ನವದೆಹಲಿ: ವಕ್ಫ್ ಮಂಡಳಿಯ ಆಸ್ತಿಗಳ ಮೇಲೆ ನಿಯಂತ್ರಣ ಸಾಧಿಸುವ ಉದ್ದೇಶದಿಂದ ರೂಪಿಸಿರುವ ವಕ್ಫ್ ತಿದ್ದುಪಡಿ ಮಸೂದೆ (Waqf Amendment Bill) ವಿಚಾರದಲ್ಲಿ ಬಿಜೆಪಿಗೆ ಈಗ ಮತ್ತೊಂದು ಹಿನ್ನಡೆಯಾಗಿದೆ. ಎನ್‌ಡಿಎ (NDA) ಸರ್ಕಾರದ ಮಿತ್ರ ಪಕ್ಷಗಳಲ್ಲಿ ಒಂದಾಗಿರುವ ಬಿಹಾರ ಸಿಎಂ ನಿತೀಶ್ ಕುಮಾರ್ ನೇತೃತ್ವದ ಜೆಡಿಯು (JDU) ವಕ್ಫ್ ವಿಧೇಯಕದ ಕುರಿತು ಆಕ್ಷೇಪ ವ್ಯಕ್ತಪಡಿಸಿದೆ.
ಈಗಾಗಲೇ ಲೋಕ ಜನಶಕ್ತಿ ಪಕ್ಷದ (LJP) ಚಿರಾಗ್ ಪಾಸ್ವಾನ್ ಮತ್ತು ತೆಲುಗು ದೇಶಂ ಪಕ್ಷದ (TDP) ಮುಖ್ಯಸ್ಥ ಹಾಗೂ ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಮಸೂದೆ ಕುರಿತು ಹಲವು ಪ್ರಶ್ನೆಗಳನ್ನು ಬಿಜೆಪಿ ಮುಂದಿಟ್ಟಿವೆ. ಇದೀಗ ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಕೂಡ ವಕ್ಫ್ ವಿಧೇಯಕದ ಕುರಿತು ಕೆಲವೊಂದಿಷ್ಟು ಕಳವಳಗಳನ್ನ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಮುಂದಿನ ವರ್ಷ ಬಿಹಾರ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇಕಡಾ 18ರಷ್ಟಿರುವ ಮುಸ್ಲಿಂ ಸಮುದಾಯದ ಹಿತ ಕಾಯಲು ನಿತೀಶ್ ಕುಮಾರ್ ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಮುಸ್ಲಿಂ ಸಮುದಾಯದ ಹಿತಾಸಕ್ತಿಯನ್ನು ಕಾಪಾಡಲು ಪ್ರಸ್ತಾವಿತ ಕಾನೂನಿನಲ್ಲಿ ಕೆಲವೊಂದಿಷ್ಟು ಬದಲಾವಣೆಗಳು ಅಗತ್ಯ ಎಂದು ಜೆಡಿಯು ತಿಳಿಸಿದೆ. ಆರಂಭದಲ್ಲಿ ಮಸೂದೆಗೆ ಬೆಂಬಲ ಸೂಚಿಸಿದ್ದ ಜೆಡಿಯು, ಇದೀಗ ವಿಧೇಯಕದ ಕುರಿತು ಕಳವಳ ವ್ಯಕ್ತಪಡಿಸುತ್ತಿದೆ.
ಕೆಲ ದಿನಗಳ ಹಿಂದಷ್ಟೇ ಬಿಹಾರ ಸಿಎಂ ನಿತೀಶ್ ಕುಮಾರ್ ಅವರನ್ನು ಭೇಟಿಯಾಗಿದ್ದ ಅಲ್ಪಸಂಖ್ಯಾತ ಕಲ್ಯಾಣ ಖಾತೆ ಸಚಿವ ಮೊಹಮ್ಮದ್ ಜಮಾ ಖಾನ್ ವಕ್ಫ್ ಮಸೂದೆಯಲ್ಲಿನ ಕೆಲವು ನಿಯಮಾವಳಿಗಳ ಕುರಿತು ವಿರೋಧ ವ್ಯಕ್ತಪಡಿಸಿದ್ದರು. ಜಲ ಸಂಪನ್ಮೂಲ ಖಾತೆ ಸಚಿವ ವಿಜಯ್ ಕುಮಾರ್ ಚೌಧರಿ ಕೂಡ ವಿಧೇಯಕ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.