Thursday, December 12, 2024

Latest Posts

Movie News: ಭೈರತಿ ರಣಗಲ್ ಕಲೆಕ್ಷನ್ ಎಷ್ಟು?

- Advertisement -

Sandalwood News: ಯಾವುದೇ ಸಿನಿಮಾ ಇರಲಿ, ರಿಲೀಸ್ ಆದ ಬಳಿಕೆ ಅದರ ಗಳಿಕೆ ಕುರಿತು ಅ ಸಿನಿಮಾದ ಲೆಕ್ಕಾಚಾರ ಶುರುವಾಗುತ್ತೆ. ಅಷ್ಟಾಯ್ತು, ಇಷ್ಟಾಯ್ತು ಎಂಬ ಅಂಕಿ ಅಂಶಗಳು ಓಡಾಡುತ್ತವೆ. ಹಾಗಂತ ಎಲ್ಲಾ ಸಿನಿಮಾಗಳ ಕಲೆಕ್ಷನ್ ಬಗ್ಗೆ ಮಾತಾಡಲ್ಲ. ಸ್ಟಾರ್ ಸಿನಿಮಾಗಳ ಬಗ್ಗೆಯಂತೂ ಲೆಕ್ಕಾಚಾರ ಹಾಕೋದು ಬಿಡಲ್ಲ. ಕೆಲವು ಸಿನಿಮಾಗಳ ಸಕ್ಸಸ್ ಅನ್ನು ಹೇಗೆ ನಿರ್ಧರಿಸ್ತಾರೆ ಎಂಬಿತ್ಯಾದಿ ಪ್ರಶ್ನೆಗಳಿಗೆ ಈಗಲೂ ಉತ್ತರವಿಲ್ಲ. ಈ ವಾರ ರಿಲೀಸ್ ಆದ ಭೈರತಿ ರಣಗಲ್ ವಿಷಯದಲ್ಲೂ ಈಗ ಗಳಿಕೆಯ ಲೆಕ್ಕಾಚಾರ ಶುರುವಾಗಿದೆ. ಭೈರತಿ ರಣಗಲ್ ನಿಜವಾಗಲೂ ಸಕ್ಸಸ್ ಆಯ್ತಾ? ಆ ಕುರಿತು ಒಂದಷ್ಟು ಅಂಕಿ ಅಂಶಗಳ ಲೆಕ್ಕಾಚಾರ ಇಲ್ಲಿದೆ.

ಭೈರತಿ ರಣಗಲ್ ರಿಲಿಸ್ ಬಳಿಕ ಶಿವರಾಜಕುಮಾರ್ ಅವರ ಮ್ಯಾನರಿಸಂ ಬಗ್ಗೆ ಎಲ್ಲರೂ ಮಾತಾಡುವಂತಾಗಿದೆ. ಅಷ್ಟೇ ಅಲ್ಲ, ಸಿನಿಮಾ ನೋಡಿದವರೆಲ್ಲರೂ ಪ್ರಿತಿಯಿಂದಲೇ ಮೆಚ್ಚಿಕೊಂಡಿದ್ದಾರೆ. ಅಪ್ಪಿಕೊಂಡಿದ್ದಾರೆ ಕೂಡ. ಶಿವಣ್ಣನ ಲುಕ್, ಸ್ಟೈಲ್ , ಅವರ ಡೈಲಾಗ್ ಡಿಲವರಿ, ಲಾಂಗ್ ಹಿಡಿದು ಎದುರಾಳಿಗಳನ್ನು ಕತ್ತರಿಸೋ ಶೈಲಿ ಎಲ್ಲವೂ ನೋಡುಗರಿಗೆ ಸಖತ್ ಕಿಕ್ ಕೊಟ್ಟಿದೆ. ಹಾಗಾದರೆ, ಸಿನಿಮಾ ಸಕ್ಸಸ್ ಆಯ್ತಾ? ಹೌಸ್ ಫುಲ್ ಆದ ಮಾತ್ರಕ್ಕೆ ಸಿನಿಮಾ ಸಕ್ಸಸ್ ಅನ್ನುವುದನ್ನು ಒಪ್ಪಬೇಕಾ ಈ ರೀತಿಯ ಪ್ರಶ್ನೆಗಳು ಮೊದಲಿನಿಂದಲೂ ಇವೆ. ನಿಜ, ಆದರೂ, ಮೊದಲ ದಿನ ‘ಭೈರತಿ ರಣಗಲ್’ ಸಿನಿಮಾಗೆ ಸಿಕ್ಕಿದ ರೆಸ್ಪಾನ್ಸ್ ಮಾತ್ರ ಚಿಂದಿ. ಇಷ್ಟಕ್ಕೂ ಮೊದಲ ದಿನ ಯಾವ್ಯಾವ ಏರಿಯಾದಲ್ಲಿ ಎಷ್ಟೆಷ್ಟು ಕಲೆಕ್ಷನ್ ಆಯ್ತು? ವೀಕೆಂಡ್‌ನಲ್ಲಿ ಎಷ್ಟು ಕಲೆಕ್ಷನ್ ಆಗಿರಬಹುದು ಎಂಬ ಲೆಕ್ಕಾಚಾರ ಇದೀಗ ಶುರುವಾಗಿದೆ.

ಶಿವರಾಜಕುಮಾರ್ ಅವರ ಸಿನಿಮಾಗೆ ಮೊದಲ ವಾರ ಭರ್ಜರಿ ಓಪನಿಂಗ್ ಸಿಕ್ಕೇ ಸಿಗುತ್ತೆ. ಇದು ಎಲ್ಲರಿಗೂ ಗೊತ್ತು. ಅದರಲ್ಲೂ ಕಾಂಬಿನೇಷನ್ ಸಿನಿಮಾ ಅಂದಾಗ ಒಂದಷ್ಟು ನಿರೀಕ್ಷೆ, ಕುತೂಹಲ ಇದ್ದೇ ಇರುತ್ತೆ. ಹಾಗಾಗಿ, ಅಂತಹ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಬೇರೆಯದ್ದೇ ಲೆಕ್ಕ ಬರೀತಾವೆ. ಈ ಕಾರಣಕ್ಕೆ ಇದೀಗ ‘ಭೈರತಿ ರಣಗಲ್’ ಸಿನಿಮಾದ ಮೊದಲ ದಿನದ ಕಲೆಕ್ಷನ್ ಬಗ್ಗೆ ಸಖತ್ ಕುತೂಹಲವಿದೆ. ವಿತರಕರ ವಲಯದಿಂದ ಸಿಕ್ಕಿರುವ ಲೆಕ್ಕದ ಪ್ರಕಾರ, ಈ ಸಿನಿಮಾ ಮೊದಲ ದಿನ 2.20 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆಯಂತೆ. ಅದೇ ಇಂಡಸ್ಟ್ರಿ ಟ್ರೇಡ್ ಟ್ರ್ಯಾಕರ್ ಪ್ರಕಾರ ಈ ಸಿನಿಮಾ 2 ಕೋಟಿ ಕಲೆಕ್ಷನ್ ಆಗಿದೆ ಎನ್ನಲಾಗುತ್ತಿದೆ. ನಿಜಕ್ಕೂ ಮೊದಲ ದಿನ ಇಷ್ಟು ಗಳಿಕೆ ಆಗಿರೋದನ್ನು ಗೆಲುವೆನ್ನದಿರಲು ಸಾಧ್ಯವೇ?

ಹಿಂದೆ ಇದೇ ಶಿವಣ್ಣ, ನಿರ್ದೇಶಕ ನರ್ತನ್ ಅವರ ಕಾಂಬಿನೇಷನ್ ನಲ್ಲಿ ಬಂದ ಮಫ್ತಿ’ ಎಲ್ಲಾ ಏರಿಯಾಗಳಲ್ಲೂ ಒಳ್ಳೆಯ ಕಲೆಕ್ಷನ್ ಮಾಡಿತ್ತು. ಶಿವಣ್ಣ ಅವರ ಪಾತ್ರವನ್ನು ಕರುನಾಡು ಮೆಚ್ಚಿಕೊಂಡಿತ್ತು. ಈ ಕಾರಣಕ್ಕೆ ‘ಭೈರತಿ ರಣಗಲ್’ ಸಿನಿಮಾಗೂ ಎಲ್ಲಾ ಕಡೆಯಿಂದಲೂ ಉತ್ತಮ ರೆಸ್ಪಾನ್ಸ್ ಸಿಗುತ್ತೆ ಅಂತ ಲೆಕ್ಕ ಹಾಕಲಾಗಿತ್ತು. ಅದು ನಿಜವಾಗಿದೆ ಕೂಡ.

ಮೊದಲ ದಿನ ಎಲ್ಲೆಲ್ಲಿ ಎಷ್ಟೆಷ್ಟು ಕಲೆಕ್ಷನ್ ಆಗಿದೆ ಅನ್ನೋ ಅಂಕಿ ಅಂಶಗಳ ಬಗ್ಗೆ ಹೇಳೋದಾದರೆ, ಬೆಂಗಳೂರು, ಕೋಲಾರ, ತುಮಕೂರು – 1.2 ಕೋಟಿ ರೂಪಾಯಿ, ಮೈಸೂರು, ಮಂಡ್ಯ, ಕೂರ್ಗ್, ಹಾಸನ್ – 40 ಲಕ್ಷ ರೂಪಾಯಿ, ಶಿವಮೊಗ್ಗ, ದಕ್ಷಿಣ ಕನ್ನಡ – 20 ಲಕ್ಷ ರೂಪಾಯಿ, ಚಿತ್ರದುರ್ಗ, ದಾವಣಗೆರೆ – 20 ಲಕ್ಷ ರೂಪಾಯಿ, ಹೈದರಾಬಾದ್ ಕರ್ನಾಟಕ – 10 ಲಕ್ಷ ರೂಪಾಯಿ, ಹುಬ್ಬಳ್ಳಿ – 10 ಲಕ್ಷ ರೂಪಾಯಿ ಒಟ್ಟು – 2.20 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.

ಎಲ್ಲಾ ಸರಿ, ಇದು ಮೊದಲ ದಿನದ ಲೆಕ್ಕವಾದರೆ, ವೀಕೆಂಡ್ ಕಲೆಕ್ಷನ್ ಹೇಗೆಲ್ಲಾ ಇರುತ್ತೆ ಎಂಬ ಲೆಕ್ಕಾಚಾರವೂ ಶುರುವಾಗಿದೆ. ‘ಭೈರತಿ ರಣಗಲ್’ ಸಿನಿಮಾಗೆ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದೆ. ಹೀಗಾಗಿ ಮೊದಲ ಮೂರು ದಿನಗಳ ಕಲೆಕ್ಷನ್ ಜೋರಾಗಿರುತ್ತೆ ಎಂದು ನಿರೀಕ್ಷೆ ಮಾಡಬಹುದು. ಶನಿವಾರ ಹಾಗೂ ಭಾನುವಾರ ಎರಡೂ ದಿನವೂ ಬಾಕ್ಸಾಫೀಸ್‌ನಲ್ಲಿ ಸಿನಿಮಾದ ಕಲೆಕ್ಷನ್ ಉತ್ತಮವಾಗಿರುತ್ತೆ ಅನ್ನೋ ನಿರೀಕ್ಷೆಯಿದೆ. ಇದಕ್ಕೆ ಕಾರಣ, ನೋಡುಗರಿಂದ ಬರುತ್ತಿರುವ ಕಾಮೆಂಟ್ ಗಳು. ಗಾಂಧಿನಗರದಲ್ಲಿ ಕೇಳಿಬರುತ್ತಿರುವ ಮಾತುಗಳು. ಸಿನಿಮಾ ಎಕ್ಸ್‌ಪರ್ಟ್‌ಗಳ ಲೆಕ್ಕಾಚಾರದ ಪ್ರಕಾರ, ಮೊದಲ ಮೂರು ದಿನ ಈ ಸಿನಿಮಾ ಅಂದಾಜು 8 ರಿಂದ 10 ಕೋಟಿ ರೂಪಾಯಿ ಕಲೆಕ್ಷನ್ ಮಾಡಬಹುದು ಎಂದು ನಿರೀಕ್ಷೆ ಮಾಡಲಾಗಿದೆ.

ಸದ್ಯ ಸಿನಿಮಾ ಮೆಚ್ಚುಗೆ ಪಡೆದುಕೊಂಡಿದೆ. ಹಾಗಾಗಿ ಇನ್ನೂ ಒಂದೆರಡು ವಾರ ‘ಭೈರತಿ ರಣಗಲ್’ ಬಾಕ್ಸಾಫೀಸ್‌ನಲ್ಲಿ ಮೋಡಿ ಮಾಡುತ್ತೆ ಎಂಬ ಲೆಕ್ಕಾಚಾರವಿದೆ. ಇದು ಸಿನಿಮಾ ಉದ್ಯಮಿಗಳ ಲೆಕ್ಕ. ಅದರಲ್ಲೂ ಅಂದಾಜಿನ ಲೆಕ್ಕಮಾತ್ರ. ಚಿತ್ರತಂಡ ಇನ್ನೂ ಅಧಿಕೃತವಾಗಿ ಮಾಹಿತಿ ನೀಡಿಲ್ಲ. ಹೆಚ್ಚು ಕಮ್ಮಿ ಇದೇ ಲೆಕ್ಕಾಚಾರವೂ ಇರಬಹುದು.

ವಿಜಯ್ ಭರಮಸಾಗರ, ಫಿಲ್ಮ್‌ ಬ್ಯೂರೋ, ಕರ್ನಾಟಕ ಟಿವಿ

- Advertisement -

Latest Posts

Don't Miss