Hubli News: ಹುಬ್ಬಳ್ಳಿ: ರಾಜ್ಯದಲ್ಲಿ ಅಲ್ಪಸಂಖ್ಯಾತರ ಓಲೈಕೆ ರಾಜಕಾರಣ ಉಚ್ಛ ಸ್ಥಿತಿ ತಲುಪುತ್ತಿದೆ. ಇದರಿಂದಾಗಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಇದೇ ರೀತಿಯಲ್ಲಿ ಮುಂದುವರೆದರೇ ಜನರು ಬರುವ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬುದ್ದಿ ಕಲಿಸತ್ತಾರೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಕಿಡಿಕಾರಿದ್ದಾರೆ.
ಕಾಂಗ್ರೆಸ್ ಸರ್ಕಾರ ಯಾವಾಗ ಯಾವಾಗ ಅಧಿಕಾರಕ್ಕೆ ಬಂದಿದೆಯೋ. ಆಗ ಬೆಂಕಿ ಹಚ್ಚುವ ಕೆಲಸ ಆಗಿದೆ. ಈ ಹಿಂದೆ ಹುಬ್ಬಳ್ಳಿ, ಮಂಗಳೂರು ಸೇರಿದಂತೆ ಇನ್ನಿತರ ಕಡೆಗೆ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೇಳಿಬರುತ್ತಿದ್ದವು, ಇದೀಗ ಶಕ್ತಿ ಕೇಂದ್ರ ವಿಧಾನಸೌಧದಲ್ಲಿಯೇ ಪಾಕಿಸ್ತಾನ ಪರವಾಗಿ ಘೋಷಣೆ ಕೂಗಲಾಗಿದೆ. ಆದರೆ ಈವರೆಗೆ ಆರೋಪಿಗಳ ಬಂಧನ ಆಗುತ್ತಿಲ್ಲ. ಇದು ಅಲ್ಪಸಂಖ್ಯಾತರ ತುಷ್ಟಿಕರಣ ರಾಜಕಾರಣವಾಗಿದೆ ಎಂದು ಹರಿಹಾಯ್ದರು.
ರಾಜ್ಯಸಭಾ ಚುನಾವಣೆ ವೇಳೆ ನಾಸಿರ್ ಹುಸೇನ್ ಬೆಂಗಲಿಗರು ಪಾಕಿಸ್ತಾನ ಪರವಾಗಿ ಘೋಷಣೆ ಕೂಗಿದ್ದಾರೆ. ಈ ಬಗ್ಗೆ ನಾಸಿರ್ ಹುಸೇನ್ ಅವರು ಸೌಜನ್ಯಕ್ಕಾದರೂ ತಪ್ಪಿತಸ್ಥರಿಗೆ ಶಿಕ್ಷೆ ಆಗಲಿ ಎಂದು ಹೇಳಿಲ್ಲ, ಸರ್ಕಾರ ಕೂಡಾ ಗಂಭೀರವಾಗಿ ಪರಿಗಣಿಸದೇ ತನಿಖೆ ಮಾಡತ್ತೇವೆ ಎಂದು ಹೇಳುತ್ತಿದೆ. ಎಫ್‌ಐಆರ್‌ನಲ್ಲಿ ತಳ್ಳಾಟ, ನೂಕಾಟ ಎಂದು ಕೇಸ್ ಹಾಕಲಾಗಿದೆ. ಪಾಕಿಸ್ತಾನ ಪರವಾಗಿ ಘೋಷಣೆ ಕೂಗಿದವರ ವಿರುದ್ಧ ದೇಶದ್ರೋಹಿ ಕೇಸ್ ಹಾಕುವ ಬದಲಾಗಿ ಅವರ ರಕ್ಷಣೆಗೆ ಸರ್ಕಾರ ಮುಂದಾಗಿದೆ ಇದು ಖಂಡನೀಯ, ಗೃಹ ಸಚಿವರು ತಮ್ಮ ತಾಕತ್ತು ತೋರಿಸುವ ಕೆಲಸ ಮಾಡಬೇಕು ಎಂದು ಹರಿಹಾಯ್ದರು.