Mysuru News: ಮೈಸೂರು ದಸರಾ ಜಂಬೂಸವಾರಿಯನ್ನು ಈ ಬಾರಿ ಪ್ರಶಾಂತ್ ಎಂಬ ಆನೆ ಹೊರಲಿದ್ದಾನೆ. ಈ ಬಗ್ಗೆ ಸಿಎಂ ಡಿ.ಕೆ.ಶಿವಕುಮಾರ್ ತಮ್ಮ ಎಕ್ಸ್ ಖಾತೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ.
ನಾಡಹಬ್ಬ ಮೈಸೂರು ದಸರೆಯ ಕಿರೀಟಪ್ರಾಯವಾದ ಜಂಬೂಸವಾರಿಯಲ್ಲಿ ಈ ಬಾರಿ ಗಜರಾಜ ‘ಪ್ರಶಾಂತ’ ಚಿನ್ನದ ಅಂಬಾರಿಯನ್ನು ಹೊರಲಿದ್ದಾನೆ. ತಾಯಿ ನಾಡದೇವತೆ ಚಾಮುಂಡೇಶ್ವರಿಯ ಉತ್ಸವ ಮೂರ್ತಿಯನ್ನು ಹೊತ್ತು ಸಾಗುವ ಈ ವೈಭವ ಕೇವಲ ಆಚರಣೆಯಲ್ಲ, ಅದು ಸಮಸ್ತ ಕನ್ನಡಿಗರ ಭಾವನಾತ್ಮಕ ಬೆಸುಗೆ. ವಿಜಯದಶಮಿಯಂದು ಶುಭ ಮುಹೂರ್ತದಲ್ಲಿ ಚಿನ್ನದ ಅಂಬಾರಿಯ ದಿವ್ಯ ಕಾಂತಿಗೆ ಪ್ರಶಾಂತ ಆನೆಯ ಗಾಂಭೀರ್ಯವೂ ಜೊತೆಯಾಗಿ ದಸರೆಯ ಮೆರುಗು ಮುಗಿಲೆತ್ತರಕ್ಕೆ ಏರಲಿದೆ.
ಬರೋಬ್ಬರಿ 750 ಕೆ.ಜಿ. ತೂಕದ ಚಿನ್ನದ ಅಂಬಾರಿಯನ್ನು ಹೊರುವುದು ಬರಿಯ ದೈಹಿಕ ಬಲದ ಪ್ರತೀಕವಲ್ಲ, ಬದಲಾಗಿ ಶತಮಾನಗಳ ಸಾಂಸ್ಕೃತಿಕ ಪರಂಪರೆಯನ್ನು ಹೆಗಲಿಗೇರಿಸಿಕೊಳ್ಳುವ ದೈವಿಕ ಜವಾಬ್ದಾರಿ. ದ್ರೋಣ, ಬಲರಾಮ, ಅರ್ಜುನ, ಅಭಿಮನ್ಯುವಿನಂತಹ ದಿಗ್ಗಜ ಆನೆಗಳು ನಡೆದುಬಂದ ಪರಂಪರೆಯ ರಾಜಮಾರ್ಗದಲ್ಲಿ ಇದೀಗ ಪ್ರಶಾಂತ ತನ್ನ ಹೆಜ್ಜೆ ಇಡುತ್ತಿದ್ದಾನೆ. ತಾಯಿಯನ್ನು ಬೆನ್ನಿಗೇರಿಸಿಕೊಂಡು, ಲಕ್ಷಾಂತರ ಕನ್ನಡಿಗರ ಹರ್ಷೋದ್ಗಾರಗಳ ನಡುವೆ ಸಾಗುವ ಗಜಗಾಂಭೀರ್ಯದ ದೃಶ್ಯ, ಪ್ರತಿಯೊಬ್ಬ ಕನ್ನಡಿಗನ ಎದೆಯಲ್ಲೂ ಹೆಮ್ಮೆಯ ಅಲೆಗಳನ್ನು ಎಬ್ಬಿಸುವುದು ಖಂಡಿತ.
ನಮಗೆ ಇದೊಂದು ಕೇವಲ ಮೆರವಣಿಗೆಯಲ್ಲ, ಕರುನಾಡಿನ ಸಾಂಸ್ಕೃತಿಕ ಅಸ್ಮಿತೆಯ ಹಾಗೂ ಸ್ವಾಭಿಮಾನದ ವಿಜಯೋತ್ಸವ. ಪ್ರಶಾಂತ ಆನೆಯ ಆ ಪ್ರಶಾಂತ ಹಾಗೂ ಗಂಭೀರ ಹೆಜ್ಜೆಗಳಲ್ಲಿ ನಾಡಿನ ಸುಭಿಕ್ಷೆ ಮತ್ತು ಸಮೃದ್ಧಿಯ ಪ್ರಾರ್ಥನೆಯೂ ಅಡಗಿದೆ. ಬನ್ನಿ, ಇತಿಹಾಸದ ಪುಟಗಳಿಗೆ ಸೇರ್ಪಡೆಯಾಗಲಿರುವ ಈ ಅವಿಸ್ಮರಣೀಯ ಸುವರ್ಣ ಕ್ಷಣವನ್ನು ಕಣ್ತುಂಬಿಕೊಳ್ಳೋಣ; ದಸರೆಯ ಮಹಾಸಂಭ್ರಮದಲ್ಲಿ ನಮ್ಮ ನಾಡಭಕ್ತಿಯನ್ನು ಮೆರೆಯೋಣ ಎಂದು ಜಂಬೂ ಸವಾರಿ ಬಗ್ಗೆ ಮಾಹಿತಿ ನೀಡಿರುವ ಸಿಎಂ ದಸರಾ ಬಗ್ಗೆ 1 ಕವಿತೆಯನ್ನೂ ಬರೆದಿದ್ದಾರೆ. ಅದು ಇಂತಿದೆ.
ದಸರಾದ ಪರಂಪರೆ ಎಂದಿಗೂ ಶ್ರೀಮಂತ!
ಅದನ್ನು ಹೆಗಲೇರಿಸಿಕೊಳ್ಳುತ್ತಿದ್ದಾನೆ ಪ್ರಶಾಂತ!
ಮೈಸೂರು ದಸರಾ ಆಗಲಿ ಸದಾ ಜಗದ್ವಿಖ್ಯಾತ!




