ಮೈಸೂರು ನಗರದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಬಯಲು ಮೂತ್ರ ವಿಸರ್ಜನೆ ತಡೆಯಲು ಪಾಲಿಕೆ ವತಿಯಿಂದ ವಿನೂತನ ಕ್ರಮ ಕೈಗೊಳ್ಳಲಾಗಿದೆ. ವಾಣಿ ವಿಲಾಸ ಒಳಚರಂಡಿ ವಿಭಾಗದ ವತಿಯಿಂದ, ನಗರ ಸಬ್ ಅರ್ಬನ್ ಬಸ್ ನಿಲ್ದಾಣದ ಬಳಿಯ ದೊಡ್ಡ ಮೋರಿ ಗೋಡೆಯ ಮೇಲೆ ಸ್ಟೀಲ್ ಮಿರರ್ ಅಳವಡಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಗೋಡೆಗಳಿಗೆ ಮೂತ್ರ ವಿಸರ್ಜನೆ ಮಾಡುವ ಪ್ರವೃತ್ತಿಯನ್ನು ನಿಯಂತ್ರಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಸುಮಾರು 85 ಮೀಟರ್ ಉದ್ದದ ಗೋಡೆಯ ಭಾಗದಲ್ಲಿ ಸ್ಟೀಲ್ ಮಿರರ್ ಕಂಪೌಂಡ್ ಅಳವಡಿಸಲಾಗಿದ್ದು, ಇದನ್ನು ಪ್ರಾಯೋಗಿಕ ಯೋಜನೆಯಾಗಿ ಜಾರಿಗೆ ತರಲಾಗಿದೆ.
ಪಾಲಿಕೆ ಅಧಿಕಾರಿಗಳ ಪ್ರಕಾರ, ಮಿರರ್ ಅಳವಡಿಕೆಯಿಂದ ವ್ಯಕ್ತಿಗಳು ತಮ್ಮ ಪ್ರತಿಬಿಂಬವನ್ನು ನೋಡಿ ಅಸಮಂಜಸ ವರ್ತನೆ ತಪ್ಪಿಸಿಕೊಳ್ಳುವ ಸಾಧ್ಯತೆ ಇದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ. ಸದ್ಯ ಈ ಪ್ರಯೋಗದ ಬಳಿಕ ಆ ಪ್ರದೇಶದಲ್ಲಿ ಬಯಲು ಮೂತ್ರ ವಿಸರ್ಜನೆ ಪ್ರಕರಣಗಳು ಕಡಿಮೆಯಾದವು ಎಂದು ಸ್ಥಳೀಯವಾಗಿ ತಿಳಿದುಬಂದಿದೆ. ಒಟ್ಟಾರೆ, ನಗರ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಪಾಲಿಕೆ ಕೈಗೊಂಡ ಈ ವಿಭಿನ್ನ ಪ್ರಯೋಗ ಇದೀಗ ಗಮನ ಸೆಳೆಯುತ್ತಿದೆ.




