Political News: ರಾಜ್ಯದ ಹದಿನಾರನೇ ವಿಧಾನಸಭೆಯ ಅವಧಿ ಪೂರ್ಣಗೊಳ್ಳುವ ವೇಳೆಗೆ ಸರ್ಕಾರದ ಸಾಲದ ಮೊತ್ತವು 9.25 ಲಕ್ಷ ಕೋಟಿ ರೂಪಾಯಿಗಳಷ್ಟಾಗಲಿದೆ ಎಂದು ಆರ್ಥಿಕ ಇಲಾಖೆಯು ಅಂದಾಜಿಸಿರುವ ಮಾಹಿತಿಯಲ್ಲಿ ತಿಳಿದುಬಂದಿದೆ. ಮುಂಬರುವ 2028ರ ಹೊತ್ತಿಗೆ ಸಾಲದ ಜೊತೆಗೆ ವಾರ್ಷಿಕ ಬಡ್ಡಿಯಲ್ಲಿಯೂ 60,306 ಕೋಟಿ ರೂಪಾಯಿಗಳನ್ನು ಮೀರಲಿದೆ ಎಂಬುದಾಗಿ ತಿಳಿಸಿದೆ.
ಅಲ್ಲದೆ 2025-26ನೇ ಸಾಲಿನ ಆರ್ಥಿಕ ವರ್ಷ ಮುಗಿಯುವ ವೇಳೆಗೆ ವಿತ್ತೀಯ ಕೊರತೆಯು 90,428 ಕೊಟಿ ರೂಪಾಯಿಗಳಷ್ಟಾಗಲಿದೆ ಎಂಬ ಮಾತನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‌ನಲ್ಲಿ ಹೇಳಿದ್ದಾರೆ. ಇನ್ನೂ ಪ್ರಸ್ತಕ ಆರ್ಥಿಕ ವರ್ಷದಲ್ಲಿ 1.16 ಲಕ್ಷ ಕೋಟಿ ರೂಪಾಯಿಗಳಷ್ಟು ಸಾಲ ಮಾಡಲು ಅನುವು ಮಾಡಿಕೊಡಲಾಗಿದೆ.
ಇನ್ನೂ ಮುಂಬರುವ ಆರ್ಥಿಕ ವರ್ಷಗಳಲ್ಲಿಎಲ್ಲ ವೆಚ್ಚಗಳಲ್ಲಿ ಹೆಚ್ಚಳವಾಗಲಿದೆ. ಪಿಂಚಣಿ, ವೇತನ ಹಾಗೂ ಇತರ ಬದ್ಧ ವೆಚ್ಚಗಳಲ್ಲಿಯೂ ಏರಿಕೆಯಾಗುವ ಸಂಭವವಿದೆ. ಇದರಿಂದ ಸಹಜವಾಗಿಯೇ ರಾಜ್ಯದ ಮೇಲಿನ ಹಣಕಾಸಿನ ಹೊರೆಯು ಜಾಸ್ತಿಯಾಗಲಿದೆ. ಅಲ್ಲದೆ ಈ ಹೊರೆಗಳ ನಿರ್ವಹಣೆಗೆ ಸಾಲ ಮಾಡುವುದು ಅನಿವಾರ್ಯ ಎಂಬುದನ್ನು ಆರ್ಥಿಕ ಇಲಾಖೆಯು ಸದನದ ಮುಂದಿರಿಸಿದೆ. ಈ ಕುರಿತು ಮಧ್ಯಂತರ ವಿತ್ತೀಯ ಯೋಜನೆ 2025 ರಿಂದ 2029ರ ಮುನ್ನಂದಾಜಿನಲ್ಲಿ ತಿಳಿಸಲಾಗಿದೆ.
ಇದಕ್ಕಾಗಿಯೇ 2027 – 28ರ ಮಾರ್ಚ್ ಅಂತ್ಯಕ್ಕೆ ಒಟ್ಟು ಸಾಲ 9.25 ಲಕ್ಷ ಕೋಟಿ ರೂಪಾಯಿ, ಅಲ್ಲದೆ 2029ರ ಅದೇ ಮಾರ್ಚ್ ಅಂತ್ಯದ ವೇಳೆಗೆ 10.17 ಲಕ್ಷ ಕೋಟಿ ರೂಪಾಯಿಗೆ ದಾಟಲಿದೆ ಎಂದು ಅಂದಾಜಿಸಲಾಗಿದೆ.
ಅಲ್ಲದೆ ತನ್ನ ಮುನ್ನಂದಾಜಿನಲ್ಲಿಯೂ ರಾಜ್ಯದ ಒಟ್ಟು ಉತ್ಪಾದನೆಯ ಹೋಲಿಕೆಯಲ್ಲಿ ಸಾಲದ ಮಿತಿಯನ್ನು ತಗ್ಗಿಸುವ ನಿಟ್ಟಿನಲ್ಲಿ ಸರ್ಕಾರವು ಕ್ರಮವನ್ನು ಕೈಗೊಳ್ಳಲು ಮುಂದಾಗಿದೆ. ಇನ್ನೂ ಕೇಂದ್ರದಿಂದ ಬರಬೇಕಾಗಿರುವ ರಾಜ್ಯದ ಪಾಲಿನ ತೆರಿಗೆ, ಜಿಎಸ್‌ಟಿ ಪರಿಹಾರ ಸೆಸ್ ರದ್ದಾಗಿ ಇದರ ಸಂಪೂರ್ಣ ಲಾಭ ರಾಜ್ಯಕ್ಕೆ ಆಗಲಿದೆ ಎಂದು ಸರ್ಕಾರ ಕಾದು ಕುಳಿತಿದೆ. ಇನ್ನೂ 16ನೇ ಹಣಕಾಸು ಆಯೋಗದಲ್ಲಿ ನಮಗೆ ಅಧಿಕ ಪಾಲು ಕೊಡುವ ನಿರೀಕ್ಷೆಯನ್ನು ಸರ್ಕಾರವು ಮಾಡಿದೆ. ಇದರಿಂದ ಕೇಂದ್ರದಿಂದ ಹೆಚ್ಚಿನ ಪ್ರಮಾಣದಲ್ಲಿ ಹಣ ರಾಜ್ಯಕ್ಕೆ ಹರಿದು ಬರಲಿದೆ ಎಂಬ ಕುರಿತು ಇಲಾಖೆಯು ಅಂದಾಜು ಮಾಡಿದೆ.
ಮುಖ್ಯವಾಗಿ ಇನ್ನೊಂದು ಕಡೆಯಿಂದ ಈ ಅಂದಾಜನ್ನು ಗಮನಿಸಿದಾಗ, ಕೇಂದ್ರ ಸರ್ಕಾರವು ತನ್ನ ಟ್ಯಾಕ್ಸ್‌ನಲ್ಲಿ ಶೇಕಡಾ 41ರಷ್ಟನ್ನು ಮಾತ್ರ ರಾಜ್ಯಗಳಿಗೆ ನೀಡುತ್ತಿದೆ. ಇನ್ನೂ ಇದರಲ್ಲಿ ಇಳಿಸಿ ಶೇಕಡಾ 40ರಷ್ಟು ಮಾಡುವಂತೆ 16ನೇ ಹಣಕಾಸು ಆಯೋಗಕ್ಕೆ ಸೂಚಿಸಿ ಶಿಫಾರಸ್ಸು ಮಾಡಲು ಕೇಂದ್ರ ಸರ್ಕಾರವು ಪತ್ರ ಬರೆದಿದೆ. ಒಂದು ವೇಳೆ ಇದು ಜಾರಿಗೆ ಬಂದರೆ ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ತೆರಿಗೆಯ ಪಾಲಿನಲ್ಲಿ ಮತ್ತಷ್ಟು ಇಳಿಕೆಯಾಗಲಿದೆ ಎನ್ನುವುದು ಆರ್ಥಿಕ ಇಲಾಖೆಯ ಆತಂಕವಾಗಿದೆ.