ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಆಲದಕಟ್ಟಿ ಗ್ರಾಮದಲ್ಲಿ ಅತ್ತೆ ಮೇಲೆ ಅಳಿಯನೇ ಚಾಕುವಿನಿಂದ ದಾಳಿ ನಡೆಸಿದ ಆತಂಕಕಾರಿ ಘಟನೆ ಬೆಳಕಿಗೆ ಬಂದಿದೆ. ಅರವಿಂದ ಎಂಬಾತ, ಹುಬ್ಬಳ್ಳಿಯ ಮಂಟೂರ ಗ್ರಾಮದ ನಿವಾಸಿಯಾಗಿದ್ದು, ಸುಮಾರು ಒಂದೂವರೆ ವರ್ಷದ ಹಿಂದೆ ಮಹಾದೇವಿ ಅವರ ಪುತ್ರಿಯನ್ನು ವಿವಾಹವಾಗಿದ್ದ. ದಂಪತಿಗೆ ಎರಡು ತಿಂಗಳ ಹಿಂದೆ ಗಂಡು ಮಗು ಜನಿಸಿದ್ದು, ಈ ನಡುವೆ ಪತ್ನಿ ತವರು ಮನೆಯಲ್ಲಿ ವಾಸವಾಗಿದ್ದರು.
ಈ ಅವಧಿಯಲ್ಲಿ ಅರವಿಂದ ಪದೇಪದೆ ವಿಡಿಯೋ ಕಾಲ್ ಮೂಲಕ ಮಗುವನ್ನು ತೋರಿಸುವಂತೆ ಒತ್ತಾಯಿಸುತ್ತಿದ್ದ ಎಂದು ಆರೋಪಿಸಲಾಗಿದೆ. ದಿನವಿಡೀ ಕರೆ ಮಾಡುವುದು ಬೇಡ, ದಿನಕ್ಕೆ ಒಂದೇ ಬಾರಿ ಸಂಪರ್ಕಿಸು ಎಂದು ಅತ್ತೆ ಮಹಾದೇವಿ ಸಲಹೆ ನೀಡಿದ್ದರಿಂದ ಇಬ್ಬರ ನಡುವೆ ಮಾತಿನ ಚಕಮಕಿ ಉಂಟಾಗಿ, ಆಕ್ರೋಶಗೊಂಡ ಅರವಿಂದ, ಮಹಾದೇವಿ ಅವರ ಮನೆಗೆ ನುಗ್ಗಿ ಚಾಕುವಿನಿಂದ ಹಲ್ಲೆ ನಡೆಸಿ ಸ್ಥಳದಿಂದ ಪರಾರಿಯಾಗಿದ್ದಾನೆ. ಗಂಭೀರವಾಗಿ ಗಾಯಗೊಂಡ ಮಹಾದೇವಿಯನ್ನು ತಕ್ಷಣವೇ ಬಿಮ್ಸ್ ಆಸ್ಪತ್ರೆಗೆ ದಾಖಲಿಸಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಯ ಕುರಿತು ಮಾತನಾಡಿದ ಮಹಾದೇವಿಯ ಪುತ್ರ ಮಲ್ಲಿಕಾರ್ಜುನ, ಅರವಿಂದ ಫೋನ್ ಮೂಲಕ ನಿರಂತರವಾಗಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡುತ್ತಿದ್ದ. ನಂತರ ಪೂರ್ವಯೋಜಿತವಾಗಿ ಮನೆಗೆ ಬಂದು ಚಾಕುವಿನಿಂದ ದಾಳಿ ನಡೆಸಿದ್ದಾನೆ. ಇದೇ ವೇಳೆ ಆರೋಪಿ ಸಾಮಾಜಿಕ ಜಾಲತಾಣದಲ್ಲಿ ʼಇಂದು ಜೈಲು, ನಾಳೆ ಬೇಲ್ʼ ಎಂಬ ರೀತಿಯ ಬೆದರಿಕೆ ಸ್ಟೇಟಸ್ ಹಾಕಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಘಟನೆಯ ಬಳಿಕ ತಕ್ಷಣ ಕ್ರಮ ಕೈಗೊಂಡ ಪೊಲೀಸರು ಅರವಿಂದನನ್ನು ಬಂಧಿಸಿದ್ದಾರೆ. ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ಮುಂದಿನ ತನಿಖೆ ನಡೆಯುತ್ತಿದೆ. ಒಟ್ಟಾರೆ, ಕುಟುಂಬದ ಒಳಜಗಳವೇ ಭೀಕರ ಹಲ್ಲೆಗೆ ಕಾರಣವಾಗಿದ್ದು, ಆಲದಕಟ್ಟಿ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.




