ಅಮೆಜಾನ್–ಫ್ಲಿಪ್‌ಕಾರ್ಟ್‌ಗೆ ಸಂಕಷ್ಟ – ಕೇಂದ್ರದಿಂದ ಕಠಿಣ ಕ್ರಮ ಜಾರಿ!

ಫ್ಲಿಪ್‌ಕಾರ್ಟ್, ಅಮೆಜಾನ್ ಮತ್ತು ಮೀಶೋ ಮುಂತಾದ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಶಾಪಿಂಗ್ ಮಾಡುವುದು ಗ್ರಾಹಕರಿಗೆ ಖುಷಿಯ ವಿಚಾರವಾದರೂ, ಇತ್ತೀಚಿನ ದಿನಗಳಲ್ಲಿ ಈ ಇ-ಕಾಮರ್ಸ್ ಕಂಪನಿಗಳಿಗೆ ಬಿಗ್ ಶಾಕ್ ಕಾದಿದೆ. ಕಳೆದ ಒಂದು ವರ್ಷದಲ್ಲಿ ಈ ಪ್ರಮುಖ ಆನ್‌ಲೈನ್ ಶಾಪಿಂಗ್ ಕಂಪನಿಗಳ ವಿರುದ್ಧ ಬರೋಬ್ಬರಿ 5 ಲಕ್ಷಕ್ಕೂ ಅಧಿಕ ಗ್ರಾಹಕರ ದೂರುಗಳು ದಾಖಲಾಗಿವೆ.

ಕೇಂದ್ರ ಸಹಾಯಕ ಸಚಿವ ಬಿ.ಎಲ್. ವರ್ಮಾ ಅವರು ಸಂಸತ್ತಿಗೆ ನೀಡಿರುವ ಲಿಖಿತ ಉತ್ತರದಲ್ಲಿ ಈ ಆಘಾತಕಾರಿ ವಿಷಯ ಹೊರಬಂದಿದೆ. ದೇಶದಲ್ಲಿ ಇ-ಕಾಮರ್ಸ್ ಮತ್ತು ಕ್ವಿಕ್ ಕಾಮರ್ಸ್ ಸೇವೆಗಳು ವೇಗವಾಗಿ ಬೆಳೆಯುತ್ತಿವೆಯೋ, ಅದೇ ಪ್ರಮಾಣದಲ್ಲಿ ಗ್ರಾಹಕರ ದೂರುಗಳು ಕೂಡ ಹೆಚ್ಚಾಗುತ್ತಿದ್ದು, ನ್ಯಾಷನಲ್ ಕನ್ಸ್ಯೂಮರ್ ಹೆಲ್ಪ್‌ಲೈನ್‌ಗೆ ಒಟ್ಟು 5,11,000ಕ್ಕೂ ಅಧಿಕ ದೂರುಗಳು ಸ್ವೀಕರಿಸಲ್ಪಟ್ಟಿವೆ.

ಗ್ರಾಹಕರ ದೂರುಗಳನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರವು, ನಿಯಮ ಉಲ್ಲಂಘನೆ ಮಾಡಿರುವ ಬರೋಬ್ಬರಿ 47 ಇ-ಕಾಮರ್ಸ್ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ. ಈ ಸಂಸ್ಥೆಗಳಿಗೆ ಒಟ್ಟು 1 ಕೋಟಿ 12 ಲಕ್ಷ ರೂಪಾಯಿ ದಂಡವನ್ನು ವಿಧಿಸುವ ಮೂಲಕ ಎಚ್ಚರಿಕೆ ನೀಡಲಾಗಿದೆ.

ಆರ್ಡರ್ ಮಾಡಿದ ವಸ್ತುಗಳನ್ನು ಸಮಯಕ್ಕೆ ಸರಿಯಾಗಿ ವಿತರಿಸದಿರುವುದರ ಬಗ್ಗೆಯೇ ಬರೋಬ್ಬರಿ 79 ಸಾವಿರಕ್ಕೂ ಹೆಚ್ಚು ದೂರುಗಳಿವೆ. ಇದರೊಂದಿಗೆ ಆರ್ಡರ್ ಮಾಡಿದ ವಸ್ತುವಿನ ಬದಲು ಬೇರೆ ಪ್ರಾಡಕ್ಟ್ ಕಳುಹಿಸುವುದು, ರಿಟರ್ನ್ ಮಾಡಲು ಬಿಡದಿರುವುದು, ಕಳಪೆ ಗುಣಮಟ್ಟದ ವಸ್ತುಗಳನ್ನು ನೀಡುವುದು ಮತ್ತು ಹಣವನ್ನು ಸಮಯಕ್ಕೆ ಸರಿಯಾಗಿ ವಾಪಸ್ ಮಾಡದಿರುವ ಬಗ್ಗೆ ಗ್ರಾಹಕರು ಹಿಗ್ಗಾಮಗ್ಗಾ ದೂರುಗಳನ್ನು ನೀಡಿದ್ದಾರೆ.

ಒಂದು ವೇಳೆ ನೀವೂ ಆನ್‌ಲೈನ್ ಶಾಪಿಂಗ್‌ನಲ್ಲಿ ಮೋಸ ಹೋಗಿದ್ದರೆ ಅಥವಾ ಇಂತಹ ಸಮಸ್ಯೆಗಳನ್ನು ಎದುರಿಸಿದ್ದರೆ, ನೇರವಾಗಿ ಕೋರ್ಟ್‌ಗೆ ಅಲೆಯುವ ಅಗತ್ಯವಿಲ್ಲ. ಪೂರ್ವ-ವಿಚಾರಣಾ ಹಂತದಲ್ಲೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಕೇಂದ್ರ ಸರ್ಕಾರ ‘ನ್ಯಾಷನಲ್ ಕನ್ಸ್ಯೂಮರ್ ಹೆಲ್ಪ್‌ಲೈನ್’ ವ್ಯವಸ್ಥೆಯನ್ನು ಜಾರಿಗೆ ತಂದಿದ್ದು, ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳಬಹುದು.

About The Author