National News: ದೇಶದಲ್ಲಿ ತೀವ್ರ ಪರ – ವಿರೋಧದ ಚರ್ಚೆಗೆ ಕಾರಣವಾಗಿರುವ ವಕ್ಫ್ ತಿದ್ದುಪಡಿಯ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ನಡೆದಿದ್ದು, ವಕ್ಫ್ ಆಸ್ತಿಗಳಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು ಸುಪ್ರೀಂಕೋರ್ಟ್ ಇಂದು ಮಧ್ಯಂತರ ಆದೇಶ ನೀಡಿದೆ. ಇದರಿಂದ ವಕ್ಫ್ ಜಾರಿಯ ಉಮೇದಿನಲ್ಲಿದ್ದ ಮೋದಿ ಸರ್ಕಾರಕ್ಕೆ ಆರಂಭಿಕ ಹಿನ್ನಡೆಯಾದಂತಾಗಿದೆ. ಇನ್ನೂ ಇದೇ ವಿಚಾರಕ್ಕೆ ಸಂಬಂಧಿಸಿದ್ದಂತೆ ಕಳೆದೆರಡು ದಿನಗಳಿಂದ ಕೋರ್ಟ್ ಹಲವು ಅರ್ಜಿಗಳ ವಿಚಾರಣೆಯನ್ನು ನಡೆಸಿದೆ. ಪ್ರಮುಖವಾಗಿ ಬುಧವಾರ ಆರಂಭವಾಗಿದ್ದ ವಿಚಾರಣೆಯು ಇಂದೂ ಕೂಡ ನಡೆಯಿತು. ಅದರಲ್ಲಿ ಸುಪ್ರೀಂಕೋರ್ಟ್ ಮುಖ್ಯ ನಾಯಮೂರ್ತಿ ಸಂಜೀವ್ ಖನ್ನಾ ಹಾಗೂ ಸಂಜಯ್ ಕುಮಾರ್ ಹಾಗೂ ಕೆ.ವಿ. ವಿಶ್ವನಾಥನ್ ಅವರಿದ್ದ ತ್ರಿಸದಸ್ಯ ಪೀಠವು ವಕ್ಫ್ ಅರ್ಜಿಗಳ ಕುರಿತು ಅಭಿಪ್ರಾಯಗಳನ್ನು ಆಲಿಸಿತು.
ಕೇಂದ್ರಕ್ಕೆ ಒಂದು ವಾರಗಳ ಕಾಲಾವಕಾಶ..!
ಇನ್ನೂ ಬುಧವಾರವಷ್ಟೇ ವಕ್ಫ್ ಮಂಡಳಿಗೆ ಮುಸ್ಲಿಮೇತರರ ಸೇರ್ಪಡೆಯ ಬಗ್ಗೆ ಪ್ರಶ್ನೆ ಮಾಡಿದ್ದ ನ್ಯಾಯಾಲಯವು ಇದರ ಬಗ್ಗೆ ಸಲ್ಲಿಕೆಯಾಗಿದ್ದ 73 ಅರ್ಜಿಗಳ ವಿಚಾರಣೆಯನ್ನು ಕೈಗೆತ್ತಿಕೊಂಡಿತ್ತು. ಈ ವೇಳೆ ಎರಡೂ ಕಡೆಯ ವಕೀಲರು ತಮ್ಮ ಪ್ರಬಲ ವಾದ ಮಂಡಿಸಿದ್ದರು. ಅಲ್ಲದೆ ಇಬ್ಬರಿಗೂ ಅಂದರೆ ಪರ ಹಾಗೂ ವಿರೋಧದವರಿಗೂ ಸಂಜೀವ್ ಖನ್ನಾ ನೇತೃತ್ವದ ಪೀಠ ಪ್ರಶ್ನೆಗಳನ್ನು ಕೇಳಿತ್ತು. ಅಲ್ಲದೆ ದೀರ್ಘಾವಧಿಯ ಬಳಕೆ ಮೂಲಕ ವಕ್ಫ್ ಬೈ ಯೂಸರ್ ಅಡಿಯಲ್ಲಿ ಕೇಂದ್ರ ವಕ್ಫ್ ಬೋರ್ಡ್‌ನಲ್ಲಿ ಮುಸ್ಲಿಮೇತರರ ನೇಮಕ ಸೇರಿ ಕಾಯ್ದೆಯಲ್ಲಿನ ಹಲವ ನಿಬಂಧನೆಗಳ ಕುರಿತು ತ್ರಿಸದಸ್ಯ ಪೀಠವು ಸ್ಪಷ್ಟನೆಯನ್ನು ಕೇಳಿತ್ತು. ಅಲ್ಲದೆ ವಾದ ವಿವಾದ ಆಲಿಸಿರುವ ನ್ಯಾಯಾಲಯವು ವಕ್ಫ್ ಮಂಡಳಿಯಲ್ಲಿ ಮುಸ್ಲಿಮೇತರರ ಸೇರ್ಪಡೆ, ವಿವಾದಿತ ಆಸ್ತಿಯ ಮೇಲೆ ಜಿಲ್ಲಾಧಿಕಾರಿಯ ಅಧಿಕಾರದ ಕುರಿತಾಗಿ ವಿವರ ನೀಡಲು ಕೇಂದ್ರ ಸರ್ಕಾರಕ್ಕೆ 7 ದಿನಗಳ ಗಡುವು ನೀಡಿ ಮಧ್ಯಂತರ ಆದೇಶ ಹೊರಡಿಸಿದೆ.
ಮೇ 5ಕ್ಕೆ ಮುಂದಿನ ವಿಚಾರಣೆ..
ಮುಂದಿನ ವಿಚಾರಣೆಯವರೆಗೆ ವಕ್ಫ್ ಮಂಡಳಿಗೆ ಮುಸ್ಲಿಮೇತರರನ್ನು ನೇಮಕ ಮಾಡುವಂತಿಲ್ಲ ಮತ್ತು ವಕ್ಫ್ ಕಾಯ್ದೆ ವಿಚಾರದಲ್ಲಿ ಯಥಾಸ್ಥಿತಿ ಕಾಪಾಡುವಂತೆ ನ್ಯಾಯಾಲಯವು ಸೂಚಿಸಿದೆ. ಇಷ್ಟೊಂದು ಅರ್ಜಿಗಳನ್ನು ನಿರ್ವಹಣೆ ಮಾಡುವುದು ಅಸಾಧ್ಯ. ಕೇವಲ 5 ಅರ್ಜಿಗಳನ್ನು ಮಾತ್ರ ಆಲಿಸಲಾಗುವುದು. ಯಾವ ಐದು ಅರ್ಜಿಗಳನ್ನು ವಿಚಾರಣೆ ನಡೆಸಬೇಕು ಎಂಬುದನ್ನು ನೀವೇ ತೀರ್ಮಾನಿಸಿ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಅರ್ಜಿದಾರರು 5 ದಿನಗಳಲ್ಲಿ ಕೇಂದ್ರದ ಉತ್ತರಕ್ಕೆ ಮರು ಪ್ರತಿಕ್ರಿಯೆ ಸಲ್ಲಿಸಬಹುದು, ನಂತರ ಮಧ್ಯಂತರ ಆದೇಶಗಳಿಗಾಗಿ ವಿಷಯವನ್ನು ಪಟ್ಟಿ ಮಾಡಲಾಗುವುದು ಎಂದು ಹೇಳಿ, ವಿಚಾರಣೆಯನ್ನು ಮೇ 5ಕ್ಕೆ ಸುಪ್ರೀಂ ಕೋರ್ಟ್ ಮುಂದೂಡಿದೆ. ಕೇಂದ್ರ ಸರ್ಕಾರದ ಪರವಾಗಿ ವಿಚಾರಣೆಗೆ ಹಾಜರಾಗಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಕೆಲವು ಸಾಮಗ್ರಿಗಳೊಂದಿಗೆ ಪ್ರಾಥಮಿಕ ಉತ್ತರ ನೀಡಲು ನನಗೆ ಒಂದು ವಾರ ಸಮಯ ನೀಡಿ ಎಂದು ಸುಪ್ರೀಂ ಕೋರ್ಟ್‌ಗೆ ವಿನಂತಿಸಿದ್ದಾರೆ. ಈ ಮಧ್ಯೆ ಕೇಂದ್ರ ವಕ್ಫ್ ಮಂಡಳಿ ಮತ್ತು ಇತರ ಮಂಡಳಿಗಳಲ್ಲಿ ಯಾವುದೇ ನೇಮಕಾತಿ ನಡೆಸಬಾರದು ಎಂದು ಕೇಂದ್ರ ಸರ್ಕಾರ ಸಮಯ ಕೇಳಿದ ನಂತರ ಸುಪ್ರೀಂ ಕೋರ್ಟ್ ತಿಳಿಸಿದೆ.
ಯಾವುದೇ ಬದಲಾವಣೆ ಮಾಡಬಾರದು..
ಇನ್ನೂ 1995 ರ ಕಾಯ್ದೆಯಡಿ ಈಗಾಗಲೇ ನೋಡಿಫೈ ಮಾಡಿದ ಅಥವಾ ನೋಂದಾಯಿಸಲಾದ ಹಾಗೂ ದೀರ್ಘ ಕಾಲದಿಂದ ಧಾರ್ಮಿಕ ಕಾರ್ಯಕ್ರಮಗಳಿಗೆ ಬಳಸುತ್ತಿರುವ ವಕ್ಫ್ ಬೈ ಯೂಸರ್ ಆಸ್ತಿಗಳನ್ನು ಒಳಗೊಂಡಂತೆ ಯಾವುದೇ ವಕ್ಫ್ ಆಸ್ತಿಗಳನ್ನು ಡಿನೋಟಿಫೈ ಮಾಡುವಂತಿಲ್ಲ. ಜಿಲ್ಲಾಧಿಕಾರಿಗಳು ಅವುಗಳ ಸ್ಥಿತಿಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಬಾರದು ಎಂದು ನ್ಯಾಯಾಲಯ ಸೂಚಿಸಿದೆ. ಮುಂದಿನ ವಿಚಾರಣೆಯವರೆಗೆ ವಕ್ಫ್ ಬೈ ಡೀಡ್ ಮತ್ತು ಬಳಕೆದಾರರಿಂದ ವಕ್ಫ್ ಅನ್ನು ಡಿನೋಟಿಫೈ ಮಾಡುವುದಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಭರವಸೆ ನೀಡಿದೆ. ಇನ್ನೂ ಈ ಕುರಿತು ಮುಂದಿನ ಅವಧಿಯಲ್ಲಿ ಇನ್ನಷ್ಟು ಹೆಚ್ಚಿನ ವಿಚಾರಣೆ ನಡೆಸುವುದಾಗಿ ಕೋರ್ಟ್ ತಿಳಿಸಿದೆ.