Political News: ಮಂಗಳೂರು,ನ.20: ರಾಜ್ಯದಲ್ಲಿ ಅತಿ ಶೀಘ್ರದಲ್ಲಿ ನೂತನ ಸಾರಿಗೆ ಮಸೂದೆ ತರಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದ್ದಾರೆ.
ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಸೋಮವಾರ ಕಾರ್ಮಿಕ ಇಲಾಖೆಯ ಹಿರಿಯ ಅಧಿಕಾರಿ ಅಧಿಕಾರಿಗಳ ಜತೆ ಜಿಲ್ಲೆಯ ಕಾರ್ಮಿಕ ಸಂಘಟನೆಗಳ ಮುಖಂಡರೊಂದಿಗೆ ನಡೆದ ಸಭೆಯಲ್ಲಿ ಸಚಿವರು ಮಾತನಾಡಿದರು.
ನೂತನ ಸಾರಿಗೆ ಮಸೂದೆ ಜಾರಿಗೆ ತರಲು ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿಗೆ ಸೂಚಿಸಿದ್ದಾರೆ. ಸಾರಿಗೆ ಸಚಿವರ ಜತೆಗೂ ಮಾತುಕತೆ ನಡೆಸಲಾಗಿದೆ. ಇನ್ನು 2-3 ವಾರದೊಳಗೆ ಸಚಿವ ಸಂಪುಟದ ಒಪ್ಪಿಗೆಗೆ ಮಸೂದೆ ಬರಲಿದೆ ಎಂದರು.
ಸಾರಿಗೆ ಕಾರ್ಮಿಕರಿಗೆ ಗುರುತಿನ ಚೀಟಿ
ಪ್ರಸ್ತುತ ಶೇ.11ರಷ್ಟು ಸಾರಿಗೆ ಸೆಸ್ ಸಂಗ್ರಹವಾಗುತ್ತಿದೆ. ಅದರಲ್ಲಿ ಶೇ.27ರಷ್ಟು ಮೊತ್ತವನ್ನು ಪಡೆದು ರಾಜ್ಯಾದ್ಯಂತ ಇರುವ 40-50 ಲಕ್ಷದಷ್ಟು ಸಾರಿಗೆ ವ್ಯವಸ್ಥೆಯ ಕಾರ್ಮಿಕರಿಗೆ (ಗ್ಯಾರೇಜ್ ಕಾರ್ಮಿಕರು ಸೇರಿ) ಗುರುತಿನ ಚೀಟಿಯ ಜತೆಗೆ ಸಾಮಾಜಿಕ ಭದ್ರತಾ ಯೋಜನೆಗಳನ್ನು ನೀಡುವುದು ಸೇರಿದಂತೆ ಅನೇಕ ಅಂಶಗಳು ಸಾರಿಗೆ ಮಸೂದೆಯಲ್ಲಿ ಇರಲಿವೆ ಎಂದು ಸಂತೋಷ್ ಲಾಡ್ ತಿಳಿಸಿದರು.
ಕಾರ್ಮಿಕ ಕಲ್ಯಾಣ ಮಂಡಳಿ ದೇಶದಲ್ಲೇ ನಂಬರ್ ಒನ್ ಸ್ಥಾನಕ್ಕೆ
ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ 13 ಸಾವಿರ ಕೋಟಿ ರೂ. ಇದ್ದ ಆದಾಯ ಈಗ 6 ಕೋಟಿ ರೂ.ಗೆ ಇಳಿದಿದೆ. ಇಲಾಖೆಯ ಆದಾಯ ಹೆಚ್ಚಿಸಲು ಕಟ್ಟಡಗಳ ಜಿಯೋ ಮ್ಯಾಪಿಂಗ್ ಮಾಡಲು ಮುಂದಾಗಿದ್ದೇವೆ. ಈ ಮೂಲಕ ಸೆಸ್ ಕಟ್ಟಡ ಕಟ್ಟಡಗಳನ್ನು ಪತ್ತೆ ಹಚ್ಚಿ, ಸೆಸ್ ಸಂಗ್ರಹ ಮಾಡಲಾಗುವುದು. ಮಂಡಳಿಯನ್ನು ಮುಂದಿನ ದಿನಗಳಲ್ಲಿ ದೇಶದಲ್ಲೇ ನಂ.1 ಸ್ಥಾನಕ್ಕೆ ತರುವುದಾಗಿ ಹೇಳಿದರು.
ಸಿನಿ ಮಸೂದೆ ಕೂಡ ಶೀಘ್ರ:
ಸಿನಿ ಸೆಸ್ ಸಂಗ್ರಹಿಸುವ ಮಸೂದೆಯ ಪ್ರಸ್ತಾವನೆಯನ್ನು ಸರ್ಕಾರದ ಮುಂದೆ ಇಟ್ಟಿದ್ದೇವೆ. ಚಿತ್ರ ಮಂದಿರಗಳು ಸಂಗ್ರಹಿಸುವ ಪ್ರತಿ ಟಿಕೆಟ್ ಮೊತ್ತದ ಶೇ. 1ರಷ್ಟು ಸೆಸ್ ಪಡೆದು, ಅದಕ್ಕೆ ಸರ್ಕಾರದಿಂದ ಸ್ವಲ್ಪ ಮೊತ್ತ ಹಾಕಿ ಚಿತ್ರರಂಗದ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಯೋಜನೆ ಜಾರಿಗೊಳಿಸುವ ಉದ್ದೇಶವೂ ಇದೆ ಎಂದರು.
ಸಭೆಯಲ್ಲಿ ಕಾರ್ಮಿಕ ಮುಂದಾಳು ವಸಂತ ಶೆಟ್ಟಿ ಮಾತನಾಡಿ, ಕಾರ್ಮಿಕರ ಮಕ್ಕಳ ವಿದ್ಯಾರ್ಥಿವೇತನ 2 ವರ್ಷಗಳದ್ದು ಬಾಕಿ ಇದೆ. ಅಲ್ಲದೆ, ಅದರ ಮೊತ್ತವನ್ನೂ ಕಡಿಮೆ ಮಾಡಲಾಗಿದೆ. ಕಾರ್ಮಿಕರ ಪಿಂಚಣಿಗೆ 60 ವರ್ಷಕ್ಕಿಂತ ಒಂದು ದಿನ ಮೊದಲು ಅರ್ಜಿ ಹಾಕಿದರೂ ನಂತರ ಅರ್ಜಿ ಹಾಕಲು ಅವಕಾಶವಿಲ್ಲದೆ ಪಿಂಚಣಿ ಸಿಗದಂತಾಗಿದೆ. ಅಲ್ಲದೆ, ಪಿಂಚಣಿಗೆ ಅರ್ಜಿ ಹಾಕಲು 60 ವರ್ಷ ದಾಟಿ ಕೇವಲ 6 ತಿಂಗಳು ಮಾತ್ರ ಕಾಲಾವಕಾಶವಿದೆ, ಅದನ್ನು ವಿಸ್ತರಿಸಬೇಕು ಎಂದು ಒತ್ತಾಯಿಸಿದರು. ಪ್ರತಿಕ್ರಿಯಿಸಿದ ಸಚಿವ ಸಂತೋಷ್ ಲಾಡ್, ಅರ್ಜಿ ಹಾಕುವ ಕಾಲಾವಧಿಯನ್ನು ಒಂದು ವರ್ಷಕ್ಕೆ ವಿಸ್ತರಣೆ ಮಾಡಲು ಚಿಂತನೆ ನಡೆಸುವುದಾಗಿ ಭರವಸೆ ನೀಡಿದರು.
ಗಮನ ಸೆಳೆದ ಬೀಡಿ ಕಾರ್ಮಿಕರ ಸಮಸ್ಯೆ
ಬೀಡಿ ಕಾರ್ಮಿಕರ ಸಮಸ್ಯೆ ಕುರಿತು ಮಾತನಾಡಿದ ಕಾರ್ಮಿಕ ಮುಖಂಡ ಬಾಲಕೃಷ್ಣ ಶೆಟ್ಟಿ, ಜಿಲ್ಲೆಯಲ್ಲಿ 3 ಲಕ್ಷ ಬೀಡಿ ಕಾರ್ಮಿಕರಿದ್ದು, ಅವರಿಗೆ ಸಿಗಬೇಕಾದ ತುಟ್ಟಿಭತ್ಯೆ ಮತ್ತು ಕನಿಷ್ಠ ಕೂಲಿಯನ್ನು ನೀಡದೆ ವಂಚಿಸಲಾಗುತ್ತಿದೆ ಎಂದು ಗಮನ ಸೆಳೆದರು.
ಇನ್ನೊಂದು ವಾರದೊಳಗೆ ಕಾರ್ಮಿಕ ಇಲಾಖೆ ಕಾರ್ಯದರ್ಶಿ ಜತೆ ಎರಡೂ ಕಡೆಯ ಮುಖಂಡರ ಸಭೆ ನಡೆಸಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಸಚಿವ ಲಾಡ್ ತಿಳಿಸಿದರು.
ಗುತ್ತಿಗೆದಾರರಿಗೆ ನೋಟಿಸ್ ನೀಡುವಂತೆ ಸೂಚನೆ
ಜಿಲ್ಲಾಸ್ಪತ್ರೆ ವೆನ್ಲಾಕ್‌ನ ಹೊರಗುತ್ತಿಗೆ ಕಾರ್ಮಿಕರಿಗೆ ಪಿಎಫ್, ಇಎಸ್ಐ ಸೌಲಭ್ಯ ನೀಡುತ್ತಿಲ್ಲ ಎಂದು ಮುಖಂಡ ಲಾರೆನ್ಸ್ ಡಿಸೋಜ ತಿಳಿಸಿದರು. ಪ್ರತಿಕ್ರಿಯಿಸಿದ ಸಚಿವ ಸಂತೋಷ್ ಲಾಡ್, ಗುತ್ತಿಗೆದಾರರಿಗೆ ಈ ಕುರಿತು ಕಾರಣ ಕೇಳಿ ನೋಟಿಸ್ ನೀಡಿ ಸಮಸ್ಯೆ ಇತ್ಯರ್ಥಗೊಳಿಸುವಂತೆ ಕಾರ್ಮಿಕ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕಾರ್ಮಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಮುಹಮ್ಮದ್ ಮೊಹಿಸೀನ್, ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಡಿ.ಭಾರತಿ, ಅಪರ ಕಾರ್ಮಿಕ ಆಯುಕ್ತ ಮಂಜುನಾಥ್, ಕಾರ್ಖಾನೆ ಮತ್ತು ಬಾಯ್ಲರುಗಳ ಇಲಾಖೆ ಅಪರ ನಿರ್ದೇಶಕ ನಂಜಪ್ಪ, ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರು ಸಭೆಯಲ್ಲಿದ್ದರು.
ಕುಡಿದ ಮತ್ತಿನಲ್ಲಿ ಚಾಕು ಹಿಡಿದು ಓಡಾಟ – ಸ್ಥಳೀಯರಿಗೆ ಬೆದರಿಕೆ ಹಾಕುವ ದೃಶ್ಯ ಸೆರೆ
ಇಸ್ರೇಲ್‌ಗೆ ಪಾಕ್ ಸಪೋರ್ಟ್: ಹಮಾಸ್ ವಿರುದ್ಧ ಶಸ್ತ್ರಾಸ್ತ್ರ ಸರಬರಾಜು..?
World Cup 2023ಯಲ್ಲಿ ಭಾರತಕ್ಕೆ ಸೋಲು: ಟಿವಿ ಮುಂದೆ ಕುಸಿದು ಬಿದ್ದು ಅಭಿಮಾನಿ ಸಾವು