ಉತ್ತರಾಖಂಡ್: ಸಾಮಾನ್ಯವಾಗಿ ಒಂದು ಹೆರಿಗೆ ಆಸ್ಪತ್ರೆಯಲ್ಲೇ ಒಂದಿಡೀ ದಿನದಲ್ಲಿ ಹೆಣ್ಣು ಹಾಗೂ ಗಂಡು ಶಿಶುಗಳು ಜನಿಸುತ್ತವೆ. ಅಪರೂಪಕ್ಕೊಮ್ಮೆ ಮಾತ್ರ ಬರೀ ಹೆಣ್ಣು ಶಿಶು, ಅಥವಾ ಬರೀ ಗಂಡು ಶಿಶುಗಳು ಜನಿಸಿರುವ ಉದಾಹರಣೆಗಳು ಸಿಕ್ಕಿವೆ. ಆದ್ರೆ ಈ ಜಿಲ್ಲೆಯಲ್ಲಿ ಬರೋಬ್ಬರಿ 3 ತಿಂಗಳ ಅವಧಿಯಲ್ಲಿ ಜನಸಿರುವ ಮಕ್ಕಳ ಪೈಕಿ ಒಂದೇ ಒಂದು ಹೆಣ್ಣು ಶಿಶು ಜನಿಸದೇ ಇರೋದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಹೌದು, ಉತ್ತರಾಖಂಡ ರಾಜ್ಯ ಉತ್ತರಾಕ್ಷಿ ಜಿಲ್ಲೆಯ ಸುಮಾರು 132 ಹಳ್ಳಿಗಳಲ್ಲಿ ಮೂರು ತಿಂಗಳ ಅವಧಿಯಲ್ಲಿ ಜನಿಸಿರುವ 216ಶಿಶುಗಳ ಪೈಕಿ ಒಂದು ಹೆಣ್ಣ ಮಗುವೂ ಜನಿಸಿಲ್ಲವೆಂಬ ಆಘಾತಕಾರಿ ಮಾಹಿತಿ ವರದಿಯೊಂದರಿಂದ ಹೊರಬಿದ್ದಿದೆ. ಇನ್ನು ಈ ರೀತಿ ಘಟನೆ ಕೇವಲ ಕಾಕಾತಾಳಿಯವಾಗಲು ಸಾಧ್ಯವೇ ಇಲ್ಲ. ಇದು ಜಿಲ್ಲೆಯಲ್ಲಿ ಹೆಣ್ಣು ಭ್ರೂಣ ಹತ್ಯೆ ನಿರಂತರವಾಗಿ ನಡೆಯುತ್ತಿದೆ ಅನ್ನೋದ ಸ್ಪಷ್ಟವಾಗಿದೆ ಅಂತ ಸಾಮಾಜಿಕ ಹೋರಾಟಗಾರರು ಆರೋಪಿಸಿದ್ದಾರೆ. ಹೆಣ್ಣು ಭ್ರೂಣ ಹತ್ಯೆ ಅಪರಾಧವೆಂದು ತಿಳಿದಿದ್ದರೂ ಈ ರೀತಿ ಘೋರ ಘಟನೆಗಳು ನಡೆಯುತ್ತಿರೋದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಈ ಕುರಿತು ದಿಗ್ಬ್ರಮೆ ವ್ಯಕ್ತಪಡಿಸಿರೋ ಜಿಲ್ಲಾಡಳಿತ ಲಿಂಗಾನುಪಾತದಲ್ಲಿ ಈ ಮಟ್ಟಿಗಿನ ವ್ಯತ್ಯಯ ಕುರಿತಾಗಿ ಪರಿಶೀಲನೆ ನಡೆಸುತ್ತೇವೆ ಅಂತ ಹೇಳಿದೆ. ಹೆಣ್ಣು ಭ್ರೂಣ ಹತ್ಯೆ ತಡೆ ಹಾಗೂ ಅವರ ಶಿಕ್ಷಣಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಅನುಷ್ಠಾನಕ್ಕೆ ತಂದಿರುವ ಬೇಟಿ ಬಜಾವೋ ಬೇಟಿ ಪಢಾವೋ ಎಂಬ ಮಹತ್ವದ ಯೋಜನೆ ಕುರಿತಾಗಿ ಇದೀಗ ಪ್ರಶ್ನೆ ಉದ್ಬವವಾಗಿದೆ.