ಬೆಂಗಳೂರು: ಮಾಜಿ ಸಚಿವ ಡಿ.ಕೆ ಶಿವಕುಮಾರ್ ಹಾಕಿರುವ ಸವಾಲನ್ನು ನಾನು ಸಂತೋಷದಿಂದ ಸ್ವೀಕರಿಸುತ್ತೇನೆ, ನಾನೂ ಸಹ 4 ದಶಕಗಳಿಂದ ರಾಜಕೀಯ ನಡೆಸಿಕೊಂಡು ಬಂದಿರುವೆ ಅಂತ ಅನರ್ಹ ಶಾಸಕ ಎಂಟಿಬಿ ನಾಗರಾಜ್ ತಿರುಗೇಟು ನೀಡಿದ್ದಾರೆ.
ರಾಜ್ಯ ಬಿಟ್ಟು ಇದೀಗ ರಾಜಧಾನಿಗೆ ಮರಳಿರೋ ಹೊಸಕೋಟೆಯ ಎಂಟಿಬಿ ನಾಗರಾಜ್, ತಮ್ಮ ಅನರ್ಹತೆ ಕುರಿತು ಸ್ಪೀಕರ್ ನೀಡಿರುವ ಆದೇಶ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸದನದಲ್ಲಿ ಡಿ.ಕೆ ಶಿವಕುಮಾರ್ ತಮ್ಮನ್ನು ರಣರಂಗದಲ್ಲಿ ಭೇಟಿಯಾಗುತ್ತೇನೆ ಅಂತ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿದ ಎಂಟಿಬಿ, ನಾನೂ ಕೂಡ 40 ವರ್ಷಗಳ ಕಾಲ ರಾಜಕೀಯದಲ್ಲಿದ್ದೇನೆ. ಹೋರಾಟದ ಹಿನ್ನೆಲೆಯಲ್ಲಿ ಬಂದಿರುವ ನಾನು 3 ಬಾರಿ ಶಾಸಕನಾಗಿದ್ದೇನೆ. ಡಿಕೆಶಿ ಹಾಕಿರುವ ಈ ಸವಾಲನ್ನು ನಾನು ಸಂತೋಷದಿಂದ ಸ್ವೀಕರಿಸುತ್ತೇನೆ ಅಂತ ಎಂಟಿಬಿ ನಾಗರಾಜ್ ಹೇಳಿದ್ದಾರೆ.
ಇನ್ನು ತಮ್ಮ ಮೇಲೆ ಕಾಂಗ್ರೆಸ್ ನಾಯಕರು ಮಾಡಿರುವ ಆರೋಪಗಳ ಕುರಿತು ಪ್ರತಿಕ್ರಿಯಿಸಿರೋ ಎಂಟಿಬಿ ನಾಗರಾಜ್, ಯಾವುದೇ ಆಮಿಷಗಳಿಗೆ ನಾವು ಬಲಿಯಾಗಿಲ್ಲ. ನಾವೆಲ್ಲಾ ಅತೃಪ್ತರು ಹಣವಂತರು ಆಸ್ತಿವಂತರು. ಹೀಗಿದ್ದರೂ ನಾವು ರಾಜೀನಾಮೆ ನೀಡಿರೋದರ ಹಿಂದೆ ನಾನಾ ಕಾರಣಗಳಿವೆ . ಮೈತ್ರಿ ಸರ್ಕಾರದಲ್ಲಿ ಎಲ್ಲಾ ಶಾಸಕರನ್ನು ಸಮನಾಗಿ ಕಂಡು ಆಡಳಿತ ನಡೆಸಿದ್ರೆ ರಾಜೀನಾಮೆ ನೀಡುತ್ತಿರಲಿಲ್ಲ. ಬೆಂಗಳೂರು ಅಭಿವೃದ್ಧಿಯಾಗಿಲ್ಲ ಅನ್ನೋದಕ್ಕೆ ನಾವು ರಾಜೀನಾಮೆ ನೀಡಿ ಹೊರನಡೆದೆವು ಅಂತ ಎಂಟಿಬಿ ನಾಗರಾಜ್ ಇದೇ ವೇಳೆ ಸ್ಪಷ್ಟನೆ ನೀಡಿದ್ರು.