ಬೆಂಗಳೂರಿನ ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರದ ಬಳಿ ಇರುವ ಪ್ರತಿಷ್ಠಿತ ಎಲೆಕ್ಟ್ರಾನಿಕ್ಸ್ ಕಂಪನಿಯ ಶೌಚಾಲಯದಲ್ಲಿ ನವಜಾತ ಶಿಶುವಿನ ಶವ ಪತ್ತೆಯಾದ ಘಟನೆ ಎಲ್ಲರನ್ನೂ ಬೆಚ್ಚಿ ಬೀಳಿಸಿದಿ. ಶೌಚಾಲಯಕ್ಕೆ ತೆರಳಿದ್ದ ಮಹಿಳೆಯೊಬ್ಬರಿಗೆ ಆಕಸ್ಮಿಕವಾಗಿ ಹೆರಿಗೆ ಆಗಿದೆ ಎಂದು ಶಂಕಿಸಲಾಗಿದೆ. ಕಂಪನಿಯ ಬಾತ್ರೂಮ್ನ ಕಸದ ಬುಟ್ಟಿಯಲ್ಲಿ ಶಿಶುವಿನ ಶವ ಕಂಡು ಬಂದಿದ್ದು, ಇದರಿಂದ ಸಿಬ್ಬಂದಿ ಬೆಚ್ಚಿಬಿದ್ದಿದ್ದಾರೆ.
ಹೆರಿಗೆಯ ನಂತರ, ಗಾಬರಿಗೊಂಡ ಮಹಿಳೆ ನವಜಾತ ಶಿಶುವಿಗೆ ಹಾನಿ ಮಾಡಿ, ಶವವನ್ನು ಕಸದ ಬುಟ್ಟಿಗೆ ಎಸೆದಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ನಂತರ ಮತ್ತೊಬ್ಬ ಮಹಿಳೆ ಶೌಚಾಲಯ ಬಳಸಲು ಹೋಗಿದ್ದಾಗ ಈ ಘಟನೆ ಬೆಳಕಿಗೆ ಬಂದಿದೆ. ಮಹಿಳೆ ಮದುವೆಯಾಗದೆ ಗರ್ಭಿಣಿಯಾಗಿದ್ದಿರಬಹುದು ಎಂಬ ಶಂಕೆಯೂ ವ್ಯಕ್ತವಾಗಿದ್ದು, ಈ ಹಿನ್ನೆಲೆಯಲ್ಲಿ ಘಟನೆ ಇನ್ನಷ್ಟು ಗಂಭೀರ ಸ್ವರೂಪ ಪಡೆದುಕೊಂಡಿದೆ.
ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಿಶುವಿನ ಸಾವಿನ ನಿಖರ ಕಾರಣವನ್ನು ತಿಳಿಯಲು ಪೋಸ್ಟ್ಮಾರ್ಟಂ ವರದಿ ನಿರೀಕ್ಷಿಸಲಾಗುತ್ತಿದೆ. ಜೊತೆಗೆ, ಸಂಬಂಧಿತ ಮಹಿಳೆಯನ್ನು ಪತ್ತೆಹಚ್ಚಲು ತನಿಖೆ ಮುಂದುವರಿದಿದೆ. ಈ ಘಟನೆ ಕಂಪನಿ ವಲಯದಲ್ಲೇ ಆತಂಕ ಮೂಡಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿಯೂ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.




