ಜಗತ್ತಿನ ಅತಿ ಎತ್ತರದ ಶಿಖರ ಮೌಂಟ್ ಎವರೆಸ್ಟ್‌ನಲ್ಲಿ ತೀವ್ರ ಹಿಮಪಾತ ಸಂಭವಿಸುತ್ತಿದೆ. ಈ ಹಿನ್ನೆಲೆಯಲ್ಲಿ, ಸುಮಾರು 1,000 ಪರ್ವತಾರೋಹಿಗಳು ಟಿಬೆಟ್‌ನ ಇಳಿಜಾರಿನಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಹಿಮಪಾತದ ಪರಿಣಾಮ ಪರ್ವತವನ್ನು ತಲುಪುವ ಮುಖ್ಯ ಹಾದಿಗಳು ಹಿಮದಿಂದ ಸಂಪೂರ್ಣವಾಗಿ ಮುಚ್ಚಿ ಹೋಗಿವೆ. ಸದ್ಯ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ಶುಕ್ರವಾರ ಸಂಜೆ ನಂತರದಿಂದ ಭಾರಿ ಹಿಮಪಾತ ಪ್ರಾರಂಭವಾಗಿದೆ. ಟಿಬೆಟ್‌ನ ಮೌಂಟ್ ಎವರೆಸ್ಟ್ ಪೂರ್ವ ಭಾಗದಲ್ಲಿನ ಶಿಬಿರಗಳು ಬಹುತೇಕ ಪ್ರಭಾವಿತಗೊಂಡಿವೆ. ಈ ಪ್ರದೇಶವು 4,900 ಮೀಟರ್ ಅಂದರೆ 16,000 ಅಡಿ ಎತ್ತರದಲ್ಲಿದೆ. ಪ್ರವೇಶ ದಾರಿಗಳನ್ನು ತೆರವುಗೊಳಿಸಲು ನೂರಾರು ಸ್ಥಳೀಯರು ಹಾಗೂ ತುರ್ತು ಸಿಬ್ಬಂದಿಯನ್ನ ನಿಯೋಜಿಸಲಾಗಿದೆ.
ಸ್ಥಳೀಯ ವರದಿಗಳ ಪ್ರಕಾರ, ಹತ್ತಿರದ ಕುಡಾಂಗ್ ಪಟ್ಟಣದಲ್ಲಿ ಸುಮಾರು 350 ಮಂದಿಯನ್ನು ಇಲ್ಲಿಯವರೆಗೆ ರಕ್ಷಿಸಲಾಗಿದೆ. ಅವರನ್ನ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಟಿಬೆಟ್‌ನ ‘ಬ್ಲೂ ಸ್ಕೈ’ ರಕ್ಷಣಾ ತಂಡ ಈ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ. ಸ್ಥಳೀಯ ಗ್ರಾಮಸ್ಥರು, ಹಿಮಪಾತ ನಿರ್ವಹಣಾ ತಜ್ಞರು, ರಕ್ಷಣಾ ಪಡೆಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ಇದರ ನಡುವೆಯೇ ನೇಪಾಳದಲ್ಲಿ ಭಾರೀ ಮಳೆಯ ಪರಿಣಾಮವಾಗಿ 52 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಹಲವಾರು ಸೇತುವೆಗಳು ಕೊಚ್ಚಿಹೋಗಿರುವುದರಿಂದ ಪ್ರವಾಸಿಗರ ಹಾಗೂ ಸ್ಥಳೀಯರ ಸಂಚಾರದ ಮಾರ್ಗಗಳು ತೀವ್ರವಾಗಿ ಬಂದ್ ಆಗಿವೆ.
ಅಧಿಕಾರಿಗಳು ಈ ಸಂದರ್ಭದಲ್ಲಿ ಪರ್ವತಾರೋಹಣ ಅಥವಾ ಪ್ರವಾಸ ತಾತ್ಕಾಲಿಕವಾಗಿ ತಪ್ಪಿಸಲು ಸಾರ್ವಜನಿಕರಿಗೆ ಸೂಚನೆ ನೀಡಿದ್ದಾರೆ. ಹವಾಮಾನ ಸ್ಥಿತಿ ಸಹಜ ಸ್ಥಿತಿಗೆ ಬರುವವರೆಗೆ ಎಲ್ಲಾ ಪರ್ವತಾರೋಹಣ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗಿದೆ.
ವರದಿ : ಲಾವಣ್ಯ ಅನಿಗೋಳ

