National Political News: ತೆಲಂಗಾಣದ ಬಳಿಕ ಒಳ ಮೀಸಲಾತಿ ವಿಚಾರದಲ್ಲಿ ಆಂಧ್ರಪ್ರದೇಶದ ಚಂದ್ರಬಾಬು ನಾಯ್ಡು ಸರ್ಕಾರವು ಮಹತ್ವದ ಹೆಜ್ಜೆ ಇಟ್ಟಿದೆ. ಕಳೆದ ವಾರದಲ್ಲಷ್ಟೇ ನೆರೆಯ ತೆಲಂಗಾಣದಲ್ಲಿ ಪರಿಶಿಷ್ಟ ಜಾತಿಯ ಒಳ ಮೀಸಲಾತಿಯ ಬೇಡಿಕೆಯನ್ನು ಜಾರಿಗೆ ತರಲಾಗಿತ್ತು. ಅದರ ಬಳಿಕ ಇದೀಗ ಆಂಧ್ರಪ್ರದೇಶದಲ್ಲೂ ಸಹ ಅದೇ ಮಾದರಿ ಅನುಸರಿಲಾಗುತ್ತಿದೆ. ಈ ಮೂಲಕ ರಾಜ್ಯದಲ್ಲಿ ಶಿಕ್ಷಣ ಮತ್ತು ಉದ್ಯೋಗ ನೇಮಕಾತಿಯಲ್ಲಿ ಪರಿಶಿಷ್ಟ ಜಾತಿಯವರನ್ನು ಮೂರು ಉಪ ವರ್ಗಗಳಾಗಿ ವರ್ಗೀಕರಿಸಿ ಒಳ ಮೀಸಲಾತಿ ನೀಡಲು ಆಂಧ್ರ ಪ್ರದೇಶ ಸರ್ಕಾರವು ಗುರುವಾರ ಸುಗ್ರೀವಾಜ್ಞೆ ಹೊರಡಿಸಿದೆ. ಹೀಗಾಗಿ ತೆಲಂಗಾಣದ ಬಳಿಕ ಒಳ ಮೀಸಲಾತಿ ನೀಡಿದ ಎರಡನೇ ರಾಜ್ಯದ ಹೆಗ್ಗಳಿಕೆಗೆ ನಾಯ್ಡು ಸರ್ಕಾರ ಪಾತ್ರವಾಗಿದೆ.
ಇನ್ನೂ ಪ್ರಮುಖವಾಗಿ ಇದಕ್ಕೆ ಸಂಬಂಧಿಸಿದ ಸುಗ್ರೀವಾಜ್ಞೆ-2025 ಅನ್ನು ರಾಜ್ಯದ ಗೆಜೆಟ್‌ನಲ್ಲಿ ಇಂಗ್ಲಿಷ್, ತೆಲುಗು ಹಾಗೂ ಉರ್ದು ಭಾಷೆಗಳಲ್ಲಿ ಪ್ರಕಟಿಸಿದೆ. ಅಲ್ಲದೆ ಆಂಧ್ರಪ್ರದೇಶ ಸರ್ಕಾರವು ತನ್ನ ಸುಗ್ರೀವಾಜ್ಞೆ 2025ರ ನಂಬರ್ 2 ಅಂತ ಪ್ರಕಟಿಸಿದೆ ಎಂದು ಕಾನೂನು ಇಲಾಖೆಯ ಆದೇಶದಲ್ಲಿ ತಿಳಿಸಿದೆ. ಅಲ್ಲದೆ ಏಪ್ರಿಲ್ 15ರಂದು ಪರಿಶಿಷ್ಟ ಜಾತಿಗಳನ್ನು ಒಟ್ಟು ಶೇಕಡಾ 15ರಷ್ಟು ಮೀಸಲಾತಿಗೆ ಒಳಪಟ್ಟಂತೆ ಮೂರು ಗುಂಪುಗಳಾಗಿ ಉಪ ವರ್ಗೀಕರಣ ಮಾಡುವ ಸುಗ್ರೀವಾಜ್ಞೆಯ ಪ್ರಸ್ತಾಪಕ್ಕೆ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ನೇತೃತ್ವದ ಸಚಿವ ಸಂಪುಟವು ಅನುಮೋದನೆ ನೀಡಿದೆ.
ವರ್ಗೀಕರಣ ಹೇಗೆ..?
ಅಲ್ಲದೆ ಆಂಧ್ರಪ್ರದೇಶದಲ್ಲಿರುವ ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 59 ಜಾತಿಗಳನ್ನು ಮೂರು ಗುಂಪುಗಳಾಗಿ ವರ್ಗೀಕರಿಸಲಾಗಿದೆ. ಚಂಡಾಲ, ಪಾಕಿ, ರೆಲ್ಲಿ, ಡೋಮ್ ಹಾಗೂ ಇನ್ನಿತರ ಜಾತಿಗಳಂತಹ 12 ಜಾತಿಗಳು ವರ್ಗ–1ರಲ್ಲಿದ್ದು, ಇವುಗಳಿಗೆ ಶೇಕಡಾ 1ರಷ್ಟು ಒಳಮೀಸಲಾತಿ ನೀಡಲಾಗುವುದು ಎಂದು ರಾಜ್ಯ ಸರ್ಕಾರ ಈ ಹಿಂದೆಯೇ ಭರವಸೆ ನೀಡಿತ್ತು. ಅಲ್ಲದೆ ವರ್ಗ-2ರಲ್ಲಿ ಚಮಾರ್, ಮಾದಿಗ, ಸಿಂಧೋಲಾ, ಮಾತಂಗಿ ಮತ್ತು ಇತರ ಜಾತಿಗಳು ಸೇರಿವೆ. ಇವರಿಗೆ ಶೇಕಡಾ 6.5 ರಷ್ಟು ಮೀಸಲಾತಿ ನೀಡಲಾಗಿದೆ. ಇನ್ನೂ ವರ್ಗ–3ರಲ್ಲಿ ಮಾಲಾ ಮತ್ತು ಅದರ ಉಪ-ಜಾತಿಗಳು, ಆದಿ ಆಂಧ್ರ, ಪಂಚಮಾ ಮತ್ತು ಇತರ ಜಾತಿಗಳವರು ಸೇರಿದ್ದಾರೆ. ಇವರಿಗೆ ಶೇ 7.5 ಮೀಸಲಾತಿ ಕಲ್ಪಿಸಲಾಗಿದೆ. ಅಲ್ಲದೆ ಈ ಸುಗ್ರೀವಾಜ್ಞೆಯೊಂದಿಗೆ ಆಂಧ್ರ ಪ್ರದೇಶದಲ್ಲಿನ ಎಲ್ಲ ಪರಿಶಿಷ್ಟ ಜಾತಿಗಳು ಶಿಕ್ಷಣ ಮತ್ತು ಉದ್ಯೋಗದಲ್ಲಿ ಸಮ ಪ್ರಮಾಣದ ನ್ಯಾಯ ಪಡೆಯಲಿವೆ ಎಂದು ನಾಯ್ಡು ಸರ್ಕಾರ ತಿಳಿಸಿದೆ. ಸುಪ್ರೀಂ ಕೋರ್ಟ್ ಕಳೆದ ವರ್ಷ ತನ್ನ ತೀರ್ಪಿನಲ್ಲಿ, ಮೀಸಲಾದ ವರ್ಗಗಳಲ್ಲಿ ಒಳ ಮೀಸಲಾತಿ ನೀಡಲು ಎಸ್‌ಸಿ ಮತ್ತು ಪರಿಶಿಷ್ಟ ಪಂಗಡಗಳ ಎಸ್‌ಟಿ ಉಪ ವರ್ಗೀಕರಣ ಮಾಡಲು ರಾಜ್ಯಗಳಿಗೆ ಅನುಮತಿ ನೀಡಿ ಆದೇಶ ಹೊರಡಿಸಿತ್ತು.
ತೆಲಂಗಾಣ ಮಾದರಿ ಏನು..?
ಎಸ್‌ಸಿ ಸಮುದಾಯದಲ್ಲಿನ ಹಲವು ವರ್ಷಗಳ ಬೇಡಿಕೆಯಾಗಿದ್ದ ಒಳ ಮೀಸಲಾತಿಯ ಜಾರಿ ವಿಚಾರದಲ್ಲಿ ತೆಲಂಗಾಣ ಕಾಂಗ್ರೆಸ್ ಸರ್ಕಾರವು ಮಹತ್ವದ ಹೆಜ್ಜೆ ಇಟ್ಟಿದ್ದು, ಈ ಮೂಲಕ ದೇಶದಲ್ಲಿಯೇ ಒಳ ಮೀಸಲಾತಿ ನೀಡಿರುವ ಹೆಗ್ಗಳಿಕೆಗೆ ಅದು ಪಾತ್ರವಾಗಿದೆ. ಕರ್ನಾಟಕದಲ್ಲಿ ಒಳ ಮೀಸಲಾತಿಯ ಜಟಾಪಟಿ ಹಾಗೂ ಪರ ವಿರೋಧಗಳು ಮುಂದುವರೆದ ಈ ಹೊತ್ತಿನಲ್ಲಿಯೇ ಅದರಲ್ಲೂ ನೆರೆಯ ತೆಲಂಗಾಣದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ. ಆರ್ ಅಂಬೇಡ್ಕರ್ ಅವರ ಜನ್ಮದಿನದಂದೇ ಈ ಕುರಿತ ಅಧಿಸೂಚನೆ ಹೊರಡಿಸಿ ಗಮನ ಸೆಳೆದಿತ್ತು.
ಇನ್ನೂ ಇದೇ ವಿಚಾರಕ್ಕೆ ತಮ್ಮ ಸರ್ಕಾರದ ಈ ಗಟ್ಟಿ ನಿರ್ಧಾರದ ಕುರಿತು ಖುದ್ದು ಮುಖ್ಯಮಂತ್ರಿ ರೇವಂತ್ ರೆಡ್ಡಿ ಸಂತಸ ಹಂಚಿಕೊಂಡಿದ್ದರು. ಅಲ್ಲದೆ ಭಾರತದಲ್ಲಿ ಎಸ್‌ಸಿ ಒಳಮೀಸಲಾತಿ ಜಾರಿಯ ಕ್ರಾಂತಿಕಾರಿ ನಿರ್ಧಾರವನ್ನು ಪಡೆದ ಮೊದಲ ರಾಜ್ಯ ತೆಲಂಗಾಣವಾಗಿದೆ. ಇತಿಹಾಸ ನಿರ್ಮಿಸಿದ್ದಕ್ಕೆ ನಾವೆಲ್ಲರೂ ಹೆಮ್ಮೆಪಡುತ್ತೇವೆ. ಭಾರತ ರತ್ನ ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯ ಅತ್ಯಂತ ಶುಭ ದಿನದಂದು, ತೆಲಂಗಾಣ ರಾಜ್ಯ ಸರ್ಕಾರವು ಎಸ್‌ಸಿ ಉಪ-ಜಾತಿಗಳ ವರ್ಗೀಕರಣದ ಬಹುದಿನಗಳ ಬೇಡಿಕೆಯನ್ನು ಪುರಸ್ಕರಿಸುವ ಮೂಲಕ ಸಾಮಾಜಿಕ ನ್ಯಾಯದ ಒಂದು ಮಹಾನ್ ಕಾಯ್ದೆಯನ್ನು ಜಾರಿಗೆ ತಂದಿದ್ದೇವೆ. ಈ ಮೂಲಕ ಅವರಿಗೆ ಅತ್ಯುತ್ತಮ ಗೌರವವನ್ನು ನಮ್ಮ ಸರ್ಕಾರವು ಸಲ್ಲಿಸಿದೆ ಎಂದು ಅವರು ಪ್ರತಿಪಾದಿಸಿದ್ದರು.
ಯಾವ ರೀತಿ ವಿಂಗಡಣೆ ಮಾಡಲಾಗಿತ್ತು..?
ತೆಲಂಗಾಣ ಸರ್ಕಾರದ ಈ ಒಳ ಮೀಸಲಾತಿಯು ಯಾವ ರೀತಿಯಾಗಿ ಜಾರಿಯಾಗಿದೆ ಹಾಗೂ ಅವುಗಳಲ್ಲಿ ಹೇಗೆ ವರ್ಗೀಕರಣ ಮಾಡಿದ್ದಾರೆ ಎನ್ನುವುದನ್ನು ನೋಡಿದಾಗ. ರಾಜ್ಯದಲ್ಲಿನ ಪರಿಶಿಷ್ಟ ಜಾತಿಗೆ ಶೇಕಡಾ 15ರಷ್ಟು ಮೀಸಲಾತಿ ಇದೆ. ಇನ್ನೂ ಅದರಲ್ಲಿಯ 5 ಉಪಜಾತಿಗಳನ್ನು 3 ಭಾಗಗಳಾಗಿ ವಿಂಗಡಣೆ ಮಾಡಿದಾಗ ಅದರಲ್ಲಿ ಕ್ರಮವಾಗಿ ಶೇಕಡಾ 1, ಶೇಕಡಾ 9 ಹಾಗೂ ಶೇಕಡಾ 5ರಷ್ಟು ಒಳ ಮೀಸಲಾತಿ ನೀಡಲಾಗುತ್ತದೆ. ಈ ಮೂಲಕ ಅತಿ ಹಿಂದುಳಿದ ಉಪಜಾತಿಗಳಿಗೂ ಕನಿಷ್ಠ ಮೀಸಲಾತಿಯ ಲಾಭ ದೊರೆಯುವುದನ್ನು ಸೂಚಿಸುತ್ತದೆ.
2026ಕ್ಕೆ ಇನ್ನಷ್ಟು ಏರಿಕೆ ಮಾಡುತ್ತೇವೆ..
ಅಲ್ಲದೆ ಈಗಾಗಲೇ ನಮ್ಮ ಸರ್ಕಾರ ಜಾರಿಗೆ ತಂದಿರುವ ಒಳ ಮೀಸಲಾತಿಯು ಉದ್ಯೋಗ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಪರಿಶಿಷ್ಟ ಜಾತಿಯವರಿಗೆ ಏಪ್ರಿಲ್ 14ರ ಸೋಮವಾರದಿಂದಲೇ ಅನ್ವಯವಾಗುವಂತೆ ಕ್ರಮ ಕೈಗೊಳ್ಳಲಾಗಿದೆ. ಈ ಆದೇಶದ ಮೊದಲ ಪ್ರತಿಯನ್ನು ಮುಖ್ಯಮಂತ್ರಿ ರೇವಂತ್ ರೆಡ್ಡಿಯವರಿಗೆ ಹಸ್ತಾಂತರಿಸಲಾಗಿದೆ. ಸುಪ್ರೀಂಕೋರ್ಟ್ ಆದೇಶದ ಬಳಿಕ ಎಸ್‌ಸಿ ವರ್ಗೀಕರಣವನ್ನು ಜಾರಿಗೆ ತಂದ ಮೊದಲ ರಾಜ್ಯ ತೆಲಂಗಾಣವಾಗಿದೆ. ಅಲ್ಲದೆ ಪ್ರಮುಖವಾಗಿ ಮುಂಬರುವ 2026ರಲ್ಲಿ ಎಸ್‌ಸಿ ಸಮುದಾಯದ ಜನಸಂಖ್ಯೆಯು ಹೆಚ್ಚಳವಾದಲ್ಲಿ ಅದಕ್ಕೆ ಅನುಗುಣವಾಗಿ ಮೀಸಲಾತಿಯಲ್ಲಿ ಇನ್ನಷ್ಟು ಏರಿಕೆ ಮಾಡಲಾಗುವುದು ಎಂದು ತೆಲಂಗಾಣದ ನೀರಾವರಿ ಸಚಿವ ಹಾಗೂ ಮೀಸಲಾತಿ ವರ್ಗೀಕರಣ ಉಪಸಮಿತಿ ಅಧ್ಯಕ್ಷ ಉತ್ತಮ್ ಕುಮಾರ್ ರೆಡ್ಡಿ ಭರವಸೆ ನೀಡಿದ್ದರು. ಇದಾದ ಬೆನ್ನಲ್ಲೇ ಆಂಧ್ರಪ್ರದೇಶ ಸರ್ಕಾರವು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಹಾದಿ ತುಳಿದಂತಾಗಿದ್ದು, ಸಿಎಂ ಚಂದ್ರಬಾಬು ನಾಯ್ಡು ಪರಿಶಿಷ್ಟರಿಗೆ ನೀಡಿದ್ದ ಭರವಸೆ ಈಡೇರಿಸಿರುವ ಸಂತಸದಲ್ಲಿದ್ದಾರೆ.