Spiritual: ಇಂದಿನಿಂದ ನವರಾತ್ರಿ ಶುರುವಾಗಿದೆ. ಮೊದಲ ದಿನವಾದ ಇಂದು ಪಾರ್ವತಿಯ ರೂಪವಾದ ಶೈಲಪುತ್ರಿಯನ್ನು ಆರಾಧಿಸಲಾಗುತ್ತದೆ. ಪರ್ವತ ರಾಜನಾದ ಹಿಮವಂತನ ಪುತ್ರಿಯೇ ಶೈಲ ಪುತ್ರಿ.
ದಕ್ಷ ರಾಜನ ಪುತ್ರಿಯಾಗಿ ಜನಿಸಿದ್ದ ದಾಕ್ಷಾಯಿಣಿ ಶಿವನನ್ನು ವರಿಸಿದ ಬಳಿಕ, ತಂದೆಯ ಸಿಟ್ಟಿಗೆ ಗುರಿಯಾಗುತ್ತಾಳೆ. ದಕ್ಷ ರಾಜ ಯಜ್ಞ ಮಾಡಲು ನಿರ್ಧರಿಸಿ ಎಲ್ಲರನ್ನೂ ಕರೆಯುತ್ತಾನೆ. ಆದರೆ ತನ್ನ ಮಗಳು ದಾಕ್ಷಾಯಿಣಿ- ಶಿವನನ್ನು ಮಾತ್ರ ಆಹ್ವಾನಿಸುವುದಿಲ್ಲ. ಆದರೂ ತಂದೆಯ ಮೇಲಿನ ಪ್ರೀತಿ, ತವರಿನ ಮೇಲಿನ ಪ್ರೀತಿಯಿಂದ ದಾಕ್ಷಾಯಿಣಿ ಯಜ್ಞಕ್ಕೆ ಹೋಗುತ್ತಾಳೆ. ಆದರೆ ದಕ್ಷ ಅಲ್ಲಿ ಶಿವ ಮತ್ತು ದಾಕ್ಷಾಯಿಣಿಯನ್ನು ಅವಮಾನಿಸುತ್ತಾನೆ.
ಆಗ ಸಿಟ್ಟಿನಿಂದ ದಾಕ್ಷಾಯಿಣಿ ಅಗಿನ ಕುಂಡಕ್ಕೆ ಹಾರಿ ಪ್ರಾಣತ್ಯಾಗ ಮಾಡುತ್ತಾಳೆ. ಅದೇ ಸತಿ ಮುಂದಿನ ಜನ್ಮದಲ್ಲಿ ಹಿಮವಂತನ ಪುತ್ರಿ ಶೈಲಪುತ್ರಿಯಾಗಿ ಜನ್ಮ ತಾಳುತ್ತಾಳೆ. ಮತ್ತೆ ಶಿವನ ಪತ್ನಿಯಾಗುತ್ತಾಳೆ. ಬಿಳಿ ಸೀರೆಯನ್ನುಟ್ಟು, ಶ್ವೇತ ವರ್ಣದ ವೃಷಭನ ಮೇಲೆ ಆಸೀನಳಾಗಿರುವ ಶೈಲಪುತ್ರಿ, ಬಲಗೈನಲ್ಲಿ ತ್ರಿಶೂಲ, ಎಡಗೈಯಲ್ಲಿ ಕಮಲದ ಹೂವನ್ನಿರಿಸಿಕೊಂಡಿರುತ್ತಾಳೆ.
ಇನ್ನು ಶೈಲಪುತ್ರಿಯ ಹೆಸರಿನ ಅರ್ಥವೇನು ಎಂದರೆ, ಶೈಲ್ ಎಂದರೆ ಪರ್ವತ ಎಂದರ್ಥ. ಪರ್ವತ ರಾಜ ಹಿಮವಂತನ ಪುತ್ರಿಯಾದ ಕಾರಣಕ್ಕೆ, ಆಕೆಯನ್ನು ಶೈಲ ಪುತ್ರಿ ಎಂದು ಕರೆಯಲಾಗಿದೆ. ಈ ದಿನ ಶೈಲಪುತ್ರಿಗೆ ಸಂಬಂಧಿಸಿದ ಮಂತ್ರವನ್ನು 108 ಬಾರಿ ಪಠಿಸಬೇಕು ಎಂದು ಹೇಳಲಾಗುತ್ತದೆ. ಆ ಮಂತ್ರ ಹೀಗಿದೆ..
ಓಂ ದೇವಿ ಶೈಲಪುತ್ರಿಯೇ ನಮಃ
ಇನ್ನೊಂದು ಮಂತ್ರ, ಯಾ ದೇವಿ ಸರ್ವಭೂತೇಷು, ಮಾ ಶೈಲಪುತ್ರಿ ರೂಪೇಣ ಸಂಸ್ಥಿತಾ
ನಮಸ್ತಸ್ಯೆ ನಮಸ್ತಸ್ಯೆ ನಮಸ್ತಸ್ಯೆ ನಮೋನಮಃ
ಇದನ್ನು ಜಪಿಸುವ ಮುನ್ನ ಮದ್ಯ ಮಾಂಸದ ಸೇವನೆ ಮಾಡಿರಬಾರದು. ಮುಟ್ಟು, ಸೂತಕ, ಅಮೆ ಇರುವ ಸಮಯದಲ್ಲಿ ಇದನ್ನು ಜಪಿಸದಿದ್ದರೆ ಉತ್ತಮ. ಇನ್ನು ಬೆಳಿಗ್ಗೆ ಸ್ನಾನದ ಬಳಿಕ ಅಥವಾ ಸಂಜೆ ದೀಪ ಹಚ್ಚಿದ ಬಳಿಕ ಇದನ್ನು ಜಪಿಸಿ.


