Political News: ಹುಬ್ಬಳ್ಳಿಯಲ್ಲಿ 5 ವರ್ಷದ ಬಾಲಕಿಯನ್ನು ಬಿಹಾರದ ವ್ಯಕ್ತಿಯೊಬ್ಬ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಪ್ರಕರಣ ಇಡೀ ರಾಜ್ಯಾದ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಘಟನೆಯಿಂದ ಎಚ್ಚೆತ್ತಿರುವ ರಾಜ್ಯ ಸರ್ಕಾರವು ಇದೀಗ ರಾಜ್ಯದಲ್ಲಿ ಹೊರ ರಾಜ್ಯದಿಂದ ಬಂದವರಿಂದ ನಡೆಯುತ್ತಿರುವ ಅಪರಾಧಗಳನ್ನು ಗಂಭೀರವಾಗಿ ಪರಿಗಣಿಸಿದೆ. ಈ ರೀತಿಯ ಪ್ರಕರಣಗಳಿಗೆ ಕಡಿವಾಣ ಹಾಕಲು ಕಾರ್ಮಿಕ ಇಲಾಖೆಯ ಜೊತೆಗೆ ಚರ್ಚೆ ಮಾಡಿದ ಬಳಿಕ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ.
ಇನ್ನೂ ಈ ಕುರಿತು ಮಾತನಾಡಿರುವ ಗೃಹ ಸಚಿವ ಡಾ.ಜಿ. ಪರಮೇಶ್ವರ್, ಹೊರ ರಾಜ್ಯದಿಂದ ಕರ್ನಾಟಕಕಕ್ಕೆ ಬಂದವರಿಗೆ ಇಲ್ಲಿನ ಸಂಸ್ಕೃತಿ ಹಾಗೂ ಜನರ ಭಾವನೆಗಳು ಅರ್ಥವಾಗುವುದಿಲ್ಲವೋ ಗೊತ್ತಿಲ್ಲ. ಅಲ್ಲದೆ ಹಲವಾರು ಕಡೆಗಳಲ್ಲಿ ಕಟ್ಟಡ ಕಾರ್ಮಿಕರಿಂದ ಅಪರಾಧಗಳು ನಡೆದಿವೆ. ಅಲ್ಲದೆ ಈ ವಿಚಾರದ ಕುರಿತು ಕಾರ್ಮಿಕ ಇಲಾಖೆಯೊಂದಿಗೆ ಮಾತನಾಡಿ, ಜಂಟಿಯಾಗಿ ಸಭೆ ನಡೆಸಿ ಮುಂದಿನ ನಿರ್ಧಾರವನ್ನು ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
ತನಿಖೆ ಬಳಿಕ ಸತ್ಯಾಂಶ ತಿಳಿಯಲಿದೆ..!
ಅಲ್ಲದೆ ಹುಬ್ಬಳ್ಳಿಯಲ್ಲಿ ಬಿಹಾರದ ಮೂಲದ ವ್ಯಕ್ತಿ ಐದು ವರ್ಷದ ಮಗುವನ್ನು ಅಪಹರಿಸಿ ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾನೆ. ಬಳಿಕ ಸ್ಥಳ ಪರಿಶೀಲನೆಗಾಗಿ ಆತನನ್ನು ಕರೆದುಕೊಂಡು ಹೋಗುವಾಗ ಪೊಲೀಸರ ಮೇಲೆಯೇ ದಾಳಿ ಮಾಡಿದ್ದಾನೆ. ಪೊಲೀಸರು ತಮ್ಮ ಆತ್ಮ ರಕ್ಷಣೆ ಮಾಡಿಕೊಳ್ಳಬೇಕಲ್ಲವಾ..? ಹೀಗಾಗಿ ಅವನ ಕಾಲಿಗೆ ಗುಂಡು ಹಾರಿಸಿದ್ದಾರೆ, ಅದು ಅವನ ಬೆನ್ನಿಗೆ ಬಿದ್ದಿದೆ. ಆರೋಪಿಯನ್ನು ಆಸ್ಪತ್ರೆಗೆ ಸಾಗಿಸುವಾಗಲೇ ತೀರಿಕೊಂಡಿದ್ದಾನೆ ಎಂಬ ವರದಿ ಇದೆ. ನಾನೂ ಸಹ ಅಧಿಕಾರಿಗಳಿಗೆ ತನಿಖೆಗೆ ಸೂಚಿಸಿದ್ದೇನೆ. ಆ ಬಳಿಕ ಸತ್ಯಾಂಶ ತಿಳಿಯುತ್ತದೆ ಎಂದು ಅವರು ಹೇಳಿದ್ದಾರೆ.
ಹೊಸ ಕಾನೂನು ಬರಲಿ..
ಇನ್ನೂ ಹುಬ್ಬಳ್ಳಿಯಲ್ಲಿ ಬಾಲಕಿಗಾದ ಅನ್ಯಾಯವನ್ನು ಖಂಡಿಸಿರುವ ಸಚಿವ ಮಧು ಬಂಗಾರಪ್ಪ, ವಲಸೆ ಕಾರ್ಮಿಕರನ್ನು ಕಾನೂನು ಬದ್ಧವಾಗಿ ಗುರುತಿಸುವುದು ಸೂಕ್ತವಾಗುತ್ತದೆ. ಇದಕ್ಕಾಗಿಯೇ ಕಾನೂನು ಹೊಸ ಕಾನೂನು ರೂಪಿಸುವುದು ಅನಿವಾರ್ಯ ಎಂದು ಹೇಳಿದ್ದಾರೆ. ಅಲ್ಲದೆ ಯಾರೇ ರಾಜ್ಯಕ್ಕೆ ಬಂದರೂ ಕೂಡ ಒಂದು ಹೊಣೆಗಾರಿಕೆ ಇರಬೇಕಾಗುತ್ತದೆ. ಸರ್ಕಾರದ ವಿವಿಧ ಇಲಾಖೆಗಳ ಮೂಲಕ ವಲಸೆ ಬರುವ ಕಾರ್ಮಿಕರನ್ನು ಗುರುತಿಸುವ ಕೆಲಸವಾಗಬೇಕಿದೆ. ವಲಸೆ ಕಾರ್ಮಿಕರಿಗೆ ಕಾನೂನು ಇಲ್ಲವೆಂದರೆ ಒಂದು ನೂತನ ಕಾನೂನು ತರುವುದು ಒಳ್ಳೆಯದು. ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗುವುದು ಎಂದು ಸಚಿವ ಮಧು ತಿಳಿಸಿದ್ದಾರೆ.