Kalaburagi News: ಪ್ರಿಯಾಂಕ್ ಖರ್ಗೆ ತಮ್ಮ ವಿರುದ್ಧ ವಾಗ್ದಾಳಿ ನಡೆಸುವವರಿಗೆ ಖಡಕ್ ತಿರುಗೇಟು ನೀಡಿದ್ದಾರೆ. ತಮ್ಮ ವಿರುದ್ಧ ಟೀಕೆ ಮಾಡುವವರು, ಮೋದಿಯವರ ಮನ್ ಕೀಬಾತ್ 1 ಬಾರಿ ಕೇಳಿ ಎಂದು ಹೇಳಿದ್ದಾರೆ.
ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಬರೆದಿರುವ ಪ್ರಿಯಾಂಕ್ ಖರ್ಗೆ, ನಮ್ಮ ಸಾಧನೆಗಳನ್ನು ಮೋದಿಯವರು ಮೆಚ್ಚುತ್ತಿದ್ದಾರೆ, ಆದರೆ ಕರ್ನಾಟಕದ ಬಿಜೆಪಿಯವರು ಮೆಚ್ಚಲು ತಯಾರಿಲ್ಲ!! ನನ್ನ ಸಾಧನೆಗಳನ್ನು, ಕೆಲಸಗಳನ್ನು ಪ್ರಶ್ನಿಸುವುದು ಬಿಜೆಪಿ ಸ್ನೇಹಿತರಿಗೆ ನಿತ್ಯದ ಉದ್ಯೋಗದಂತಾಗಿದೆ, ಉತ್ತರ ಸಿಕ್ಕರೂ ಮತ್ತದೇ ಪ್ರಶ್ನೆಗಳನ್ನು ಎತ್ತುವುದು ಅವರ ಹವ್ಯಾಸ ಎಂದು ವಿರೋಧ ಪಕ್ಷದವರ ವಿರುದ್ಧ ಪ್ರಿಯಾಂಕ್ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿಯವರ ಪ್ರಶ್ನೆಗಳಿಗೆ ನಾನು ಉತ್ತರಿಸುವುದಕ್ಕಿಂತ ಕೇಂದ್ರ ಸರ್ಕಾರ ನನ್ನ ಕೆಲಸಗಳ ಬಗ್ಗೆ ಪುರಾವೆಗಳನ್ನು ನೀಡುತ್ತಿದೆ! ಮೋದಿಯವರ ಮನ್ ಕಿ ಬಾತ್ ನಲ್ಲಿ ನಮ್ಮ ಕಾಮ್ ಕಿ ಬಾತ್ ಸದ್ದು ಮಾಡಿವೆ, ಕಲಬುರಗಿಗೆ ಪ್ರಿಯಾಂಕ್ ಖರ್ಗೆ ಮಾಡಿದ್ದೇನು ಎಂದು ಕೇಳುವ ಬಿಜೆಪಿಯವರಿಗೆ ಮೋದಿಯವರ ಮನ್ ಕಿ ಬಾತ್ ಉತ್ತರವಾಗುತ್ತದೆ ಎಂದು ಪ್ರಿಯಾಂಕ್ ಖಡಕ್ ತಿರುಗೇಟು ನೀಡಿದ್ದಾರೆ.
ಕಲಬುರಗಿ ರೊಟ್ಟಿಗಳ ಬ್ರಾಂಡಿಂಗ್ ಮತ್ತು ಮಾರುಕಟ್ಟೆ ವಿಸ್ತರಣೆಗೆ ನಾವು ಕೈಗೊಂಡ ಕ್ರಮಗಳಿಂದ ಕಲಬುರಗಿ ರೊಟ್ಟಿಗಳು ಈಗ ಜಾಗತಿಕ ಮಾರುಕಟ್ಟೆ ಪಡೆದುಕೊಂಡಿದೆ. ಈ ವಿಷಯವನ್ನು ಈ ಹಿಂದೆ ಮನ್ ಕಿ ಬಾತ್ ನಲ್ಲಿ ಪ್ರಸ್ತಾಪಿಸಿದ್ದ ಮೋದಿಯವರು ಈಗ ನಮ್ಮ ಜಿಐ ಟ್ಯಾಗ್ ಪಡೆದಿರುವ ಕಲಬುರಗಿಯ ತೊಗರಿಯನ್ನು ಮಾಲ್ಡಿವ್ಸ್ ಗೆ ರಫ್ತು ಮಾಡುತ್ತಿರುವ ಉಪಕ್ರಮವನ್ನು ಪ್ರಸ್ತಾಪಿಸಿದ್ದಾರೆ.
ಕಲಬುರಗಿಯ ವೈಶಿಷ್ಟ್ಯಮಯ ತೊಗರಿಯ ಮಾರುಕಟ್ಟೆಯನ್ನು ಜಾಗತಿಕ ಮಟ್ಟದಲ್ಲಿ ವಿಸ್ತರಿಸುವ ಮೂಲಕ ಜಿಲ್ಲೆಯ ರೈತರಿಗೆ 30%ನಷ್ಟು ಹೆಚ್ಚು ಧಾರಣೆ ದೊರಕಿಸಿಕೊಡುವಲ್ಲಿ ಯಶಸ್ವಿಯಾಗಿದ್ದೇವೆ. ಮಾತ್ರವಲ್ಲದೆ, ಜಿಲ್ಲೆಯಲ್ಲಿ ಬೆಳೆಯುವ ಹೆಸರು, ತೊಗರಿ, ಉದ್ದು, ಹುರುಳಿ ಮುಂತಾದ ಬೆಳೆಗಳನ್ನು ಸ್ಥಳೀಯವಾಗಿ ಮೌಲ್ಯವರ್ಧನೆ ಮಾಡುವ ನಿಟ್ಟಿನಲ್ಲಿ ಎನರ್ಜಿ ಬಾರ್ ಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡುವ ವಿಶಿಷ್ಟ ಕಾರ್ಯಕ್ರಮವೂ ಜಾರಿಯಲ್ಲಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಕಲಬುರಗಿ ಪಲ್ಸ್, ಭೀಮಾ ಪಲ್ಸ್, ಕಲಬುರಗಿ ಖಡಕ್ ರೊಟ್ಟಿ, ಕಮಲಾಪುರ ಕೆಂಪು ಬಾಳೆ ಸೇರಿದಂತೆ ಇಲ್ಲಿನ ರೈತರು ಉತ್ಪಾದಿಸುವ ಕೃಷಿ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಗುರುತು ಕಲ್ಪಿಸಲು ಪ್ರಯತ್ನಿಸಲಾಗುತ್ತಿದೆ. ಈ ಮೂಲಕ ರೈತರು ಮತ್ತು ಕಾರ್ಮಿಕರನ್ನು ಆರ್ಥಿಕವಾಗಿ ಸಬಲರನ್ನಾಗಿಸುವುದು ನಮ್ಮ ಉದ್ದೇಶವಾಗಿದೆ. ಬಿಜೆಪಿಯವರು ನನ್ನನ್ನು ಪ್ರಶ್ನಿಸುವ ಮತ್ತು ಟೀಕಿಸುವ ಮುನ್ನ ಮೋದಿಯವರ ಮನ್ ಕಿ ಬಾತ್ ಕೇಳಲಿ, ನಂತರ ಆತ್ಮಸಾಕ್ಷಿಯಿಂದ ತಮ್ಮ ದಿಲ್ ಕಿ ಬಾತ್ ಆಡಲಿ! ಎಂದು ಪ್ರಿಯಾಂಕ್ ಸವಾಾಲ್ ಹಾಕಿದ್ದಾರೆ.




