ಕೋವಿಡ್-೧೯ (COVID-19) ಸಾಂಕ್ರಾಮಿಕದ ಪ್ರಭಾವ ಇನ್ನೂ ಮರೆಯಾಗಿಲ್ಲ. ಈ ನಡುವೆಯೇ ಇದೀಗ ಮತ್ತೊಂದು ಡೆಡ್ಲಿ ವೈರಸ್ ಇಡೀ ವಿಶ್ವದ ನಿದ್ದೆ ಕೆಡಿಸಿದೆ. ಆಫ್ರಿಕಾಗೆ ಮಾತ್ರ ಸೀಮಿತವಾಗಿದ್ದ ಎಂಪಾಕ್ಸ್ (mpox virus) ಅಥವಾ ಮಂಕಿಪಾಕ್ಸ್ ಸೋಂಕು ಇದೀಗ ಏಷ್ಯಾ ಖಂಡಕ್ಕೂ ಕಾಲಿಟ್ಟಿದೆ. ನೆರೆಯ ರಾಷ್ಟ್ರ ಪಾಕಿಸ್ತಾನದಲ್ಲಿ ಮಂಕಿಪಾಕ್ಸ್ ಸೋಂಕು ಪತ್ತೆಯಾಗಿರುವುದು ಸದ್ಯ ಭಾರತ (INDIA)ಕ್ಕೆ ಆತಂಕವನ್ನು ತಂದೊಡ್ಡಿದೆ. ಕೊರೊನಾ ವೈರಸ್‌ಗಿಂತಲೂ ಮಂಕಿಪಾಕ್ಸ್ ನಿಧಾನವಾಗಿ ಹರಡುತ್ತಿದ್ದು, ಪ್ರಕರಣಗಳು ಹೆಚ್ಚಾದಷ್ಟು ಮಾರಕವಾಗಬಹುದು. ಮಂಕಿಪಾಕ್ಸ್ ವೈರಸ್ ಎಲ್ಲೆಡೆ ಹಬ್ಬುತ್ತಿದ್ದು, ಭಾರತದಲ್ಲಿ ಹೈಅಲರ್ಟ್ ಘೋಷಿಸಲಾಗಿದೆ.
ನೆರೆ-ಹೊರೆಯ ದೇಶಗಳಲ್ಲಿ ಮಂಕಿಪಾಕ್ಸ್ (monkeypox) ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸುವಂತೆ ಕೇಂದ್ರ ಆರೋಗ್ಯ ಸಚಿವಾಲಯ ಸೂಚನೆ ನೀಡಿದೆ. ಅದರಲ್ಲೂ ಮುಖ್ಯವಾಗಿ ಬಾಂಗ್ಲಾದೇಶ ಮತ್ತು ಪಾಕಿಸ್ತಾನ ಗಡಿಯಲ್ಲಿರುವ ಚೆಕ್ಪೋಸ್ಟ್ಗಳಲ್ಲಿ ಹೆಚ್ಚು ಜಾಗರೂಕತೆ ವಹಿಸುವಂತೆ ಅಧಿಕಾರಿಗಳಿಗೆ ಕೇಂದ್ರ ಸರ್ಕಾರ ತಿಳಿಸಿದೆ. ವಿದೇಶಗಳಿಂದ ಬರುವ ಪ್ರಯಾಣಿಕರಲ್ಲಿ ಸೋಂಕಿನ ಲಕ್ಷಣಗಳಿವೆಯೇ ಎಂಬ ಬಗ್ಗೆ ಏರ್ಪೋರ್ಟ್ಗಳಲ್ಲಿ ತೀವ್ರ ನಿಗಾ ವಹಿಸಲಾಗಿದೆ. ಈ ಮಧ್ಯೆ ಎಂಪಾಕ್ಸ್ ಜಾಗತಿಕವಾಗಿ ವ್ಯಾಪಕವಾಗಿ ಹರಡುತ್ತಿದ್ದು, ವಿಶ್ವ ಆರೋಗ್ಯ ಸಂಸ್ಥೆ ಆರೋಗ್ಯ ತುರ್ತುಸ್ಥಿತಿಯನ್ನು ಈ ಹಿಂದೆ ೨೦೨೨ರಲ್ಲೂ ಡಬ್ಲೂಎಚ್‌ಒ ಇದೇ ರೀತಿ ತುರ್ತು ಸ್ಥಿತಿಯನ್ನು ಘೋಷಿಸಿತ್ತು.
೨೦೨೨ರಿಂದ ೧೧೬ ದೇಶಗಳಲ್ಲಿ ಜಾಗತಿಕವಾಗಿ ೯೯ ಸಾವಿರದ ೧೬೬ ಮಂಕಿಪಾಕ್ಸ್ ಪ್ರಕರಣಗಳು ದೃಢಪಟ್ಟಿದ್ದು, ೨೦೮ ಮಂದಿ ಮಾರಕ ಸೋಂಕಿಗೆ ಬಲಿಯಾಗಿದ್ದರು. ಪ್ರಸಕ್ತ ವರ್ಷ ಎಂಪಾಕ್ಸ್ ಪ್ರಕರಣಗಳು ಮತ್ತು ಸಾವಿನ ಸಂಖ್ಯೆ ಗಮನಾರ್ಹವಾಗಿ ಹೆಚ್ಚಾಗಿದೆ. ಈ ವರ್ಷ ಒಟಟ್ಟು ೧೫ ಸಾವಿರದದ ೬೦೦ ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಈವರೆಗೂ ೫೩೭ ಮಂದಿ ಡೆಡ್ಲಿ ವೈರಸ್‌ಗೆ ಬಲಿಯಾಗಿದ್ದಾರೆ. ನೆರೆಯ ರಾಷ್ಟ್ರ ಪಾಕಿಸ್ತಾನದಲ್ಲಿ ಮಂಕಿಪಾಕ್ಸ್ ಸೋಂಕು ಪತ್ತೆಯಾಗಿರುವುದು ಸಾಮಾನ್ಯವಾಗಿ ಭಾರತದಲ್ಲಿ ಆತಂಕ ಮೂಡಿಸಿದೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಉದವರೆಗೂ ನಾಲ್ವರಲ್ಲಿ ಸೋಂಕು ದೃಢಪಟ್ಟಿದೆ.
ಮಂಕಿಪಾಕ್ಸ್ (monkeypox) ಎಂದರೇನು..?
ಮಂಕಿಪಾಕ್ಸ್ ವೈರಸ್ ಸಿಡುಬಿಗೆ ಕಾರಣವಾಗುವ ವೈರಾಣುವಿನ ವರ್ಗಕ್ಕೆ ಸೇರಿದ್ದಾಗಿದೆ. ೧೯೫೮ರಲ್ಲಿ ಮಂಕಿಪಾಕ್ಸ್ ಮೊದಲ ಬಾರಿಗೆ ಪತ್ತೆಯಾಯಿತು. ಈ ವೈರಾಣುವಿನ ಮೂಲ ಯಾವುದು ಎಂಬುದು ಈವರೆಗೆ ಪತ್ತೆಯಾಗಿಲ್ಲ. ೧೯೭೦ರಲ್ಲಿ ಮನುಷ್ಯರಲ್ಲಿ ಮೊದಲಿಗೆ ಮಂಕಿಪಾಕ್ಸ್ ಸೋಂಕು ಕಾಣಿಸಿಕೊಂಡಿತ್ತು. ೨೦೨೨ರಲ್ಲಿ ಮಧ್ಯ ಮತ್ತು ಪಶ್ಚಿಮ ಆಫ್ರಿಕಾದ ಹಲವು ದೇಶಗಳಲ್ಲಿ ಈ ಮಂಕಿಪಾಕ್ಸ್ ರೋಗ ಕಾಣಿಸಿಕೊಂಡಿತ್ತು. ೨೦೨೨ರವರೆಗೆ ಪತ್ತೆಯಾದ ಮಂಕಿಪಾಕ್ಸ್ನ ಬಹುತೇಕ ಪ್ರಕರಣಗಳು ಆಫ್ರಿಕಾದಿಂದ ಬಂದ ಪ್ರಯಾಣಿಕರಲ್ಲಿಯೇ ಕಾಣಿಸಿಕೊಂಡಿದ್ದವು.
ಎಂಪಾಕ್ಸ್ ಗುಣಲಕ್ಷಣಗಳೇನು..?
– ಜ್ವರ
– ತೀವ್ರವಾದ ತಲೆನೋವು
– ದುಗ್ಧರಸ ಗ್ರಂಥಿಗಳಲ್ಲಿ ಊತ
– ಬೆನ್ನು ನೋವು
– ಸ್ನಾಯು ನೋವು
– ತೀವ್ರತರ ನಿತ್ರಾಣ
– ಮುಖ, ಕೈ, ಕಾಲುಗಳು, ಹಸ್ತ, ಪಾದಗಳಲ್ಲಿ ದುದ್ದುಗಳು
ಸೋಂಕು ಹರಡುವುದು ಹೇಗೆ?
– ಸೋಂಕು ತಗುಲಿದ ಪ್ರಾಣಿಗಳ ಜೊತೆ ನೇರ ಸಂಪರ್ಕ ಹೊಂದುವ ಮನುಷ್ಯರಿಗೆ ರೋಗ ಹರಡುತ್ತದೆ
– ರೋಗಕಾರಕ ಪ್ರಾಣಿಗಳ ರಕ್ತ, ಚರ್ಮ, ಗಾಯದಿಂದ ಸೋಂಕು ಹರಡುತ್ತದೆ
– ಸೋಂಕು ತಗುಲಿರುವ ಪ್ರಾಣಿಗಳ ಮಾಂಸ ಸೇವನೆಯಿಂದ ಸೋಂಕು ಹರಡುತ್ತದೆ
– ಸೋಂಕಿತ ವ್ಯಕ್ತಿಯ ಉಸಿರಾಟದಿಂದ ಹೊರಬೀಳುವ ಕಣಗಳಿಂದ ಸೋಂಕು ಹರಡುತ್ತದೆ
– ಸೋಂಕಿತನ ಚರ್ಮದ ಗಾಯದಲ್ಲಿನ ಕೀವಿನಿಂದ ಸೋಂಕು ಪ್ರಸರಣ
– ಹೊಕ್ಕುಳಬಳ್ಳಿಯ ಮೂಲಕ ತಾಯಿಯಿಂದ ಭ್ರೂಣಕ್ಕೆ ಸೋಂಕು ಪ್ರಸರಣ
– ಪ್ರಸವದ ವೇಳೆ ಅಥವಾ ಪ್ರಸವವಾದ ನಂತರ ನಿಕಟ ಸಂಪರ್ಕದಿAದ ಸೋಂಕು ಹರಡುತ್ತದೆ
ಸೋಂಕು ತಡೆಗಟ್ಟುವುದು ಹೇಗೆ..?
– ಚರ್ಮದಲ್ಲಿ ದುದ್ದು ಕಾಣಿಸಿಕೊಂಡವರಿಂದ ಅಂತರ ಕಾಯ್ದುಕೊಳ್ಳುವುದು
– ಸೋಂಕಿತರನ್ನು ಆಲಂಗಿಸಿಕೊಳ್ಳಬೇಡಿ, ಲೈಂಗಿಕ ಸಂಪರ್ಕ ಮಾಡಬೇಡಿ
– ಸೋಂಕಿತರೊಂದಿಗೆ ಆಹಾರ ಸೇವನೆ, ಬಟ್ಟಲು, ಲೋಟ ಹಂಚಿಕೊಳ್ಳದಿರುವುದು
– ಸೋಂಕಿತರು ಬಳಸಿದ ಬಟ್ಟೆ, ಟವೆಲ್, ಹೊದಿಕೆಯನ್ನು ಮುಟ್ಟದಿರುವುದು
– ಸೋಂಕು ತಗುಲಿದ ಪ್ರಾಣಿಗಳನ್ನು ಕೈಯಿಂದ ಮುಟ್ಟದಿರುವುದು
– ಸೋಂಕಿತರಿಂದ ಸಾಧ್ಯವಾದಷ್ಟು ಪ್ರತ್ಯೇಕವಾಗಿ ಇರಬೇಕು