Spiritual: ಇಂದಿನಿಂದ ಮಂತ್ರಾಲಯದಲ್ಲಿ ಆರಾಧನೋತ್ಸವಕ್ಕೆ ಚಾಲನೆ ಸಿಕ್ಕಿದೆ. ಇಂದಿನಿಂದ 7 ದಿನಗಳ ಕಾಲ, ರಾಯರ ಮಠದಲ್ಲಿ ಹಲವು ರೀತಿಯ ಕಾರ್ಯಕ್ರಮಗಳು ನಡೆಯಲಿದ್ದು, ದೇಶದ ಹಲವು ಭಾಗಗಳಿಂದ ರಾಯರ ಭಕ್ತರು ಮಂತ್ರಾಲಯಕ್ಕೆ ಆಗಮಿಸುತ್ತಿದ್ದಾರೆ. ಶ್ರಾವಣ ಮಾಸದಲ್ಲಿ ನಡೆಯುವ ರಾಯರ ಆರಾಧನೋತ್ಸವ ವಿಶೇಷವಾಗಿದ್ದು, ಈ ಸಮಯದಲ್ಲಿ ರಾಯರಿಗೆ ವಿಶೇಷ ಪೂಜೆ, ಅಲಂಕಾರ ಇತ್ಯಾದಿ ನಡೆಯುತ್ತದೆ.
ಇನ್ನು ರಾಯರ ಆರಾಧನಾ ಮಹೋತ್ಸವದ ಅಂಗವಾಗಿ, ಇಂದು ನಾವು ರಾಯರು ನಿಜಾಮನಿಗೆ ಇದ್ದ ಅನುಮಾನವನ್ನು ಯಾವ ರೀತಿ ತೆಗೆದುಹಾಕಿದ್ದರು ಅನ್ನೋ ಬಗ್ಗೆ ತಿಳಿಯೋಣ.
ಹುಟ್ಟಿದ ಕೆಲವು ವರ್ಷಗಳ ಕಾಲ ವೆಂಕಟನಾಥರಾಗಿದ್ದ ರಾಯರು, ಸನ್ಯಾಸ ದೀಕ್ಷೆ ತೆಗೆದುಕೊಂಡ ಬಳಿಕ, ಗುರುರಾಯರಾಗಿ ಲೋಕ ಕಲ್ಯಾಣಾರ್ಥಕ್ಕಾಗಿ, ತಿರುಗಾಟ ಆರಂಭಿಸಿದರು. ಅವರು ಹೋದಲ್ಲಿ, ರಾಯರ ಭಕ್ತರು, ಅವರಿಗೆ ಊಟ, ವಸತಿಯ ವ್ಯವಸ್ಥೆ ಮಾಡುತ್ತಿದ್ದರು. ಹೀಗೆ ತಿರುಗಾಟ ನಡೆಸುತ್ತಾ, ರಾಯರು, ಹೈದರಾಬಾದಿನ ನಿಜಾಾಮರ ರಾಜ್ಯಕ್ಕೆ ಬಂದರು.
ನಿಜಾಮ ಖುಷಿಯಿಂದಲೇ ರಾಯರನ್ನು ಸ್ವಾಗತಿಸಿದ. ಆದರೆ ಅವನಿಗೆ ತನ್ನ ಬಗ್ಗೆ ಅಹಂಕಾರವಿತ್ತು. ಅಲ್ಲದೇ, ಪವಾಡ ಪುರುಷರ ಬಗ್ಗೆ ಅಸಡ್ಡೆ ಇತ್ತು. ಹಾಗಾಗಿ ರಾಯರನ್ನು ಪರೀಕ್ಷಿಸಬೇಕು ಎಂದು ನಿಜಾಮ, ತನ್ನ ಸೇವಕರಿಗೆ ಹೇಳಿ, ಒಂದು ದೊಡ್ಡ ಬಟ್ಟಲಿನಲ್ಲಿ ಮಾಂಸವನ್ನು ತರಿಸಿ, ರಾಯರ ಮುಂದೆ ಇರಿಸಿದ. ಮಾಂಸದ ಮೇಲೆ ಬಟ್ಟೆ ಹೊದಿಯಲಾಗಿತ್ತು.
ನಿಜಾಮ ರಾಯರನ್ನು ಕುರಿತು, ನೀವು ನಮ್ಮ ರಾಜ್ಯಕ್ಕೆ ಬಂದಿದ್ದು ನಮಗೆ ಸಂತೋಷವಾಗಿದೆ. ದಯವಿಟ್ಟು ನಮ್ಮ ಆತಿಥ್ಯವನ್ನು ಸ್ವೀಕರಿಸಬೇಕು ಎಂದು ಹೇಳಿದರು. ರಾಯರು ನಿಜಾಮನಿಗೆ ಧನ್ಯವಾದ ಸಲ್ಲಿಸಿ, ಅಲ್ಲೇ ಇದ್ದ ಮಾಂಸದ ಮೇಲೆ ತೀರ್ಥ ಪ್ರೋಕ್ಷಣೆ ಮಾಡಿದರು. ಬಳಿಕ ಮಾಂಸದ ಮೇಲಿದ್ದ ಬಟ್ಟೆಯನ್ನು ಸರಿಸಲಾಗಿತ್ತು. ಆಗ ಮಾಂಸದ ಬಟ್ಟಲಿನಲ್ಲಿ ಹಣ್ಣುಗಳಿದ್ದವು.
ರಾಜನಿಗೆ ರಾಯರ ಪವಾಡ ಕಂಡು, ತಾನು ಎಂಥ ದೊಡ್ಡ ತಪ್ಪು ಮಾಡಿದೆ ಎಂಬ ಅರಿವಾಯಿತು. ತಕ್ಷಣ ನಿಜಾಮ, ರಾಯರ ಕಾಲಿಗೆ ಬಿದ್ದು ಕ್ಷಮೆ ಕೇಳಿದ. ಈ ರೀತಿ ರಾಾಯರು ತಮ್ಮ ಪವಾಡದಿಂದಲೇ, ಈಗಲೂ ಜನರ ಉದ್ಧಾರ ಮಾಡುತ್ತಿದ್ದಾರೆ.