ಹುಬ್ಬಳ್ಳಿ : ಪ್ರೇಮಕ್ಕೆ ಪೋಷಕರ ವಿರೋಧಿಸಿದ್ದರಿಂದ ಮನನೊಂದು ನಿದ್ರೆಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಯುವತಿಯನ್ನು ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಸೇರಿಸುವ ಮೂಲಕ ಉಪನಗರ ಠಾಣೆ ಪೊಲೀಸರು ಮಾನವೀಯತೆ ಮೆರೆದಿದ್ದಾರೆ.
ಇಲ್ಲಿನ ವಿಕಾಸ ನಗರದ ಸಿದ್ಧಲಿಂಗೇಶ್ವರ ಕಾಲೋನಿಯ ವರ್ಷಾ ಬಸವರಾಜ ಹಿರೇಮಠ ಎಂಬುವವರೇ ಆತ್ಮಹತ್ಯೆಗೆ ಯತ್ನಿಸಿದ ಯುವತಿಯಾಗಿದ್ದು, ಯುವತಿ ಯುವಕನೊಬ್ಬನನ್ನು ಪ್ರೀತಿಸಿ ಮದುವೆಗೆ ಮುಂದಾಗಿದ್ದಳು. ಆದ್ರೆ ಮನೆಯವರು ಪ್ರೀತಿಗೆ ಒಪ್ಪದ ಕಾರಣ ಮನನೊಂದು ಸ್ಲೀಪಿಂಗ್ ಟ್ಯಾಬ್ಲೆಟ್ ತೆಗೆದುಕೊಂಡಿದ್ದಾಳೆ ಎಂದು ತಿಳಿದು ಬಂದಿದೆ.
ಟ್ಯಾಬ್ಲೆಟ್ ತೆಗೆದುಕೊಂಡ ನಂತರ, ಕೂಡಲೇ ಸ್ಥಳೀಯರು ಪೋಲಿಸರಿಗೆ ವಿಷಯ ತಿಳಿಸಿದ್ದಾರೆ. ನಂತರ ಸ್ಥಳಕ್ಕೆ ದೌಡಾಯಿಸಿದ ಉಪನಗರ ಠಾಣೆಯ ಹೊಯ್ಸಳ-6 ಪೊಲೀಸರು ವರ್ಷಾ ಬಸವರಾಜ ಹಿರೇಮಠ ಅವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಇದೀಗ ವರ್ಷಾ ಹಿರೇಮಠ ಸಂಪೂರ್ಣ ಗುಣಮುಖರಾಗಿದ್ದು, ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಸೇರಿಸಿದ ಮಹಿಳಾ ಕಾನ್ಸಸ್ಟೇಬಲ್ ಗಳಾದ ಎಮ್.ಎಚ್.ಜಾಧವ, ಮಾರ್ಗೆರೇಟ್ ಹಾಗೂ ಹೊಯ್ಸಳ ವಾಹನ ಚಾಲಕ ಬಸವರಾಜ ಲಮಾಣಿ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾಳೆ. ಇನ್ನು ಜನಸ್ನೇಹಿ ಕಾರ್ಯವೈಖರಿಗೆ ಸಾರ್ವಜನಿಕರು ಶ್ಲಾಘಿಸುತ್ತಿದ್ದಾರೆ.
ಕರ್ನಾಟಕ ಟಿವಿ, ಹುಬ್ಬಳ್ಳಿ