Dharwad News: ಧಾರವಾಡ: ಕಳೆದ ಕೆಲವು ದಿನಗಳಿಂದ ಉತ್ತರ ಕರ್ನಾಟಕದ ಜನತೆಯಲ್ಲಿ ಆತಂಕ ಮೂಡಿಸಿದ್ದ ‘ಧಾರವಾಡ ಆಕಾಶವಾಣಿ ಪ್ರಾದೇಶಿಕ ಕೇಂದ್ರ’ದ ಸ್ಥಳಾಂತರ ಪ್ರಕ್ರಿಯೆಗೆ ಈಗ ಅಧಿಕೃತವಾಗಿ ಬ್ರೇಕ್ ಬಿದ್ದಿದೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರ ಮನವಿಗೆ ಸ್ಪಂದಿಸಿರುವ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು, ಈ ಕೇಂದ್ರವನ್ನು ಧಾರವಾಡದಲ್ಲಿಯೇ ಮುಂದುವರಿಸಲು ಆದೇಶಿಸಿದೆ.
ಧಾರವಾಡದ ಆಕಾಶವಾಣಿ ಕೇಂದ್ರವನ್ನು ಬೆಂಗಳೂರಿಗೆ ಸ್ಥಳಾಂತರಿಸಲು ಪ್ರಸಾರ ಭಾರತಿಯ ಸಕ್ಷಮ ಪ್ರಾಧಿಕಾರವು ಈ ಹಿಂದೆ ನಿರ್ಧಾರ ಕೈಗೊಂಡಿತ್ತು. ಸಾಂಸ್ಕೃತಿಕ ನಗರಿ ಧಾರವಾಡದ ಅಸ್ಮಿತೆಯಂತಿದ್ದ ಈ ಕೇಂದ್ರದ ಸ್ಥಳಾಂತರದ ಸುದ್ದಿ ಹೊರಬೀಳುತ್ತಿದ್ದಂತೆ, ಉತ್ತರ ಕರ್ನಾಟಕದ ಬುದ್ಧಿಜೀವಿಗಳು, ಸಾಹಿತಿಗಳು ಹಾಗೂ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.
ವಿಷಯದ ಗಂಭೀರತೆಯನ್ನು ಅರಿತ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು, ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದರು. ಧಾರವಾಡ ಆಕಾಶವಾಣಿ ಕೇಂದ್ರವು ಕೇವಲ ಒಂದು ಕಚೇರಿಯಲ್ಲ, ಅದು ಈ ಭಾಗದ ಕಲೆ, ಸಂಸ್ಕೃತಿ ಮತ್ತು ರೈತರ ಧ್ವನಿಯಾಗಿದೆ. ಅದರ ಕಾರ್ಯವ್ಯಾಪ್ತಿ ಮತ್ತು ಅವಶ್ಯಕತೆಯನ್ನು ಮನವರಿಕೆ ಮಾಡಿಕೊಡುವಲ್ಲಿ ಜೋಶಿಯವರು ಯಶಸ್ವಿಯಾಗಿದ್ದಾರೆ.
”ನಮ್ಮ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು, ಆಕಾಶವಾಣಿ ಕೇಂದ್ರವನ್ನು ಧಾರವಾಡದಲ್ಲಿಯೇ ಮುಂದುವರಿಸಲು ಆದೇಶಿಸಿದ್ದಾರೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರು ಹಾಗೂ ಅಶ್ವಿನಿ ವೈಷ್ಣವ್ ಅವರಿಗೆ ಸಮಸ್ತ ಜನರ ಪರವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಟ್ವೀಟ್ ಮೂಲಕ ಸಂತಸ ವ್ಯಕ್ತ ಪಡಿಸಿದ್ದಾರೆ.
ಸಂಗಮೇಶ್ ಸತ್ತೀಗೇರಿ, ಕರ್ನಾಟಕ ಟಿವಿ, ಧಾರವಾಡ




