Spiritual Story: ಇಡೀ ಕರ್ನಾಟಕದಲ್ಲಿ ಎಲ್ಲರೂ ಆರಾಧಿಸುವ, ಎಲ್ಲರೂ ಒಮ್ಮೆಯಾದರೂ ಭೇಟಿ ನೀಡಿ, ಆಶೀರ್ವಾದ ಪಡೆಯಲೇಬೇಕು ಎಂದು ಬಯಸುವ ಶಕ್ತಿ ಪೀಠ ಎಂದರೆ, ಕಟೀಲು ದುರ್ಗಾ ಪರಮೇಶ್ವರಿ ಕ್ಷೇತ್ರ. ಇಂದು ನಾವು ಈ ಕ್ಷೇತ್ರದ ಹಿನ್ನೆಲೆ, ವಿಶೇಷತೆಗಳನ್ನು ಹೇಳಲಿದ್ದೇವೆ.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಕಟೀಲಿನಲ್ಲಿ ದುರ್ಗಾ ಪರಮೇಶ್ವರಿ ಕ್ಷೇತ್ರವಿದೆ. ನಂದಿನಿ ನದಿ ತೀರದಲ್ಲಿ ದುರ್ಗಾಪರಮೇಶ್ವರಿ ನೆಲೆನಿಂತು, ಕರಾವಳಿಗರ ರಕ್ಷಣೆ ಮಾಡುತ್ತಿದ್ದಾಳೆಂಬ ನಂಬಿಕೆ ಇಲ್ಲಿನ ಜನರಲ್ಲಿದೆ. ಅಲ್ಲದೇ, ಈಕೆಯ ಸನ್ನಿಧಿಯಲ್ಲಿ ವಿವಾಹವಾದವರ ಜೀವನ ಅತ್ಯುತ್ತಮವಾಗಿರುತ್ತದೆ ಅನ್ನೋ ನಂಬಿಕೆಯೂ ಇದೆ.
ಕರ್ನಾಟಕದ ಶ್ರೀಮಂತ ಮತ್ತು ಪ್ರಸಿದ್ಧ ದೇವಸ್ಥಾನದಲ್ಲಿ ಒಂದಾದ ಕಟೀಲು ದೇವಸ್ಥಾನದ ಹಿನ್ನೆಲೆ ಬಗ್ಗೆ ಹೇಳುವುದಾದರೆ, ಅರುಣಾಸುರ ಎಂಬ ರಾಕ್ಷಸ, ಋಷಿಮುನಿಗಳಿಗೆ, ಸಾಮಾನ್ಯ ಜನರಿಗೆ ತೊಂದರೆ ಮಾಡುತ್ತಿದ್ದನು. ಹಾಗಾಗಿ ಯಜ್ಞ, ಯಾಗಾದಿಗಳು ನಿಂತು ಹೋದವು. ಆಗ ದೇವತೆಗಳು ಭೂಲೋಕದ ಮೇಲೆ ಕೋಪಗೊಂಡು, ಕಾಲ ಕಾಲಕ್ಕೆ ಮಳೆ ತರಿಸುವುದನ್ನು ನಿಲ್ಲಿಸಿದರು.
ಇದರಿಂದ ಭೂಲೋಕದಲ್ಲಿ ತಿನ್ನಲು ಅನ್ನವಿಲ್ಲದೇ, ಜನ ಪರದಾಡುತ್ತಿದ್ದರು. ಆಗ ಜಾಬಾಲಿ ಋಷಿಗಳು, ಯಜ್ಞವನ್ನು ನಡೆಸಿ, ದೇವತೆಗಳನ್ನು ಸಂತ್ರಪ್ತಿ ಪಡಿಸಲು ನಿರ್ಧರಿಸಿದರು. ಇದಕ್ಕಾಗಿ ಕಾಮಧೇನುವಿನ ಅವಶ್ಯಕತೆ ಇದ್ದು, ದೇವಲೋಕದ ಒಡೆಯ ಇಂದ್ರನ ಬಳಿ ಹೋಗಿ, ಕಾಮಧೇನುವನ್ನು ಯಜ್ಞಕ್ಕೆ ಕಳಿಸಿಕೊಡಬೇಕು ಎಂದು ಬೇಡಿದರು.
ಆಗ ಇಂದ್ರನು ಕಾಮಧೇನು ವರುಣಲೋಕಕ್ಕೆ ಹೋಗಿರುವ ಕಾರಣ, ಆಕೆಯ ಮಗಳಾಗಿರುವ ನಂದಿನಿಯನ್ನು ಕರೆದುಕೊಂಡು ಹೋಗಿ ಎಂದು ಹೇಳುತ್ತಾರೆ. ಆದರೆ ನಂದಿನಿ ಅಹಂಕಾರದಿಂದ, ತಾನು ಯಜ್ಞಕ್ಕೆ ಬರುವುದಿಲ್ಲವೆಂದು ಹೇಳುತ್ತಾರೆ. ಆಗ ಜಾಬಾಲಿ ಮುನಿಗಳು ಆಕ್ರೋಶಗೊಂಡು, ಭೂಲೋಕವನ್ನು ತುಚ್ಛವಾಗಿ ಕಾಣುವ ನೀನು, ಭೂಲೋಕದಲ್ಲಿ ನದಿಯಾಗಿ ಹರಿ ಎಂದು ಶಾಪ ನೀಡುತ್ತಾರೆ.
ಆಗ ನಂದಿನಿಗೆ ತನ್ನ ತಪ್ಪಿನ ಅವರಿವಾಗುತ್ತದೆ. ಕ್ಷಮೆ ಕೇಳಿ, ಶಾಪ ಹಿಂದೆಗದುಕೊಳ್ಳಲು ಹೇಳಿದಾಗ, ಕೊಟ್ಟ ಶಾಪ ಹಿಂದೆಗೆದುಕೊಳ್ಳಲು ಆಗುವುದಿಲ್ಲ. ಹಾಗಾಗಿ ನೀನು ಆದಿಶಕ್ತಿಯಲ್ಲಿ ಕ್ಷಮೆ ಕೇಳು ಎನ್ನುತ್ತಾರೆ. ನಂದಿನಿ ಜಾಬಾಲಿ ಋಷಿಗಳ ಮಾತಿನಂತೆ ಶಕ್ತಿ ದೇವಿಯನ್ನು ಪ್ರಾರ್ಥಿಸಿ, ತನ್ನ ತಪ್ಪಿನ ಕ್ಷಮೆ ಕೇಳುತ್ತಾಳೆ. ಆಗ ದೇವಿ ಮುಂದಿನ ಜನ್ಮದಲ್ಲಿ ನಾನೇ ನಿನ್ನ ಮಗಳಾಗಿ ಬಂದು, ನಿನ್ನ ಶಾಪ ಕಳೆಯುತ್ತೇನೆ ಎಂದು ಹೇಳುತ್ತಾಳೆ.
ಬಳಿಕ ಅರುಣಾಸುರನ ವಧೆಗಾಗಿ ಶಕ್ತಿದೇವಿ, ದುಂಬಿಯಾಗಿ ಅವತರಿಸಿ, ಅರುಣಾಸುರನ ಸಂಹಾರ ಮಾಡುತ್ತಾಳೆ. ಬಳಿಕ ಆಕೆ ಸಮಾಧಾನಗೊಳ್ಳಲು, ಋಷಿ ಮುನಿಗಳು ಆಕೆಗೆ ಎಳನೀರಿನ ಅಭಿಷೇಕ ಮಾಡುತ್ತಾರೆ. ಕೊನೆಗೆ ಶಾಂತಳಾದ ಶಕ್ತಿದೇವಿ, ನಂದಿನಿನದಿಯ ಮಧ್ಯ ಭಾಗದಲ್ಲಿ ಕಟೀಲು ದೇವಿಯಾಗಿ ನೆಲೆ ನಿಲ್ಲುತ್ತಾಳೆ.
ಆ ಬಳಿಕ ನಂದಿನಿಯ ಶಾಪ ಕೊನೆಗೊಳ್ಳುತ್ತದೆ. ಕಟಿ ಎಂದರೆ ಮಧ್ಯಭಾಗ ಮತ್ತು ಇಳ ಎಂದರೆ ಭೂಮಿ. ಭೂಮಿಯ ಮಧ್ಯಭಾಗದಲ್ಲಿ ದೇವಿ ನೆಲೆನಿಂತಿರುವ ಕಾರಣಕ್ಕೆ ಈ ಸ್ಥಳಕ್ಕೆ ಕಟೀಲು ಎಂದು ಹೆಸರು ಬಂತು.


