

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿರುವ ಸಚಿವ ಚಲುವರಾಯಸ್ವಾಮಿ, ಕ್ರೀಡಾ ಇತಿಹಾಸದಲ್ಲಿ ಈ ಘಟನೆ ಕಪ್ಪುಚುಕ್ಕೆಯಾಗಿ ಉಳಿಯುಲಿದೆ. ಇಂತಹ ದುರಂತವನ್ನು ಯಾರೊಬ್ಬರೂ ಕೂಡಾ ಊಹೆ ಮಾಡಿರಲಿಲ್ಲ. ಮೃತಪಟ್ಟ ಪೂರ್ಣಚಂದ್ರ ಜೀವನದಲ್ಲಿ ಹಲವು ಕನಸುಗಳನ್ನು ಹೊಂದಿದ್ದ ಯುವಕ. ಸರ್ಕಾರ ನೀಡುತ್ತಿರುವ ಪರಿಹಾರ ಅವರ ಸಮಾಧಾನಕ್ಕಷ್ಟೆ. ಕುಟುಂಬದ ನೋವನ್ನು ಹಣದಿಂದ ಭರಿಸಲು ಸಾಧ್ಯವಿಲ್ಲ. ಘಟನೆ ಕುರಿತು ತನಿಖೆ ನಡೆಯುತ್ತಿದೆ. ತಪ್ಪನ್ನು ಯಾರೆ ಮಾಡಿರಲಿ ಅವರಿಗೆ ಶಿಕ್ಷೆಯಾಗುತ್ತದೆ ಎಂದು ಅವರು ಹೇಳಿದ್ದಾರೆ.

ಒಂದೊಂದು ಕುಟುಂಬಕ್ಕೆ ತಲಾ ಒಟ್ಟು 40 ಲಕ್ಷ ರೂಪಾಯಿ ದೊರೆತಂತಾಗುತ್ತದೆ..

ಘಟನೆಯಲ್ಲಿ ಮೃತಪಟ್ಟವರ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದ ರಾಜ್ಯ ಸರ್ಕಾರ ಆನಂತರ ಎಲ್ಲರೊಂದಿಗೆ ಚರ್ಚಿಸಿ ಪರಿಹಾರದ ಮೊತ್ತವನ್ನು 25 ಲಕ್ಷ ರೂಪಾಯಿಗಳಿಗೆ ಏರಿಕೆ ಮಾಡಿದೆ, ಅದನ್ನು ಇಂದು ಕುಟುಂಬಸ್ಥರಿಗೆ ವಿತರಿಸಿದ್ದೇನೆ. ಈ ಪರಿಹಾರದ ಜೊತೆಗೆ ಆರ್‌ಸಿಬಿಯಿಂದ 10 ಲಕ್ಷ ರೂಪಾಯಿ, ಕರ್ನಾಟಕ ಕ್ರಿಕೆಟ್ ಅಸೋಷಿಯನ್ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ. ಇದರಿಂದ ಪ್ರತಿ ಕುಟುಂಬಕ್ಕೂ ಒಟ್ಟು 40 ಲಕ್ಷ ರೂಪಾಯಿ ಪರಿಹಾರ ದೊರಕಲಿದೆ ಎಂದು ತಿಳಿಸಿದ್ದಾರೆ.

ಇಂತಹ ಘಟನೆಗಳು ನಡೆದಾಗ ಎಲ್ಲರೂ ಕೂಡಾ ಸರ್ಕಾರಕ್ಕೆ ಬೆಂಬಲವಾಗಿರಬೇಕು. ಇನ್ನು ಮುಂದೆ ಈ ರೀತಿಯ ಕರಾಳ ಘಟನೆ ನಡೆಯದ ಹಾಗೆ ಎಚ್ಚರವಹಿಸುವ ಸಲಹೆ ನೀಡಬೇಕು. ಆದರೆ, ವಿಪಕ್ಷಗಳು ಸರ್ಕಾರವನ್ನು ದೂರುತ್ತಿರುವುದು ಸರಿಯಲ್ಲ. ಸಿಎಂ ಅಥವಾ ಸಚಿವರಿಗೆ ಈ ಘಟನೆ ನಡೆಯುತ್ತದೆ ಎಂಬ ಕಲ್ಪನೆ ಕೂಡಾ ಇರಲಿಲ್ಲ. ಕ್ರೀಡಾಭಿಮಾನಿಗಳ ಜೊತೆಯಲ್ಲಿ ಸರ್ಕಾರ ನಿಂತಿದ್ದು ತಪ್ಪೆ? ಅವಕಾಶವನ್ನು ಮಾಡಿಕೊಡದಿದ್ದರೆ ಅದಕ್ಕೂ ಸರ್ಕಾರವನ್ನು ವಿಪಕ್ಷಗಳು ದೂರುತ್ತಿದ್ದವು. ಈಗ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಚಲುವರಾಯಸ್ವಾಮಿ ಕಿಡಿಕಾರಿದ್ದಾರೆ.

- Advertisement -

Latest Posts

Don't Miss