Thursday, November 21, 2024

Latest Posts

Bhopal : ಫಿಲ್ಮಿ ಸ್ಟೈಲ್​ನಲ್ಲಿ ಮ್ಯೂಸಿಯಂಗೆ ಕನ್ನ : ₹15 ಕೋಟಿ ಮೌಲ್ಯದ ಚಿನ್ನದ ಜೊತೆ ಸಿಕ್ಕಿಬಿದ್ದ ಖದೀಮ

- Advertisement -

ಭೋಪಾಲ್​: ಬಾಲಿವುಡ್​ ನಟ ಹೃತಿಕ್​ ರೋಷನ್​ (Hrithik Roshan) ನಟನೆಯ ಧೂಮ್​ 2 (Dhoom 2) ಚಿತ್ರವನ್ನು ನೋಡಿ ಸ್ಫೂರ್ತಿ ಪಡೆದ ಕಳ್ಳನೊಬ್ಬ ಮಧ್ಯಪ್ರದೇಶದ ಭೋಪಾಲ್‌ ವಸ್ತು ಸಂಗ್ರಹಾಲಯ (State Museum in Bhopal)ದಲ್ಲಿ 15 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಕದ್ದು ಸಿಕ್ಕಿ ಬಿದ್ದಿರುವ ಘಟನೆ ನಡೆದಿದೆ. ವಿಶೇಷ ಅಂದರೆ 15 ಕೋಟಿ ಬೆಲೆಬಾಳುವ ಪುರಾತನ ಚಿನ್ನಾಭರಣಗಳನ್ನು ಕಳ್ಳತನ ಮಾಡಿದ ಬಳಿಕ ಕಳ್ಳ ವಸ್ತು ಸಂಗ್ರಹಾಲಯದಲ್ಲೇ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದಾನೆ.

ಹಲವು ಪ್ರಕರಣಗಳಲ್ಲಿ ಭೋಪಾಲ್​ ಪೊಲೀಸರಿಗೆ ಬೇಕಾಗಿದ್ದ ಖತರ್ನಾಕ್ ಕಳ್ಳ ವಿನೋದ್ ಯಾದವ್ ಎಂಬಾತ ಕಳೆದ ಭಾನುವಾರ ಸಂಜೆ ಮಧ್ಯಪ್ರದೇಶ ರಾಜ್ಯ ಸರ್ಕಾರದ ಒಡೆತನದ ಭೋಪಾಲ್ ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡಿದ್ದಾನೆ. ವಸ್ತು ಸಂಗ್ರಹಾಲಯ ಕ್ಲೋಸ್​ ಆಗೋವರೆಗೂ ಆರೋಪಿ ವಿನೋದ್ ಯಾದವ್​ ಮ್ಯೂಸಿಯಂ ಒಳಗಡೆಯೇ ಅವಿತು ಕುಳಿತಿದ್ದ. ಯಾವಾಗ ಮ್ಯೂಸಿಯಂ ಕ್ಲೋಸ್​ ಆಯಿತೋ ವಿನೋದ್ ತನ್ನ ಕರಾಮತ್ತನ್ನು ತೋರಿಸಿದ್ದಾನೆ. ಆದರೆ ಆರೋಪಿ ವಿನೋದ್​ ಯಾದವ್​ ಮಾಲು ಸಮೇತ ಮ್ಯೂಸಿಯಂನಲ್ಲೇ ಸಿಕ್ಕಿ ಬಿದ್ದಿದ್ದಾನೆ.

ಮಧ್ಯಪ್ರದೇಶದ ಭೋಪಾಲ್​ ಮ್ಯೂಸಿಯಂಗೆ ಪ್ರತಿ ಸೋಮವಾರ ರಜೆ ಇರುತ್ತೆ. ಈ ಬಗ್ಗೆ ಮಾಹಿತಿ ಸಂಗ್ರಹಿಸಿ ಸಂಚು ರೂಪಿಸಿದ್ದ ಆರೋಪಿ ವಿನೋದ್ ಭಾನುವಾರ ರಾತ್ರಿ ವಸ್ತು ಸಂಗ್ರಹಾಲಯದಲ್ಲೇ ಉಳಿದಿದ್ದ. ಮೊದಲಿಗೆ ಮ್ಯೂಸಿಯಂನ 2 ಗ್ಯಾಲರಿ ರೂಮ್​ಗಳ ಬೀಗವನ್ನು ಮುರಿದಿದ್ದ ವಿನೋದ್​ ಆ ಕೊಠಡಿಗಳಲ್ಲಿದ್ದ ಅತ್ಯಮೂಲ್ಯ ಚಿನ್ನಾಭರಣಗಳನ್ನ ತಾನು ತಂದಿದ್ದ ಚೀಲಕ್ಕೆ ತುಂಬಿಕೊಂಡಿದ್ದ. ಮಂಗಳವಾರ ಬೆಳಗ್ಗೆ 10.30ಕ್ಕೆ ಮ್ಯೂಸಿಯಂನ ಬಾಗಿಲು ತೆಗೆದ ಸಿಬ್ಬಂದಿ ಗ್ಯಾಲರಿ ರೂಮ್​ಗಳ ಬೀಗ ಮುರಿದಿರುವುದನ್ನ ಗಮನಿಸಿದ್ದಾರೆ. ದಂಗಾಗಿ ಮ್ಯೂಸಿಯಂನ ಸಿಬ್ಬಂದಿ ಒಳಗೆ ಹೋಗಿ ನೋಡಿದ್ರೆ ಅಲ್ಲಿದ್ದ ಬೆಲೆ ಬಾಳುವ ವಸ್ತುಗಳು ನಾಪತ್ತೆಯಾಗಿದ್ದವು.

ಕೂಡಲೇ ಪೊಲೀಸರಿಗೆ ವಿಷಯ ತಿಳಿಸಿದ ಮ್ಯೂಸಿಯಂ ಸಿಬ್ಬಂದಿ ಹುಡುಕಾಟ ನಡೆಸಿದ್ದರು. ಈ ವೇಳೆ ವಸ್ತು ಸಂಗ್ರಹಾಲಯದ ಹಾಲ್‌ನಲ್ಲೇ ಕಳ್ಳ ವಿನೋದ್ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ. ಅಲ್ಲದೆ ಆತನ ಪಕ್ಕದಲ್ಲೇ ದೊಡ್ಡದೊಂದು ಚೀಲ ಇತ್ತು. ಆ ಚೀಲವನ್ನು ತೆಗೆದು ನೋಡಿದರೆ ಅದರಲ್ಲಿ ತುಂಬಾ ಬೆಲೆ ಬಾಳುವ ಪುರಾತನ ಕಾಲದ ಚಿನ್ನಾಭರಣಗಳು, ನಾಣ್ಯಗಳು ಇದ್ದವು.

ಗುಪ್ತಾ ಸಾಮ್ರಾಜ್ಯದಲ್ಲಿ ಬಳಸಲಾಗ್ತಿದ್ದ ಚಿನ್ನದ ನಾಣ್ಯಗಳು, ಬ್ರಿಟಿಷರು ಹಾಗೂ ನವಾಬರ ಕಾಲದ ಚಿನ್ನಾಭರಣಗಳು, ಚಿನ್ನದ ಪಾತ್ರೆ ಸೇರಿದಂತೆ ಹಲವು ಬೆಲೆಬಾಳುವ ಪುರಾತನ ವಸ್ತುಗಳು ಕಳ್ಳನ ಚೀಲದಲ್ಲಿ ಸಿಕ್ಕಿವೆ. ಸದ್ಯ ಖತರ್ನಾಕ್ ಖದೀಮ ವಿನೋದ್​ ಯಾದವ್​ನನ್ನ ಬಂಧಿಸಿರುವ ಭೋಪಾಲ್ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

- Advertisement -

Latest Posts

Don't Miss