Political News: ಪರ-ವಿರೋಧದ ಹಲವಾರು ಪ್ರತಿಭಟನೆಗಳ ನಡುವೆಯೂ ಅಂತಿಮವಾಗಿ ರಾಜ್ಯ ಸರ್ಕಾರವು ಒಳ ಮೀಸಲಾತಿ ಹೋರಾಟಗಾರರಿಗೆ ಸಿಹಿ ಸುದ್ದಿ ನೀಡಲು ಸಿದ್ದವಾಗಿದೆ. ಈ ಕುರಿತು ಸರ್ಕಾರ ನೇಮಿಸಲಾಗಿರುವ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ನೇತೃತ್ವದ ಆಯೋಗದ ವರದಿ ಬಂದ ಬಳಿಕವೇ ಇದರ ಕಾರ್ಯಗಳಿಗೆ ಇನ್ನಷ್ಟು ವೇಗ ಬರಲಿದೆ. ಅಲ್ಲದೆ ಈ ಆಯೋಗದ ವರದಿಯ ಬಳಿಕ ಒಳ ಮೀಸಲಾತಿ ಜಾರಿಯಾಗುವವರೆಗೆ ಯಾವುದೇ ಬಡ್ತಿ ಸೇರಿ ಇನ್ನಿತರ ಪ್ರಕ್ರಿಯೆಗಳನ್ನು ನಡೆಸದಿರಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ನಮ್ಮ ಪ್ರಣಾಳಿಕೆಯಲ್ಲಿಯೂ ಇದೆ..
ಇನ್ನೂ ಈ ಕುರಿತು ಮಾತನಾಡಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಪರಿಶಿಷ್ಟ ಜಾತಿಗೆ ಸಂಬಂಧಿಸಿದ ಒಳ ಮೀಸಲಾತಿ ಜಾರಿಗೊಳಿಸಲು ನಮ್ಮ ಸರಕಾರ ಬದ್ಧವಾಗಿದೆ. ಅಲ್ಲದೆ ಈಗಾಗಲೇ ನಮ್ಮ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿಯೂ ಇದರ ಬಗ್ಗೆ ನಾವು ಸಮುದಾಯಕ್ಕೆ ಭರವಸೆ ನೀಡಿದ್ದೇವು. ಇದರ ಬಗ್ಗೆ ಎಂಪೆರಿಕಲ್ ಡೇಟಾ ನಿರ್ಧಿಷ್ಟವಾದ ಅಭಿಪ್ರಾಯ ಬರುವ ಬಗ್ಗೆ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರು ಸಭೆಯಲ್ಲಿ ತಿಳಿಸಿದ್ದಾರೆ. ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿಯು ತನ್ನ ಮಧ್ಯಂತರ ವರದಿಯನ್ನು ಒಂದು ವಾರದಲ್ಲಿ ಸಲ್ಲಿಸುವುದಾಗಿ ತಿಳಿಸಿದೆ. ಈ ವರದಿ ಸಲ್ಲಿಕೆ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿಯನ್ನು ಜಾರಿಗೆ ತರಲು ಕ್ರಮ ಕೈಗೊಳ್ಳಲಿದ್ದಾರೆಂದು ಅವರು ಹೇಳಿದ್ದಾರೆ.
ಒಳ ಮೀಸಲಾತಿ ಜಾರಿ ತನಕ ಬಡ್ತಿ, ನೇಮಕಾತಿಗೆ ಬ್ರೇಕ್..!
ಅಲ್ಲದೆ ಈ ಒಳಮೀಸಲಾತಿ ಜಾರಿಗಾಗಿ ರಾಜ್ಯ ಸರ್ಕಾರಕ್ಕೆ ಹಾಗೂ ಮುಖ್ಯಮಂತ್ರಿಗಳಿಗೆ ಅಸಕ್ತಿ ಇದೆ. ಈಗಾಗಲೇ ಅವರ ಅಧ್ಯಕ್ಷತೆಯಲ್ಲಿ ನಾವೆಲ್ಲ ಸೇರಿ ಸಭೆಯನ್ನು ನಡೆಸಿದ್ದೇವೆ. ಈ ವೇಳೆ ನಾಗಮೋಹನ್ ದಾಸ್ ಅವರ ನೇತೃತ್ವದ ಸಮಿತಿಯು ತಾನು ಕೈಗೊಂಡಿರುವ ಪ್ರಗತಿಯ ಬಗ್ಗೆ ಸಭೆಯ ಗಮನಕ್ಕೆ ತಂದಿದೆ. ಶೀಘ್ರದಲ್ಲೇ ವರದಿಯನ್ನು ನೀಡುವಂತೆ ಪ್ರಸ್ತಾಪ ಇಡಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ.ಮಹದೇವಪ್ಪ ತಿಳಿಸಿದ್ದಾರೆ.
ಅಂದಹಾಗೆ ಸಬೆಯಲ್ಲಿ ನಾವು ದತ್ತಾಂಶ ಅನ್ವಯದ ಮೇಲೆ ಸುದೀರ್ಘ ಚರ್ಚೆ ಮಾಡಿದ್ದೇವೆ. ನಾಗಮೋಹನ್ ದಾಸ್ ಅವರು ವಾರದೊಳಗೆ ಮಧ್ಯಂತರ ವರದಿ ಸಲ್ಲಿಸಲಿದ್ದಾರೆ. ಆ ವರದಿ ಆಧಾರದ ಮೇಲೆ ಒಳಮೀಸಲಾತಿ ಜಾರಿಯ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇವೆ. ಇನ್ನೂ ಎಂಪೆರಿಕಲ್ ಡೇಟಾ ಸೇರಿದಂತೆ ಎಲ್ಲ ವಿಚಾರಗಳನ್ನು ಚರ್ಚೆ ಮಾಡಿ, ಅವರು ನಮ್ಮ ಗಮನಕ್ಕೆ ತಂದಿದ್ದಾರೆ. ಅಲ್ಲದೆ ಒಳ ಮೀಸಲಾತಿ ಜಾರಿ ಮಾಡಬೇಕು ಎಂಬುದು ನಮ್ಮ ಸರಕಾರದ ಬದ್ಧತೆ. ನಮಗೆ ಯಾವುದೇ ಸಮುದಾಯವೂ ಇಷ್ಟೇ ಶೇಕಡಾ ಮೀಸಲಾತಿ ನೀಡುವಂತೆ ಕೇಳಿಕೊಂಡಿಲ್ಲ. ಆದರೆ ಇದಕ್ಕೆ ಸಂಬಂಧಿಸಿದ್ದಂತೆ ಬಹುತೇಕ ಎಲ್ಲಾ ಇಲಾಖೆಗಳು ತಮ್ಮ ದತ್ತಾಂಶ ನೀಡಿವೆ. ಈ ವಿಚಾರದಲ್ಲಿ ಸುಪ್ರೀಂಕೋರ್ಟ್ ಮಾರ್ಗಸೂಚ ಅನುಸರಿಸಿ ಮುಂದಿನ ಹೆಜ್ಜೆ ಇಡಲಿದ್ದೇವೆ. ಆದರೆ ಒಳಮೀಸಲಾತಿ ಜಾರಿ ಆಗುವವರೆಗೂ ಬ್ಯಾಕ್‌ಲಾಗ್ ಹುದ್ದೆ, ಮುಂಬಡ್ತಿ, ನೇಮಕಾತಿ ಯಾವುದನ್ನೂ ಮಾಡುವುದಿಲ್ಲ ಎಂದು ಮಹದೇವಪ್ಪ ಸ್ಪಷ್ಟಪಡಿಸಿದ್ದಾರೆ.
ಸಚಿವರಿಗೆ ಸಿಎಂ ಸಿದ್ದರಾಮಯ್ಯ ಸೂಚನೆ ಏನು..?
ಇನ್ನೂ ಪರಿಶಿಷ್ಟ ಜಾತಿಯಲ್ಲಿನ ಒಳ ಮೀಸಲಾತಿಗೆ ಜಾರಿಯ ಕುರಿತು ತಮ್ಮ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮುದಾಯದ ಸಚಿವರಿಗೆ ಹಾಗೂ ಮುಖಂಡರಿಗೆ ಕೆಲವು ಮಹತ್ವದ ಸೂಚನೆಗಳನ್ನು ನೀಡಿದ್ದಾರೆ. ನಾವು ಒಳ ಮೀಸಲಾತಿ ಅನುಷ್ಠಾನಕ್ಕೆ ಸಿದ್ದರಾಗಿದ್ದೇವೆ. ಆದರೆ ಇದರ ಮುಂದಿನ ಬೆಳವಣಿಗೆಗಳನ್ನು ಹಾಗೂ ಪರಿಣಾಮಗಳನ್ನು ತಡೆಯುವ ನಿಟ್ಟಿನಲ್ಲಿ ಸನ್ನದ್ಧರಾಗುವಂತೆ ತಿಳಿಸಿದ್ದಾರೆ. ಪ್ರಮುಖವಾಗಿ ಒಳ ಮೀಸಲಾತಿ ಜಾರಿಯಾದ ಬಳಿಕ ಪರಿಶಿಷ್ಟರಲ್ಲಿನ ಯಾವುದೇ ಪಂಗಡ ಅಸಮಾಧಾನಗೊಂಡರೆ ಆ ಪರಿಸ್ಥಿತಿಯನ್ನು ನಿಭಾಯಿಸಬೇಕು. ಅಲ್ಲದೆ ಅವರನ್ನು ಶಾಂತಗೊಳಿಸುವ ಹೊಣೆಗಾರಿಕೆಯನ್ನು ಆಯಾ ಸಮುದಾಯದ ಸಚಿವರು ವಹಿಸಿಕೊಳ್ಳಬೇಕು. ಇನ್ನೂ ಈ ಅಸಮಾಧಾನವೇ ಆಕ್ರೋಶವಾಗಿ, ಬಳಿಕ ಹೋರಾಟದ ಸ್ವರೂಪ ಪಡೆದುಕೊಂಡು ಅವರು ಬೀದಿಗಿಳಿಯದಂತೆ ನೋಡಿಕೊಳ್ಳಬೇಕು. ಒಂದು ವೇಳೆ ಹೋರಾಟ ನಡೆಸಿದರೆ ಅವರನ್ನು ತಡೆಯುವುದು ನಿಮ್ಮ ಜವಾಬ್ದಾರಿಯಾಗಿದೆ ಎಂದು ಸಿದ್ದರಾಮಯ್ಯ ತಮ್ಮ ಸಹೋದ್ಯೋಗಿಗಳಿಗೆ ಸೂಚಿಸಿದ್ದಾರೆ. ಅಂದಹಾಗೆ ಮುಂದಿನ ಜನಗಣತಿಯ ವರದಿ ಬಂದ ಬಳಿಕ ಮೀಸಲಾತಿ ಪರಿಷ್ಕರಣೆಗೆ ಅವಕಾಶವಿರುತ್ತದೆ. ಹೀಗಾಗು ಯಾರೂ ಪ್ರತಿಭಟನೆಯ ಹಾದಿ ತುಳಿಯಲು ಅವಕಾಶ ನೀಡಬಾರದು. ಈ ಕುರಿತು ಹೋರಾಟಗಾರರ ಗಮನಕ್ಕೆ ತರುವಂತೆ ಅವರು ಸಚಿವರಿಗೆ ತಿಳಿಸಿದ್ದಾರೆ.
ಒಟ್ನಲ್ಲಿ.. ರಾಜ್ಯದಲ್ಲಿ ಹಲವು ವರ್ಷಗಳಿಂದ ಒಳ ಮೀಸಲಾತಿಗಾಗಿ ನಡೆಯುತ್ತಿದ್ದ ಹೋರಾಟಕ್ಕೆ ಬ್ರೇಕ್ ಹಾಕಲು ಸರ್ಕಾರ ಮುಂದಾದಂತೆ ಕಂಡು ಬಂದರೂ ಸಹ ಅದು ಅಂದುಕೊಂಡಷ್ಟು ಸುಲಭವಲ್ಲ. ಯಾಕೆಂದರೆ ಈ ವಿಚಾರದಲ್ಲಿ ಪರ-ವಿರೋಧದ ನಿಲುವುಗಳಿವೆ. ಒಳ ಮೀಸಲು ನೀಡಿದರೆ ನಮಗೆ ಅನ್ಯಾಯವಾಗುತ್ತೆ ಎನ್ನುವ ಪಂಗಡ ಒಂದೆಡೆಯಾದರೆ, ಮೀಸಲಾತಿ ಜಾರಿಯಾದರೆ ನಮಗೆ ನ್ಯಾಯ ಸಿಕ್ಕಂತಾಗುತ್ತದೆ ಎನ್ನುವ ಇನ್ನೊಂದು ಸಮೂಹವಿದೆ. ಇದೆಲ್ಲದರ ನಡುವೆ ಯಾರಿಗೆ ನೀಡಬೇಕು, ಇನ್ಯಾರಿಗೆ ಬಿಡಬೇಕೋ ಎಂಬ ಇಕ್ಕಟ್ಟಿನಲ್ಲಿ ಸರ್ಕಾರ ಸಿಲುಕಿದೆ. ಇದೆಲ್ಲವನ್ನು ನೋಡಿದಾಗ ಅರ್ಹರಿಗೆ ಈ ಮೀಸಲಾತಿಯನ್ನು ನೀಡುವ ಸಲುವಾಗಿಯೇ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ನೇತೃತ್ವದ ಆಯೋಗದ ವರದಿಯ ಮೇಲೆ ಒಳ ಮೀಸಲಾತಿಯ ಭವಿಷ್ಯ ನಿಂತಿರುವುದು ಸುಳ್ಳಲ್ಲ.. ಯಾಕೆಂದರೆ ಇಷ್ಟು ದಿನಗಳ ಕಾಲ ಒಳ ಮೀಸಲು ಜಾರಿಯ ಗೊಂದಲದಲ್ಲಿದ್ದ ಸರ್ಕಾರಕ್ಕೆ ಈ ವರದಿಯು ನೆರವಾಗಬಹುದೆಂಬ ಉದ್ದೇಶ ಸರ್ಕಾರಕ್ಕಿದೆ. ಅದೇನೆ ಇರಲಿ.. ಗಟ್ಟಿ ಧೈರ್ಯ ಮಾಡಿ ಒಳ ಮೀಸಲಾತಿ ಜಾರಿಗಾಗಿ ದಿಟ್ಟ ಹೆಜ್ಜೆ ಇಡುತ್ತಿರುವ ಸಿಎಂ ಸಿದ್ದರಾಮಯ್ಯನವರು ಒಳ ಮೀಸಲು ನೀಡಿ, ಆ ಸಮುದಾಯಗಳ ಮೆಚ್ಚುಗೆಗೆ ಪಾತ್ರವಾಗುತ್ತಾರಾ..? ಅಥವಾ ಮೀಸಲಾತಿಯ ಭರವಸೆ ನೀಡಿ ಇತರ ಸರ್ಕಾರಗಳಂತೆ ದಿನ ದೂಡುತ್ತಾರಾ ಅನ್ನೋದನ್ನ ಕಾದು ನೋಡಬೇಕಿದೆ.