Tuesday, November 18, 2025

Latest Posts

ಸಿಎಂ ಏನೇ ಹೇಳಲ್ಲಿ ಭ್ರಷ್ಟಾಚಾರದಲ್ಲಿ ರಾಜ್ಯ ನಂ 1 : ಕೈಗೆ ನುಂಗಲಾರದ ತುಪ್ಪವಾದ್ರಾ ರಾಯರೆಡ್ಡಿ..?

- Advertisement -

Political News: ಕಾಂಗ್ರೆಸ್‌ ಪಕ್ಷದಲ್ಲಿ ತಮ್ಮ ಹೇಳಿಕೆಗಳ ಮೂಲಕವೇ ಗಮನ ಸೆಳೆಯುವ ಕೊಪ್ಪಳ ಯಲಬುರ್ಗಾ ಶಾಸಕ ಹಾಗೂ ಮುಖ್ಯಂತ್ರಿಗಳ ಆರ್ಥಿಕ ಸಲಹೆಗಾರರೂ ಆಗಿರುವ ಬಸವರಾಜ ರಾಯರೆಡ್ಡಿ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ತಮ್ಮ ಕಾಂಗ್ರೆಸ್‌ ಸೇರಿದಂತೆ ಯಾವುದೇ ಪಕ್ಷವಿರಲಿ ರಾಜ್ಯವು ಭ್ರಷ್ಟಾಚಾರದಲ್ಲಿ ಮೊದಲನೇ ಸ್ಥಾನದಲ್ಲಿದೆ ಎನ್ನುವ ಮೂಲಕ ಕೈ ಪಾಳಯದಲ್ಲಿ ಕಂಪನ ಸೃಷ್ಟಿಸಿದ್ದಾರೆ.

ಕೊಪ್ಪಳದಲ್ಲಿ ಪ್ರಾದೇಶಿಕ ಅಸಮತೋಲನಾ ನಿವಾರಣಾ ಸಮಿತಿಯ ಸಭೆಯಲ್ಲಿ ಮಾತನಾಡಿದ್ದ ಅವರು, ರಾಜ್ಯದಲ್ಲಿ ಮಿತಿ ಮೀರಿದ ಭ್ರಷ್ಟಾಚಾರದಿಂದಲೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಈ ಮೊದಲು ಸರ್ಕಾರಿ ಕಟ್ಟಡಗಳೆಲ್ಲ ಅತ್ಯಂತ ಗುಣಮಟ್ಟವನ್ನು ಹೊಂದಿರುತ್ತಿದ್ದವು. ಅವು ಐದರಿಂದ ದಶಕಗಳಷ್ಟು ಬಾಳಿಕೆಯಲ್ಲಿರುತ್ತಿದ್ದವು, ಆದರೆ ಇತ್ತೀಚಿನ ಕಟ್ಟಡಗಳೂ ಹತ್ತು ವರ್ಷಗಳ ಮುನ್ನವೇ ನೆಲಕಚ್ಚುತ್ತಿವೆ ಎಂದು ಪರೋಕ್ಷವಾಗಿ ಕಾಂಗ್ರೆಸ್‌ ಸರ್ಕಾರದಲ್ಲೂ ಭ್ರಷ್ಟಾಚಾರವಿದೆ ಎನ್ನುವುದನ್ನು ಒಪ್ಪಿಕೊಂಡಿರುವುದು ಕಾಂಗ್ರೆಸ್‌ ಸರ್ಕಾರಕ್ಕೆ ನುಂಗಲಾರದ ತುಪ್ಪವಾಗಿ ಪರಿಣಮಿಸಿದೆ.

ಕಲ್ಯಾಣ ಕರ್ನಾಟಕದಲ್ಲಿ ಹೆಚ್ಚಿದ ಕರಪ್ಷನ್..

ಇನ್ನೂ ಪ್ರಮುಖವಾಗಿ ಕಲ್ಯಾಣ ಕರ್ನಾಟಕದಲ್ಲಂತೂ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಇಷ್ಟೊಂದು ದೊಡ್ಡ ಮಟ್ಟದಲ್ಲಿ ಭ್ರಷ್ಟಾಚಾರ ನಡೆಯುತ್ತಿರಬೇಕಾದರೆ ಇನ್ನೆಲ್ಲಿಯ..? ಪ್ರಾದೇಶಿಕ ಅಸಮಾನತೆ ಹೋಗುತ್ತದೆ ಎಂದು ಅವರು ಬೇಸರ ಹೊರಹಾಕಿದ್ದಾರೆ. ಅಲ್ಲದೆ ಈ ಜನಪ್ರತಿನಿಧಿಗಳು ತಮ್ಮ ಜವಾಬ್ದಾರಿಗಳನ್ನು ನಿಭಾಯಿಸಿದರೆ, ಆಗ ಅವರು ಹೇಗಿರುತ್ತಾರೋ, ಅಧಿಕಾರಿಗಳೂ ಸಹ ಅದೇ ರೀತಿ ಇರುತ್ತಾರೆ. ಯಾರೇನೇ ಅಂದುಕೊಡರು, ಅದರಲ್ಲೂ ಮುಖ್ಯಮಂತ್ರಿಗಳೇ ಏನಾದರೂ ಹೇಳಲಿ ಅದರೂ ಕೂಡ ಈ ಭ್ರಷ್ಟಾಚಾರ ವಿಚಾರದಲ್ಲಿ ನನ್ನ ಹೇಳಿಕೆಗೆ ನಾನು ಬದ್ಧನಾಗಿದ್ದೇನೆ ಎಂದು ರಾಯರೆಡ್ಡಿ ಖಡಕ್‌ ಆಗಿಯೇ ತಮ್ಮ ನಿಲುವು ವ್ಯಕ್ತಪಡಿಸಿದ್ದಾರೆ.

ನನ್ನ ಹೆಸರು ಉಲ್ಲೇಖಿಸಿ..

ಅಲ್ಲದೆ ರಾಜ್ಯದಲ್ಲಿ 22 ವರ್ಷಗಳಷ್ಟು ಹಳೆಯದಾದ ಡಿ.ಎಂ.ನಂಜುಂಡಪ್ಪ ವರದಿ ಕುರಿತು ಅಧ್ಯಯನ ನಡೆಸಲು ರಾಜ್ಯ ಸರ್ಕಾರ ಆರ್ಥಿಕ ತಜ್ಞ ಪ್ರೊ. ಎಂ. ಗೋವಿಂದರಾವ್ ಅಧ್ಯಕ್ಷತೆಯಲ್ಲಿ ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ ರಚಿಸಿದೆ. ಭ್ರಷ್ಟಾಚಾರದ ಕುರಿತ ಈ ಹೇಳಿಕೆಯನ್ನು ನನ್ನ ಹೆಸರನ್ನು ಉಲ್ಲೇಖಿಸಿಯೇ ಶಿಫಾರಸಿನಲ್ಲಿ ಸೇರಿಸಿ ಎಂದು ಸಮಿತಿಯ ಸದಸ್ಯ ಕಾರ್ಯದರ್ಶಿ ವಿಶಾಲ್ ಆರ್. ಅವರಿಗೆ ಶಾಸಕ ರಾಯರೆಡ್ಡಿ ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಇನ್ನೂ ಕಾಂಗ್ರೆಸ್‌ ಶಾಸಕರ ಈ ಹೇಳಿಕೆಯು ಇದೀಗ ದೋಸ್ತಿಗಳಿಗೆ ಪ್ರಬಲವಾದ ಅಸ್ತ್ರವಾಗಿದ್ದು, ಈ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ರಾಜ್ಯ ಸರ್ಕಾರದ ಕಿಡಿಕಾರಿದ್ದಾರೆ.

ಕರ್ನಾಟಕ ವಿಶ್ವ ಮಟ್ಟದಲ್ಲಿ ತಲೆ ತಗ್ಗಿಸುವ ಸ್ಥಿತಿ..

ಇನ್ನೂ ದೇಶದಲ್ಲೇ ಕರ್ನಾಟಕ ಭ್ರಷ್ಟಾಚಾರದಲ್ಲಿ ನಂಬರ್ ಒನ್ ಎಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಹೇಳುವ ಮೂಲಕ ಕಾಂಗ್ರೆಸ್ ಸರ್ಕಾರದ ಕರಾಳ ಭ್ರಷ್ಟತೆಯ ಮುಖವಾಡವನ್ನು ಬಯಲು ಮಾಡಿದ್ದಾರೆ. ಅಲ್ಲದೆ ರಾಜ್ಯದ ಘನತೆ ಕುಗ್ಗಿದ ಸ್ವರೂಪವನ್ನೂ ಸಹ ಅವರು ಬಿಚ್ಚಿಟ್ಟಿದ್ದಾರೆ ಆ ಮೂಲಕ ರಾಷ್ಟ್ರ ಮಟ್ಟದಲ್ಲಿ ರಾಜ್ಯ ನಿಮ್ಮ ಆಡಳಿತದಲ್ಲಿ ಸಂಪೂರ್ಣ ಭ್ರಷ್ಟತೆಯ ಕಪ್ಪುಮಸಿ ಮೆತ್ತಿಕೊಂಡಿರುವುದನ್ನು ಅನಾವರಣ ಮಾಡುವ ಮೂಲಕ ಕರ್ನಾಟಕ ವಿಶ್ವಮಟ್ಟದಲ್ಲಿ ತಲೆತಗ್ಗಿಸುವ ಪರಿಸ್ಥಿತಿ ಇರುವುದನ್ನು ವಿವರಿಸಿದ್ದಾರೆ ಎಂದು ಬಿಜೆಪಿ ರಾಜ್ಯಧ್ಯಕ್ಷ ಬಿ.ವೈ.ವಿಜಯೇಂದ್ರ ಸಿಎಂ ಸಿದ್ದರಾಮಯ್ಯ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.

ಸರ್ಕಾರದ ವಿರುದ್ದ ಸಾಲು ಸಾಲು ಪೋಸ್ಟ್ ಮಾಡಿರುವ ಅವರು, ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಭ್ರಷ್ಟಾಚಾರ, ಲೂಟಿಕೋರತನ ಕಾಂಗ್ರೆಸ್ ಸರ್ಕಾರದ ಅವಿಭಾಜ್ಯ ಅಂಗ ಎಂಬುದನ್ನು ಸ್ವತಃ ನಿಮ್ಮ ಆರ್ಥಿಕ ಸಲಹೆಗಾರರೂ ಆಗಿರುವ ಶಾಸಕ ಬಸವರಾಜ ರಾಯರೆಡ್ಡಿ ಅವರೇ ಸ್ಪಷ್ಟವಾಗಿ ಬಹಿರಂಗಪಡಿಸಿದ್ದಾರೆ. ಎಂದು ಕಿಡಿಕಾರಿದ್ದಾರೆ. ಜನಪ್ರತಿನಿಧಿಗಳು ಹೇಗೆ ಇರುತ್ತಾರೊ ಅದರಂತೆಯೇ ಅಧಿಕಾರಿಗಳೂ ಇರುತ್ತಾರೆ. ಮುಖ್ಯಮಂತ್ರಿ ಏನೇ ಹೇಳಿದರೂ ಭ್ರಷ್ಟಾಚಾರದ ಕುರಿತು ನನ್ನ ವೈಯಕ್ತಿಕ ಅಭಿಪ್ರಾಯ ಇದೇ ಇರುತ್ತದೆ ಎಂದು ಹೇಳುವ ಮೂಲಕ ಯಥಾರಾಜ ತಥಾ ಮಂತ್ರಿಗಳು, ಅಧಿಕಾರಿಗಳು ಎಂಬ ಮಾತು ನಿಮ್ಮ ಆಡಳಿತದಲ್ಲಿ ಅಕ್ಷರಶಃ ಅನ್ವಯಿಸುತ್ತಿದೆ ಎನ್ನುವುದನ್ನು ಹೇಳುವ ಮೂಲಕ ವಾಸ್ತವ ಸ್ಥಿತಿಯ ಮೇಲೆ ನೇರವಾಗಿ ಬೆಳಕು ಚೆಲ್ಲಿದ್ದಾರೆ ಎಂದು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ವಿಜಯೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಒಟ್ನಲ್ಲಿ.. ಈ ಭ್ರಷ್ಟಚಾರದ ಭೂತ ಎಲ್ಲ ಸರ್ಕಾರಗಳಲ್ಲೂ ಇದೆ ಎಂದು ಹೇಳುವ ಮೂಲಕ ಶಾಸಕ ರಾಯರೆಡ್ಡಿ ಅವರು ಇಡೀ ರಾಜಕೀಯ ವ್ಯವಸ್ಥೆಯ ಕರಾಳ ಮುಖವನ್ನು ಬಯಲು ಮಾಡಿದ್ದಾರೆ. ಅದರಲ್ಲೂ ಆಡಳಿತ ಸರ್ಕಾರದಲ್ಲಿದ್ದುಕೊಂಡೇ ಈ ವಿಚಾರವನ್ನು ಬೋಲ್ಡ್‌ ಆಗಿಯೇ ಹೇಳಿರುವ ಅವರು ತಮ್ಮ ಸರ್ಕಾರವೆಂದು ಮುಚ್ಚಿಕೊಳ್ಳುವ ಪ್ರಯತ್ನಕ್ಕೆ ಮುಂದಾಗಲಿಲ್ಲ. ಬದಲಿಗೆ ನೇರವಾಗಿ ವಿಚಾರ ಹೊರಗೆಡವಿದ್ದಾರೆ. ಆದರೆ ರಾಜಕೀಯ ಕೆಸರೆರಚಾಟಕ್ಕೆ ಈ ವಿಚಾರ ಕಾರಣವಾಗಬಹುದಷ್ಟೇ.

ಇಷ್ಟು ದಿನ ತಮ್ಮ ಭ್ರಷ್ಟಾಚಾರಕ್ಕೆ ತೇಪೆ ಹಚ್ಚಲು ವಿಫಲ ಪ್ರಯತ್ನ ಮಾಡುತ್ತಿದ್ದ ಕೆಲ ನಾಯಕರು ಇದೀಗ ತಮ್ಮ ಬಾಯಿಮೇಲೆ ಬೆರಳಿಟ್ಟು ಕುಳಿತುಕೊಳ್ಳುವಂತಾಗಿದೆ. ಅದೇನೆ ಇರಲಿ.. ಯಾವುದೇ ಸರ್ಕಾರಗಳು ಅಧಿಕಾರಕ್ಕೆ ಬಂದರೂ ಈ ಭ್ರಷ್ಟಚಾರ ಇದ್ದೇ ಇರುತ್ತದಂತೆ, ಆದರೆ ವಿಶೇಷವಾಗಿ ಕಲ್ಯಾಣ ಕರ್ನಾಟಕದ ವಿಚಾರದಲ್ಲಿ ಇದರ ತಾಂಡವ ಅಧಿಕವಾಗಿದೆ ಯಾಕೆಂದರೆ ಅಲ್ಲಿನ ಜನರಿಗೆ ಸರ್ಕಾರದ ಯೋಜನೆಗಳ ಅರಿವಿನ ಕೊರತೆ ಇರಬಹುದು ಅಥವಾ ರಾಜಕೀಯ ವ್ಯವಸ್ಥೆಯ ಒತ್ತಡವಿರಬಹುದು ಅಲ್ಲದೆ ನಮಗ್ಯಾಕೆ ಬೇಕು ಎನ್ನುವ ಅಸಡ್ಡೆಯೂ ಇರಬಹುದುದ.

ಹೀಗಾಗಿ ಈ ಜನರ ಪರಿಸ್ಥಿತಿಗಳನ್ನು ಇಲ್ಲಿನ ರಾಜಕಾರಣಿಗಳು ಬಂಡವಾಳ ಮಾಡಿಕೊಂಡಂತೆ ಕಂಡು ಬರುತ್ತಿದೆ. ಫೈನಲ್ಲಿ ರಾಯರೆಡ್ಡಿ ಅವರಂತಹ ಮುಚ್ಚು ಮರೆಯಿಲ್ಲದ ನಾಯಕರು ಜನರ ಆಶೋತ್ತರಗಳನ್ನು ಈಡೇರಿಸುವುದರ ಜೊತೆಗೆ ಪಾರದರ್ಶಕ ಅಭಿವೃದ್ದಿ ಕೆಲಸಗಳನ್ನು ಮಾಡಿದರೆ ಕಲ್ಯಾಣ ಕರ್ನಾಟಕದ ಜೊತೆಗೆ ರಾಜ್ಯದ ಭ್ರಷ್ಟಚಾರ ಇಲ್ಲವಾಗಿಸಬಹುದು..

- Advertisement -

Latest Posts

Don't Miss