ಬೆಂಗಳೂರು : ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಟೌನ್‌ಶಿಪ್ ನಿರ್ಮಾಣಕ್ಕೆ ರಾಮನಗರ ತಾಲೂಕಿನ ಬಿಡದಿ ಹೋಬಳಿ ಸುತ್ತಮುತ್ತಲಿನ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಹೋರಾಟ ಸಮಿತಿಯನ್ನು ರಚನೆ ಮಾಡಿಕೊಂಡು ಬಿಡದಿಯಿಂದ ರಾಮನಗರದವರೆಗೆ ಬೃಹತ್ ಪಾದಯಾತ್ರೆ ನಡೆಸುವುದಾಗಿಯೂ ಎಚ್ಚರಿಸಿದ್ದಾರೆ. ಇದಕ್ಕೆ ಪೂರಕವಾಗಿ ಬಿಡದಿ ಉಪನಗರ ಯೋಜನೆಯನ್ನು ಕೈ ಬಿಡುವಂತೆ ಇದೀಗ ಸಂಸದ ಡಾ.ಸಿ.ಎನ್. ಮಂಜುನಾಥ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ. ಈ ಮೂಲಕ ಡಿಸಿಎಂ ಡಿಕೆ ಶಿವಕುಮಾರ್ ಕನಸಿನ ಯೋಜನೆಗೆ ಆರಂಭಿಕ ವಿಘ್ನ ಎದುರಾದಂತಾಗಿದೆ.
ಹಸಿರು ವಲಯ ಘೋಷಿಸಿ..
ಇನ್ನೂ ಬಿಡದಿಯ ಭೈರ ಮಂಗಲ ಹಾಗೂ ಕಂಚುಗಾರನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ ನಿರ್ಮಾಣ ಮಾಡಲು ಯೋಜಿಸಿರುವ ಟೌನ್‌ಶಿಫ್ ಯೋಜನೆಯನ್ನು ಕೈಗೆತ್ತಿಕೊಳ್ಳಬೇಡಿ. ಬದಲಿಗೆ ಈ ಪ್ರದೇಶವನ್ನು ಹಸಿರು ವಲಯ ಎಂದು ಘೋಷಿಸಬೇಕೆಂದು ಬೇಡಿಕೆ ಇಟ್ಟಿದ್ದಾರೆ. ಯಾಕೆಂದರೆ ಈ ಪ್ರದೇಶವು ಬಿಡದಿಯ ನಿಮ್ಮ ಪ್ರಸ್ತಾಪಿತ ಯೋಜನೆಯ ಸ್ಥಳದೊಂದಿಗೆ ಬೆಂಗಳೂರು ಮಹಾನಗರ ಪಾಲಿಕೆಯು ಹೊಂದಿಕೊಂಡಿದೆ. ಇದರಿಂದ ಪರಿಸರ ಸಂರಕ್ಷಣೆ ಹಾಗೂ ಮುಂಬರುವ ಪೀಳಿಗೆಯ ಹಿತದೃಷ್ಟಿಯಿಂದ ಇದನ್ನು ಜಾರಿಗೆ ತರಬೇಕೆಂದು ಸಲಹೆ ನೀಡಿದ್ದಾರೆ.
ಒಕ್ಕಲೆಬ್ಬಿಸುವುದು ಬೇಡ..!
ಅಲ್ಲದೆ ಇಲ್ಲಿನ ಜನರನ್ನು ಒಕ್ಕಲೆಬ್ಬಿಸುವುದು ಬೇಡ, ಈ ಎರಡೂ ಗ್ರಾಮ ಪಂಚಾಯತಿಗಳ ಅಡಿಗೆ ಬರುವ 24 ಗ್ರಾಮಗಳ ಜನರಿಗೆ ಸೇರಿರುವ ಸುಮಾರು 10 ಸಾವಿರ ಎಕರೆಯಷ್ಟು ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಟೌನ್‌ಶಿಫ್ ನಿರ್ಮಿಸಲು ರಾಜ್ಯ ಸರ್ಕಾರ ಹೊರಟಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಅಲ್ಲದೆ ಈ ಯೋಜನೆಯನ್ನು ಮಾಡಲು ಮುಂದಾದರೆ ಇಲ್ಲಿನ ಎಲ್ಲ ಗ್ರಾಮಗಳ ಸಾವಿರಾರು ರೈತರಿಗೆ ತೊಂದರೆಯಾಗಲಿದ್ದು, ಹೀಗಾಗಿ ಅವರನ್ನು ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸುವುದು ತರವಲ್ಲ. ಅದಕ್ಕಾಗಿ ಈ ಯೋಜನೆಯನ್ನು ಕೈಗೊಳ್ಳಬೇಡಿ ಎಂದು ಕಿವಿ ಮಾತು ಹೇಳಿದ್ದಾರೆ.
ಪರಿಸರಕ್ಕೆ ದೊಡ್ಡ ಪೆಟ್ಟು..
ಅಲ್ಲದೆ ಈ ಯೋಜನೆಯ ವಿರುದ್ಧ ಈಗಾಗಲೇ ರೈತರು ಅಸಮಾಧಾನಿತರಾಗಿದ್ದಾರೆ, ಪ್ರತಿಭಟನೆಗೂ ಮುಂದಾಗಿದ್ದಾರೆ. ಮುಖ್ಯವಾಗಿ ಈ ಪ್ರದೇಶದಲ್ಲಿ ಅಧಿಕವಾಗಿ ಕಡು ಬಡ ರೈತರಿದ್ದಾರೆ. ಅವರು ತಮ್ಮ ಜೀವನ ನಿರ್ವಹಣೆಗಾಗಿ ಹೈನುಗಾರಿಕೆ, ರೇಷ್ಮೆ ತೋಟಗಾರಿಕೆ, ಕೃಷಿಯನ್ನು ಅವಲಂಬಿಸಿಕೊಂಡಿದ್ದಾರೆ ಅಲ್ಲದೆ ಈ ಭಾಗದಲ್ಲಿ ಲಕ್ಷಾಂತರ ಮರ – ಗಿಡಗಳನ್ನು ಬೆಳೆಸಲಾಗಿದೆ. ಈ ಪ್ರದೇಶವನ್ನು ಸ್ವಾಧೀನಪಡಿಸಿಕೊಳ್ಳುವುದರಿಂದ ಸಾವಿರಾರು ಜನ ಉದ್ಯೋಗಗಳನ್ನು ಕಳೆದುಕೊಳ್ಳುತ್ತಾರೆ, ಜೊತೆಗೆ ಪರಿಸರ ಹಾನಿಯಾಗುತ್ತದೆ. ಈ ಎಲ್ಲ ಕಾರಣಗಳಿಗಾಗಿ ಯಾವುದೇ ಕಾರಣಕ್ಕೂ ಈ ಯೋಜನೆಗೆ ಸರ್ಕಾರ ಕೈ ಹಾಕಬಾರದು ಎಂದು ಅವರು ಸಿದ್ದರಾಮಯ್ಯ ಅವರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.



