Saturday, April 12, 2025

Latest Posts

National Political News: ತಮಿಳುನಾಡು ಚುನಾವಣೆಗೆ ಕೇಸರಿ ರಣಕಹಳೆ : 2026ಕ್ಕೆ ಇವರೇ ಸಿಎಂ

- Advertisement -

National Political News: ತಮಿಳುನಾಡಲ್ಲಿ ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ತಿಂಗಳುಗಳು ಬಾಕಿ ಇರುವಾಗಲೇ ರಾಜಕೀಯ ಚಟುವಟಿಕೆಗಳು ವೇಗ ಪಡೆದುಕೊಂಡಿವೆ. ನಿರಂತರವಾಗಿ ಕೇಂದ್ರ ಸರ್ಕಾರವನ್ನು ಕಟುವಾದ ಪದಗಳಿಂದಲೇ ಟೀಕಿಸುತ್ತಿರುವ ಸಿಎಂ ಎಂ.ಕೆ. ಸ್ಟಾಲಿನ್‌ ಕಟ್ಟಿಹಾಕಲು ಬಿಜೆಪಿ ಮಾಸ್ಟರ್‌ ಪ್ಲಾನ್‌ ಮಾಡಿದೆ. ಇನ್ನೂ ಇದರ ಮೊದಲ ಭಾಗವಾಗಿಯೇ ಕಳೆದ ವಾರದಲ್ಲಿಯೇ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ಅಣ್ಣಾಮಲೈ ಅವರಿಗೆ ಕೊಕ್‌ ನೀಡಿತ್ತು.

ಇನ್ನೂ ಇದರ ಎರಡನೇಯ ಭಾಗವಾಗಿ ಬಿಜೆಪಿ ಅಧಿಕೃತವಾಗಿ ತಮಿಳುನಾಡು ಚುನಾವಣಾ ಅಖಾಡಕ್ಕೆ ಧುಮುಕಲಿದೆ. ಈ ಹಿನ್ನೆಲೆಯಲ್ಲಿಯೇ ಬಿಜೆಪಿ ಹಾಗೂ ಎಐಎಡಿಎಂಕೆ ಮೈತ್ರಿಯನ್ನು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅಧಿಕೃತವಾಗಿ ಘೋಷಿಸಿದ್ದಾರೆ. ತಮಿಳುನಾಡಿನಲ್ಲಿಂದು ನೂತನ ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆಯ ಪ್ರಕ್ರಿಯೆಯಲ್ಲಿ ಭಾಗವಹಿಸಿದ ಬಳಿಕ ಸುದ್ದಿಗೋಷ್ಠಿ ನಡೆಸಿ ಡಿಎಂಕೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೆ 2026ರಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತಮಿಳುನಾಡಿನ ಭ್ರಷ್ಟ ಡಿಎಂಕೆ ಸರ್ಕಾರವನ್ನು ಕಿತ್ತೊಗೆಯಲು ಎಐಎಡಿಎಂಕೆ ಹಾಗೂ ಬಿಜೆಪಿ ಒಟ್ಟಾಗಿ ಹೋರಾಡಲಿವೆ ಎಂದು ತಿಳಿಸಿದ್ದಾರೆ.

ಭ್ರಷ್ಟಾಚಾರದಲ್ಲಿ ಮುಳುಗಿದೆ..

ಅಲ್ಲದೆ ತಮಿಳುನಾಡಿನ ಸರ್ಕಾರದಲ್ಲಿ ಅಕ್ರಮಗಳು ಹೆಚ್ಚಾಗಿ ನಡೆಯುತ್ತಿವೆ. ಇಲ್ಲಿನ ಸರ್ಕಾರ ಸಂಪೂರ್ಣ ಭ್ರಷ್ಟಾಚಾರದಲ್ಲಿ ಮುಳುಗಿಹೋಗಿದೆ ಇದರ ವಿರುದ್ಧ ನಮ್ಮ ಗಟ್ಟಿಯಾದ ಧ್ವನಿ ಮೊಳಗಲಿದೆ. ಇನ್ನೂ ರಾಜ್ಯದಲ್ಲಿ 2026ರ ತಮಿಳುನಾಡು ಮುಖ್ಯಮಂತ್ರಿಯಾಗಿ ಎನ್‌ಡಿಎ ಮೈತ್ರಿಕೂಟದ ಎಡಪ್ಪಾಡಿ ಪಳನಿಸ್ವಾಮಿಯವರೇ ಆಗಿರಲಿದ್ದಾರೆ. ನಾವು ಮುಂಬರುವ ವಿಧಾನಸಭಾ ಚುನಾವಣೆಗಳನ್ನು ಅವರ ನೇತೃತ್ವದಲ್ಲಿಯೇ ಎದುರಿಸಬೇಕು, ತಮಿಳುನಾಡಿಗೆ ಪಳನಿಸ್ವಾಮಿ ನಾಯಕರಾದರೆ ದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಇದ್ದಾರೆ. 1998ರಿಂದ ಎಐಎಡಿಎಂಕೆ ಮತ್ತು ಬಿಜೆಪಿ ಎನ್‌ಡಿಎ ಮೈತ್ರಿ ಕೂಟದ ಭಾಗವಾಗಿದ್ದು, ಎಐಎಡಿಎಂಕೆ ನಾಯಕಿ ಜಯಲಲಿತಾ ಮತ್ತು ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಒಟ್ಟಿಗೆ ಕೆಲಸ ಮಾಡಿದ್ದಾರೆ ಎಂಬುದನ್ನು ಅಮಿತ್‌ ಶಾ ಉಲ್ಲೇಖಿಸಿದ್ದಾರೆ. ತಮಿಳುನಾಡಿನಲ್ಲಿ ಎನ್‌ಡಿಎ ಪೂರ್ಣ ಬಹುಮತ ಪಡೆದು ಸರ್ಕಾರ ರಚಿಸುತ್ತದೆ ಎಂಬ ಭರವಸೆಯನ್ನು ಅವರು ವ್ಯಕ್ತಪಡಿಸಿದ್ದಾರೆ.

ಪಳನಿಸ್ವಾಮಿ ಯಾವುದೇ ಬೇಡಿಕೆ ಇಟ್ಟಿಲ್ಲ..

ತಮಿಳುನಾಡಿನ ಒಳಿತಿಗಾಗಿ ಇಲ್ಲಿನ ಜನರ ಕಲ್ಯಾಣಕ್ಕಾಗಿ ಎಐಎಡಿಎಂಕೆ ನಮ್ಮ ಎದುರು ಯಾವುದೇ ಕಂಡೀಷನ್‌ ಇಟ್ಟಿಲ್ಲ. ಬೇಷರತ್ತಾಗಿ ನಮ್ಮ ಮೈತ್ರಿಗೆ ಒಪ್ಪಿಕೊಂಡಿದೆ. ಮುಂಬರುವ ತಮಿಳುನಾಡು ಚುನಾವಣೆಯಲ್ಲಿ ಡಿಎಂಕೆಯ ಭ್ರಷ್ಟಾಚಾರ, ಕಾನೂನು ಸುವ್ಯವಸ್ಥೆಯ ಸಮಸ್ಯೆಗಳು, ದಲಿತರು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ನೋಡಿಕೊಂಡೇ ಜನರು ಮತ ಚಲಾಯಿಸುತ್ತಾರೆ ಎಂಬ ವಿಶ್ವಾಸವಿದೆ. ಇಲ್ಲಿನ ಸ್ಟಾಲಿನ್‌ ನೇತೃತ್ವದ ಡಿಎಂಕೆ ಸರ್ಕಾರವು 39,000 ಕೋಟಿ ರೂಪಾಯಿಗಳ ಮದ್ಯ ಹಗರಣ, ಮರಳು ಗಣಿಗಾರಿಕೆ ಹಗರಣ, ಇಂಧನ ಹಗರಣ, ಎಲ್‌ಸಿಒಟಿ ಹಗರಣ, ಸಾರಿಗೆ ಹಗರಣ, ಹಣ ವರ್ಗಾವಣೆ ಹಗರಣ ಸೇರಿದಂತೆ ಅನೇಕ ಹಗರಣಗಳಲ್ಲಿ ತೊಡಗಿಕೊಂಡಿದೆ. ಈ ಎಲ್ಲವುಗಳ ಕುರಿತು ತಮಿಳುನಾಡಿನ ಜನರು ಉದಯನಿಧಿ ಮತ್ತು ಸ್ಟಾಲಿನ್ ಅವರಿಂದ ಉತ್ತರಗಳನ್ನು ಬಯಸುತ್ತಿದ್ದಾರೆ ಎಂದು ಅಮಿತ್‌ ಶಾ ಟೀಕಾ ಪ್ರಹಾರ ನಡೆಸಿದ್ದಾರೆ.

ನೈನಾರ್‌ ನಾಗೇಂದ್ರನ್‌ಗೆ ಕಮಲ ಸಾರಥ್ಯ..!

ಇನ್ನೂ ಅಣ್ಣಾಮಲೈ ರಾಜೀನಾಮೆಯ ಬಳಿಕ ತಮಿಳುನಾಡು ಬಿಜೆಪಿಯ ನೂತನ ಅಧ್ಯಕ್ಷರು ಯಾರಾಗುತ್ತಾರೆ ಎಂಬ ಕುತೂಹಲ ಮೂಡಿತ್ತು. ಆದರೆ ಅಂತಿಮವಾಗಿ ಖುದ್ದು ಗೃಹ ಸಚಿವ ಅಮಿತ್‌ ಶಾ ಇದಕ್ಕೆ ತೆರೆ ಎಳೆದಿದ್ದು ನೂತನ ಅಧ್ಯಕ್ಷರನ್ನಾಗಿ ಬಿಜೆಪಿ ಶಾಸಕ ನೈನಾರ್‌ ನಾಗೇಂದ್ರನ್‌ ಅವರನ್ನು ನೇಮಕ ಮಾಡಿದ್ದಾರೆ. ಅಲ್ಲದೆ ಈ ಹಿಂದೆ ಎಐಎಡಿಎಂಕೆಯ ಷರತ್ತನ್ನು ಒಪ್ಪಿದ್ದ ಬಿಜೆಪಿ ಹೈಕಮಾಂಡ್‌ ನಾಯಕರು ಅಣ್ಣಾಮಲೈ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿತ್ತು. ಬಳಿಕ ಇದೀಗ ನೂತನ ಅಧ್ಯಕ್ಷರನ್ನು ನೇಮಿಸುವ ಮೂಲಕ ಚುನಾವಣೆಗೆ ಪಕ್ಷ ಸಂಘಟಿಸುವ ಕಾರ್ಯಕ್ಕೆ ಚಾಲನೆ ನೀಡಿದೆ.

- Advertisement -

Latest Posts

Don't Miss