ಸಚಿವ ಪ್ರಿಯಾಂಕ್ ಖರ್ಗೆ ಅವರು ಆರ್‌ಎಸ್‌ಎಸ್ ವಿರುದ್ಧ ಮತ್ತೆ ಕಿಡಿಕಾರಿದ್ದಾರೆ. ದಲಿತ ಸಂಘಟನೆಗಳಿಗೆ ನಾನು ಪ್ರಾಯೋಜಕನೆಂದುಕೊಳ್ಳಿ, ಆದರೆ ಆರ್‌ಎಸ್‌ಎಸ್‌ಗೆ ಯಾರಿದ್ದಾರೆ? ಅವರಿಗೆ ಹಣ ಎಲ್ಲಿಂದ ಬರುತ್ತದೆ? ಎಂದು ಸವಾಲು ಹಾಕಿದರು. ನೋಂದಣಿ ಇಲ್ಲದ ಸಂಸ್ಥೆಯಾಗಿರುವ ಆರ್‌ಎಸ್‌ಎಸ್ ತನ್ನ ಹಣದ ಮೂಲವನ್ನು ಸಾರ್ವಜನಿಕವಾಗಿ ಹೇಳಲಿ ಎಂದು ಅವರು ಒತ್ತಾಯಿಸಿದರು.
ಕಲ್ಲು ತೂರಾಟ ಪ್ರಕರಣ ವಾಪಸ್ ಪಡೆದ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪ್ರಿಯಾಂಕ್, ಯಾವ ಕಾನೂನುಬಾಹಿರ ಸಲಹೆ ನೀಡಿಲ್ಲ. ಬೊಮ್ಮಾಯಿ ಗೃಹ ಸಚಿವರಾಗಿದ್ದಾಗ ಮಂಗಳೂರು ಭೇಟಿ ವೇಳೆ ಕೆಲವು ಸಂಘಟನೆಗಳೊಂದಿಗೆ ಮಾತುಕತೆ ನಡೆಸಿದ್ದರು. ಆಗ ಅವರಿಗೆ ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದರು. ಈಗ ಹಿಟ್ ಅಂಡ್ ರನ್ ರಾಜಕೀಯ ಮಾಡಬೇಡಿ ಎಂದು ಹೇಳಿದರು.
ಆರ್‌ಎಸ್‌ಎಸ್ ವಿರುದ್ಧ ನೇರ ಸವಾಲು ಹಾಕಿದ ಪ್ರಿಯಾಂಕ್, ನಮ್ಮ ವೈಯಕ್ತಿಕ ವಿಚಾರಗಳಲ್ಲಿ ಮಾತನಾಡುತ್ತಾರೆ, ನಮ್ಮ ಕುಟುಂಬಕ್ಕೆ ಬೆದರಿಕೆ ಹಾಕುತ್ತಾರೆ. ಮೊದಲು ನಿಮ್ಮ ಸಂಘಟನೆಯ ದಾಖಲೆ ತೋರಿಸಿ, ಅದು ಅಧಿಕೃತ ಸಂಸ್ಥೆ ಎಂದು ಸಾಬೀತು ಮಾಡಿ. ಆಗ ನಾವು ಉತ್ತರಿಸುತ್ತೇವೆ ಎಂದು ಹೇಳಿದರು.
ಬಿಎಸ್ ಯಡಿಯೂರಪ್ಪ ಮತ್ತು ಅನಂತ್ ಕುಮಾರ್ ಸಂಭಾಷಣೆಯ ವಿಡಿಯೋ ವಿವಾದದ ಬಗ್ಗೆ ಮಾತನಾಡಿದ ಪ್ರಿಯಾಂಕ್, ಅನಂತ್ ಕುಮಾರ್ ಅವರ ಪುತ್ರಿ ಟ್ವೀಟ್ ಮಾಡಿದ್ದಾರೆ. ಅವರು ವಕೀಲರಾಗಿದ್ದರೆ ಇರಬಹುದು, ಆದರೆ ವಿಡಿಯೋದಲ್ಲಿ ಧ್ವನಿ ಅವರದೇ ಎಂದು ಎಫ್‌ಎಸ್‌ಎಲ್ ರಿಪೋರ್ಟ್ ಹೇಳುತ್ತದೆ. ಅನಂತ್ ಕುಮಾರ್ ಕಲಬುರಗಿಗೆ ಬಂದಾಗ ನನ್ನ ಬಗ್ಗೆ ಏನು ಹೇಳಿದ್ದಾರೆ ಎಂಬುದೂ ಜನರಿಗೆ ಗೊತ್ತಿದೆ. ಅವರ ಕುಟುಂಬದೊಂದಿಗೆ ಬಿಜೆಪಿ ಹೇಗೆ ವರ್ತಿಸಿದೆ ಎಂಬುದರ ಬಗ್ಗೆ ಜನರೇ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

