Political News: ಇಂದು ಬಿಜೆಪಿಗರು ಹುಬ್ಬಳ್ಳಿಯಲ್ಲಿ ನಡೆಸಿದ ಪ್ರತಿಭಟನೆ ಕುರಿತು ಸಿಎಂ ಸಿದ್ದರಾಮಯ್ಯ ಮತ್ತೆ ಟ್ವೀಟ್ ಮಾಡಿದ್ದಾರೆ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಬಾರದು ಎಂದು ಬಿಜೆಪಿ ಪ್ರತಿಭಟನೆ ನಡೆಸುತ್ತಿದೆಯೇ? ಇನ್ಮುಂದೆ ತಪ್ಪಿತಸ್ಥರಿಗೆ ಶಿಕ್ಷೆ ಕೊಡಬಾರದ? ಕಾನೂನು ಏನು ಹೇಳುತ್ತದೆ ಅದರಂತೆ ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ.
ರಾಮಭಕ್ತ, ಕರಸೇವಕ ಎಂದು ಸಮಾಜದೆದುರು ನಕಲಿ ವೇಷ ತೊಟ್ಟು ಮೆರೆಯುವ ಶ್ರೀಕಾಂತ ಪೂಜಾರಿ ಕಾನೂನಿನ ದೃಷ್ಟಿಯಲ್ಲಿ ಒಬ್ಬ ಸಮಾಜಘಾತುಕ ವ್ಯಕ್ತಿ. ತನ್ನ ಅಪರಾಧ ಕೃತ್ಯಗಳಿಂದ ರಕ್ಷಣೆ ಸಿಗಲಿ ಎಂಬ ಕಾರಣಕ್ಕೆ ಧರ್ಮರಕ್ಷಣೆ ನಾಟಕವಾಡುವ ಇಂಥವರನ್ನು ಬಂಧಿಸದೆ, ರಾಜಾರೋಷವಾಗಿ ತಿರುಗಾಡಲು ಬಿಟ್ಟರೆ ಶ್ರೀರಾಮಚಂದ್ರನೂ ಕ್ಷಮಿಸಲಾರ. ಅಕ್ರಮ ಸಾರಾಯಿ ಮಾರಾಟ, ದೊಂಬಿ, ಮಟಕಾ, ಜೂಜಾಟ ಮುಂತಾದ 16 ಸಮಾಜ ಘಾತುಕ ಕೃತ್ಯಗಳಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ವ್ಯಕ್ತಿಯ ಪರವಾಗಿ ಪ್ರತಿಭಟನೆ ನಡೆಸುತ್ತಿರುವ ಬಿಜೆಪಿ ನಾಯಕರು ಈತನ ಎಲ್ಲಾ ಅಪರಾಧ ಕೃತ್ಯಗಳಿಗೆ ತಮ್ಮ ಪಕ್ಷದ ಬೆಂಬಲವಿದೆ ಎಂಬುದನ್ನು ಬಹಿರಂಗವಾಗಿ ಹೇಳಲಿ ಅಥವಾ ಪ್ರತಿಭಟನೆ ಕೈಬಿಟ್ಟು ಸಾರ್ವಜನಿಕವಾಗಿ ಕ್ಷಮೆ ಕೋರಲಿ ಎಂದು ಬಿಜೆಪಿಗರಿಗೆ ಸಿಎಂ ಆಗ್ರಹಿಸಿದ್ದಾರೆ.
ಕಳೆದ 2023ನೇ ಸಾಲಿನಲ್ಲಿ ಹುಬ್ಬಳ್ಳಿ – ಧಾರವಾಡ ಕಮಿಷನರೇಟ್ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ, ಕಳ್ಳತನ, ಸುಲಿಗೆ, ವಂಚನೆ, ದೊಂಬಿ ಮುಂತಾದ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದಂತೆ ಎಲ್.ಪಿ.ಸಿ ( ಕಾನೂನು ವಿಚಾರಣಾ ಪ್ರಮಾಣಪತ್ರ ) ಪ್ರಕರಣಗಳಲ್ಲಿ ಒಟ್ಟು 36 ಜನರನ್ನು ದಸ್ತಗಿರಿ ಮಾಡಲಾಗಿದೆ. ಇದರಲ್ಲಿ ಶ್ರೀಕಾಂತ ಪೂಜಾರಿ 32ನೆಯ ವ್ಯಕ್ತಿ. ಈತನನ್ನು ಕರಸೇವಕನೆಂಬ ಕಾರಣಕ್ಕೆ ಹೊರಗಡೆ ಬಿಡಬೇಕೋ? ಅಥವಾ ಆರೋಪಿ ಎಂಬ ಕಾರಣಕ್ಕೆ ಬಂಧಿಸಬೇಕೋ? ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.