National Political News: ನಾನು ಮುಂಬರುವ ಬಿಹಾರದ ವಿಧಾನಸಭಾ ಚುನಾವಣೆಯಲ್ಲಿ ಸ್ಫರ್ಧಿಸುತ್ತೇನೆ, ಆದರೆ ಸ್ಪರ್ಧೆಯ ಕ್ಷೇತ್ರವನ್ನು ಜನರೇ ನಿರ್ಧರಿಸಲಿದ್ದಾರೆ ಎಂದು ರಾಮ್ ವಿಲಾಸ್ ಲೋಕ ಜನಶಕ್ತಿ ಪಕ್ಷದ ಮುಖ್ಯಸ್ಥ ಹಾಗೂ ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಘೋಷಿಸಿದ್ದಾರೆ.
ಬಿಹಾರದ ಭೋಜ್ಪುರ ಜಿಲ್ಲೆಯ ಆರಾದಲ್ಲಿ ಪಕ್ಷದ ನವ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿರುವ ಅವರು, ನಾನು ಬಿಹಾರದಿಂದ, ಬಿಹಾರಕ್ಕಾಗಿ ಮತ್ತು ಬಿಹಾರದ ಜನರಿಗಾಗಿ ಚುನಾವಣೆಗೆ ಸ್ಪರ್ಧಿಸುತ್ತೇನೆ. ನಾವು ಎಲ್ಲಾ 243 ಸ್ಥಾನಗಳಿಗೂ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದೇವೆ. ಆದರೆ ನಾನು ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕೆಂದು ಬಿಹಾರದ ಜನರು ನಿರ್ಧರಿಸುತ್ತಾರೆ. ನನಗೆ ಮುಖ್ಯಮಂತ್ರಿ ಸ್ಥಾನದ ಮೇಲೆ ನಿರೀಕ್ಷೆಯಿಲ್ಲ ಎಂದು ಹೇಳಿದ್ದಾರೆ.
ನನ್ನನ್ನು ರಾಜಕೀಯವಾಗಿ ಕೊಲ್ಲುವ ವಿಫಲಯತ್ನಗಳು ನಡೆದಿದ್ದವು..!
ನನ್ನ ತಂದೆಯನ್ನು ಕಳೆದುಕೊಂಡ ನಂತರ, ನನ್ನ ಸ್ವಂತ ಜನರು ಅಂದರೆ ನನ್ನ ಚಿಕ್ಕಪ್ಪ ಪಶುಪತಿ ಕುಮಾರ್ ಪಾರಸ್, ನನ್ನನ್ನು ನನ್ನ ಮನೆಯಿಂದ ಹೊರಹಾಕಿದರು. ಬಳಿಕ ನನ್ನನ್ನು ರಾಜಕೀಯವಾಗಿ ಕೊಲ್ಲಲು ವಿಫಲವಾಗಿ ಪ್ರಯತ್ನಿಸಲಾಯಿತು. ನನ್ನ ಪಕ್ಷವನ್ನು ನನ್ನಿಂದ ಕಸಿದುಕೊಳ್ಳಲಾಯಿತು. ನನ್ನನ್ನು ಬೆಳೆಸುವ ಜವಾಬ್ದಾರಿಯನ್ನು ಹೊಂದಿದ್ದವರು ಮೋಸ ಮಾಡಿದರು. ಆದರೆ ಬಹುಶಃ ನಾನು ಸಿಂಹದ ಮಗ ಎಂಬುದನ್ನು ಅವರು ಮರೆತಿರಬಹುದು. ಆದರೆ ಈಗ ಇಡೀ ಬಿಹಾರದ ಜನರೇ ನನ್ನ ಕುಟುಂಬ ಎಂದು ಭಾವುಕರಾಗಿದ್ದಾರೆ.
ಆರ್ಜೆಡಿ, ಕಾಂಗ್ರೆಸ್ ಆಡಳಿತದಲ್ಲಿ ಬಿಹಾರ ಜಂಗಲ್ ರಾಜ್ಯದ ಹಣೆ ಪಟ್ಟಿ ಕಟ್ಟಿಕೊಂಡಿತ್ತು.
ಬಿಹಾರ ಮೊದಲು, ಬಿಹಾರಿ ಮೊದಲು ಎಂಬ ದೃಷ್ಟಿಕೋನದೊಂದಿಗೆ ನನ್ನ ತಂದೆಯ ಹೆಜ್ಜೆಯಂತೆ ಸಾಗುವ ಮೂಲಕ ಅವರ ಕನಸುಗಳನ್ನು ನನಸು ಮಾಡುತ್ತೇನೆ. ಅಲ್ಲದೆ ನಾಡನ್ನು ಅಭಿವೃದ್ದಿ ಮಾಡದೆ ನಾನು ವಿಶ್ರಮಿಸುವುದಿಲ್ಲ. ಈ ಮೂಲಕ ಬಿಹಾರವನ್ನು ಭಾರತದ ನಂಬರ್ ಒನ್ ರಾಜ್ಯವನ್ನಾಗಿ ಮಾಡುತ್ತೇವೆ. ಆರ್ಜೆಡಿಯು 15 ವರ್ಷಗಳ ಆಳ್ವಿಕೆಯಲ್ಲಿ ಹಾಗೂ ಕಾಂಗ್ರೆಸ್ನ 10 ವರ್ಷಗಳ ಆಧಿಕಾರದಲ್ಲಿ ನಮ್ಮ ಬಿಹಾರವು ಜಂಗಲ್ ರಾಜ್ ಎಂಬ ಹಣೆಪಟ್ಟಿ ಕಟ್ಟಿಕೊಳ್ಳಲು ಕಾರಣವಾಗಿತ್ತು ಎಂದು ಟೀಕಿಸಿದ್ದಾರೆ.
ಡಬಲ್ ಎಂಜಿನ್ ಸರ್ಕಾರದಿಂದ ಬಿಹಾರ ಅದ್ಭುತ ಪ್ರಗತಿ ಕಾಣಲಿದೆ..
1990 ರಲ್ಲಿ ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅಧಿಕಾರದಲ್ಲಿದ್ದರು ಹಾಗೂ ಕಾಂಗ್ರೆಸ್ – ಆರ್ಜೆಡಿ ಆಡಳಿತದಲ್ಲಿ ರಾಜ್ಯವು ಹಲವಾರು ನರಮೇಧಕ್ಕೆ ಸಾಕ್ಷಿಯಾಗಿತ್ತು ಎಂದು ಚಿರಾಗ್ ಪಾಸ್ವಾನ್ ಕಿಡಿ ಕಾರಿದ್ದಾರೆ. ಅಲ್ಲದೆ ಈಗ ಬದಲಾದ ಸನ್ನಿವೇಶಲ್ಲಿ ಡಬಲ್ ಎಂಜಿನ್ ಸರ್ಕಾರದಿಂದ ಬಿಹಾರ ಅದ್ಭುತ ಪ್ರಗತಿ ಕಾಣಲಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ರಾಜ್ಯದ ಅಭಿವೃದ್ದಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದು ಅವರು ಶ್ಲಾಘಿಸಿದ್ದಾರೆ.
ಎನ್ಡಿಎಗೆ ಬೂಸ್ಟ್ ನೀಡುತ್ತಾ ಕೇಂದ್ರ ಮಂತ್ರಿಯ ರಾಜ್ಯ ರಾಜಕಾರಣ..?
ಚಿರಾಗ್ ಒಂದು ನಿರ್ದಿಷ್ಟ ಸಮುದಾಯದ ನಾಯಕನಲ್ಲದ ಕಾರಣ, ರಾಜ್ಯ ರಾಜಕೀಯದಲ್ಲಿ ಅವರು ದೊಡ್ಡ ಪಾತ್ರಕ್ಕೆ ಸಿದ್ಧರಾಗಿದ್ದಾರೆ ಎಂಬ ಸಂದೇಶವನ್ನು ಕಳುಹಿಸಲು ಪಕ್ಷವು ಅವರನ್ನು ಮೀಸಲು ಸ್ಥಾನದ ಬದಲು ಸಾಮಾನ್ಯ ಸ್ಥಾನಕ್ಕೆ ಸ್ಪರ್ಧಿಸುವಂತೆ ಬಯಸಿತ್ತು. ಈ ಬಾರಿ ಸಾಮಾಜಿಕ ನ್ಯಾಯವು ಪ್ರಮುಖ ಚುನಾವಣಾ ವಿಷಯವಾಗಿ ಹೊರಹೊಮ್ಮುತ್ತಿರುವುದರಿಂದ, ಚಿರಾಗ್ ಅವರ ರಾಜ್ಯ ರಾಜಕೀಯ ಪ್ರವೇಶವು ಆಡಳಿತಾರೂಢ ಎನ್‌ಡಿಎಗೆ ಪ್ರಯೋಜನ ನೀಡಲಿದೆ ಎಂದು ಹೇಳಲಾಗುತ್ತಿದೆ. ಪ್ರಮುಖವಾಗಿ ಯುವ ಸಮೂಹದ ಮತಗಳನ್ನು ಸೆಳೆಯುವಲ್ಲಿ ಚಿರಾಗ್ ಪಾಸ್ವಾನ್ ನಾಯಕತ್ವ ಸಫಲವಾಗಬಹುದೆಂಬ ಲೆಕ್ಕಾಚಾರವೂ ಮೈತ್ರಿಕೂಟಕ್ಕೆ ಇದ್ದಂತೆ ಕಂಡು ಬರುತ್ತಿದೆ.
ನಿತೀಶ್ ವಿಶ್ವಾಸಕ್ಕೆ ಪಡೆಯುವ ಕಾರ್ಯತಂತ್ರ ರೂಪಿಸಿದ್ದ ಚಿರಾಗ್..
ಇನ್ನೂ ಪ್ರಮುಖವಾಗಿ ಕಳೆದ ತಿಂಗಳಷ್ಟೇ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಭೇಟಿಯಾಗಿದ್ದ ಚಿರಾಗ್ ಪಾಸ್ವಾನ್ ಆಗಲೂ ಸಹ ರಾಜ್ಯದಲ್ಲಿ ಸದ್ಯಕ್ಕೆ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ. ನಮ್ಮ ಮುಂದಿನ ಚುನಾವಣೆಯು ಹಿರಿಯರಾದ ನಿತೀಶ್ ಕುಮಾರ್ ಅವರ ನೇತೃತ್ವದಲ್ಲಿಯೇ ನಡೆಯಲಿದೆ ಎನ್ನುವ ಮೂಲಕ ನಿತೀಶ್ ನಾಯಕತ್ವವನ್ನು ಕೊಂಡಾಡಿದ್ದರು. ಇದರ ಜೊತೆಗೆ ಅವರನ್ನು ವಿಶ್ವಾಸಕ್ಕೆ ಪಡೆಯುವ ತಂತ್ರಗಾರಿಕೆ ರೂಪಿಸಿದ್ದರು. ಅಲ್ಲದೆ ರಾಜ್ಯದ ಜನರು ಬಯಸುತ್ತಿದ್ದಾರೆ, ರಾಜ್ಯ ರಾಜಕೀಯಕ್ಕೆ ಮರಳುವ ಬಗ್ಗೆ ಚಿಂತನೆ ನಡೆಸುತ್ತಿದ್ದೇನೆ ಎನ್ನುವ ಮೂಲಕ ಬಿಹಾರದ ರಾಜಕಾರಣಕ್ಕೆ ಬರುವ ಮುನ್ಸೂಚನೆಯನ್ನು ನೀಡಿದ್ದರು.
ಆದರೆ ಸದ್ಯ ಎನ್ಡಿಎ ಮೈತ್ರಿಕೂಟದ ಭಾಗವಾಗಿರುವ ನಿತೀಶ್ ಕುಮಾರ್ ಅವರು ಸಿಟ್ಟಾಗಬಾರದು ಎನ್ನುವ ಕಾರಣಕ್ಕೆ ಚಿರಾಗ್ ಎಲ್ಲವನ್ನೂ ನಿತೀಶ್ ಮೇಲೆ ಹೊರಿಸಿದ್ದಾರೆ. ಆದರೆ ಮುಂದಿನ ಮುಖ್ಯಮಂತ್ರಿ ಚಿರಾಗ್ ಎಂಬಂತಹ ಬ್ಯಾನರ್ಗಳು, ಪೋಸ್ಟರ್ಗಳು ಸೇರಿದಂತೆ ಸೋಷಿಯಲ್ ಮೀಡಿಯಾದಲ್ಲೂ ಸಾಕಷ್ಟು ಚರ್ಚೆ ನಡೆಯುತ್ತಿತ್ತು. ಈ ನಡುವೆಯೇ ಚಿರಾಗ್ ಅಧಿಕೃತವಾಗಿ ರಾಜ್ಯ ರಾಜಕಾರಣಕ್ಕೆ ಮರಳುವ ಘೋಷಣೆ ಮಾಡಿರುವುದು ಇದೀಗ ತೀವ್ರ ಕುತೂಹಲ ಕೆರಳಿಸಿದ್ದು, ಈ ಮೂಲಕ ಎನ್ಡಿಎ ಮೈತ್ರಿಕೂಟದ ಮಿತ್ರ ಪಕ್ಷವಾಗಿರುವ ಎಲ್ಜೆಪಿ ಆರ್ವಿ ಪಕ್ಷವೂ ಈ ಬಾರಿ ಎಷ್ಟು ಸ್ಥಾನಗಳಲ್ಲಿ ಸ್ಪರ್ಧಿಸಿ ಗೆಲ್ಲಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.