ಭಾರತ ತಂಡದ ಪರ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ ಸಹೋದರರ ಪೈಕಿ ಇರ್ಫಾನ್ ಪಠಾಣ್ ಮತ್ತು ಯೂಸಫ್ ಪಠಾಣ್ ಜೋಡಿ ಮುಂಚೂಣಿಯಲ್ಲಿದೆ. ಹಲವಾರು ಪಂದ್ಯಗಳಲ್ಲಿ ಭಾರತದ ಗೆಲುವಿಗೆ ಇವರಿಬ್ಬರೂ ಶ್ರಮಿಸಿದ್ದಾರೆ ಮಾತ್ರವಲ್ಲದೆ ಇವರಿಬ್ಬರ ಜೋಡಿ ಸೋಲಿನತ್ತ ಮುಖ ಮಾಡಿದ ಪಂದ್ಯಗಳನ್ನುಭಾರತಕ್ಕೆ ಗೆಲ್ಲಿಸಿಕೊಟ್ಟಿದ್ದಾರೆ. ಮೈದಾನದಲ್ಲಿ ಮಾತ್ರವಲ್ಲದೆ ಮೈದಾನದ ಹೊರಗೆ ಕೂಡ ಇವರಿಬ್ಬರ ನಡುವೆ ಆತ್ಮೀಯ ಬಾಂಧವ್ಯವಿದೆ. ಇದಕ್ಕೆ ಸಾಕಷ್ಟು ನಿದರ್ಶನಗಳಿವೆ. ಇವರ ಸಹೋದರತ್ವ ಕಂಡು ಖುಷಿಪಡುವ ಅಭಿಮಾನಿಗಳಿದ್ದಾರೆ. ಆದರೆ, ಇತ್ತೀಚೆಗೆ ಯೂಸಫ್ ಪಠಾಣ್ ಹಾಗೂ ಇರ್ಫಾನ್ ಪಠಾಣ್ ಇಬ್ಬರು ಕಿತ್ತಾಡಿಕೊಂಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡಿತ್ತು. ಇದೀಗ ಇದೇ ಸಹೋದರರ ಜೋಡಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದೆ.
ಭಾರತದ ಹಿರಿಯ ಆಟಗಾರರು 2024ರ ಲೆಜೆಂಡ್ಸ್ ಟ್ರೋಫಿಯಲ್ಲಿ ಆಡುತ್ತಿದ್ದು, ಭಾರತ ಚಾಂಪಿಯನ್ಸ್ ಈಗಾಗಲೇ ಫೈನಲ್ ಕೂಡ ಪ್ರವೇಶ ಮಾಡಿದೆ. ಈ ಟೂರ್ನಿಯಲ್ಲಿ ಪಠಾಣ್ ಬ್ರದರ್ಸ್ ಕೂಡ ತಂಡದ ಭಾಗವಾಗಿದ್ದಾರೆ. ಲೆಜೆಂಡ್ಸ್ ಟ್ರೋಫಿ 2024ರ ಲೀಗ್ ನ ಕೊನೆಯ ಪಂದ್ಯದಲ್ಲಿ ಭಾರತ ಚಾಂಪಿಯನ್ಸ್ ಹಾಗೂ ದಕ್ಷಿಣ ಆಫ್ರಿಕಾ ಚಾಂಪಿಯನ್ಸ್ ತಂಡಗಳ ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಚಾಂಪಿಯನ್ಸ್ ನೀಡಿದ್ದ 211 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಭಾರತ ಚಾಂಪಿಯನ್ಸ್ ತಂಡದ ಇನಿಂಗ್ಸ್ ವೇಳೆ ಪಠಾಣ್ ಸಹೋದರರ ನಡುವೆ ಜಗಳ ನಡೆದಿತ್ತು.
ಡೇಲ್ ಸ್ಟೇನ್ ಅವರ ಬೌಲಿಂಗ್‌ನಲ್ಲಿ ಇರ್ಫಾನ್ ಪಠಾಣ್ ದೊಡ್ಡ ಹೊಡೆತಕ್ಕೆ ಕೈ ಹಾಕಿದ್ದರು. ಈ ವೇಳೆ ಬ್ಯಾಟ್‌ಗೆ ಎಡ್ಜ್ ಆಗಿದ್ದ ಚೆಂಡು ಲಾಂಗ್ ಆನ್‌ನಲ್ಲಿ ಗಾಳಿಯಲ್ಲಿ ಹಾರಿತ್ತು. ಈ ವೇಳೆ ಕ್ಯಾಚ್ ಪಡೆಯಲು ಪ್ರಯತ್ನಿಸಿದ್ದ ಹರಿಣ ಆಟಗಾರ ಕ್ಯಾಚ್ ಡ್ರಾಪ್ ಮಾಡಿದ್ದರು. ಈ ವೇಳೆ ಸ್ಟ್ರೈಕ್‌ನಲ್ಲಿದ್ದ ಇರ್ಫಾನ್ ಪಠಾಣ್ ಒಂದು ರನ್ ಪೂರ್ಣಗೊಳಿಸಿ, ಕ್ಯಾಚ್ ಡ್ರಾಪ್ ಆಗಿದ್ದ ಕಾರಣ ಎರಡನೇ ರನ್ ಕದಿಯಲು ಅರ್ಧ ಪಿಚ್‌ಗೆ ಓಡಿದ್ದರು. ಆದರೆ, ಇದನ್ನು ಗಮನಿಸದ ಯೂಸಫ್ ಪಠಾಣ್ ಎರಡನೇ ರನ್ ಓಡಲು ಸಿದ್ಧರಿರಲಿಲ್ಲ. ಇದನ್ನು ನೋಡಿ ಇರ್ಫಾನ್ ನಾನ್ ಸ್ಟ್ರೈಕ್ ಎಂಡ್ ಕ್ರೀಸ್‌ಗೆ ತಲುಪಲು ಓಡಿದರು. ಆದರೂ ರನ್ಔಟ್ ಆದರು. ಈ ಸಂದರ್ಭದಲ್ಲಿ ಅಣ್ಣ ಯೂಸಫ್ ಪಠಾಣ್ ವಿರುದ್ದ ಇರ್ಫಾನ್ ಪಠಾಣ್ ಆಕ್ರೋಶ ವ್ಯಕ್ತಪಡಿಸಿದರು ಹಾಗೂ ಪಠಾಣ್ ಸಹೋದರರ ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ಈ ಪಂದ್ಯವನ್ನು ಭಾರತ ಚಾಂಪಿಯನ್ಸ್ ಸೋತರೂ ಕೂಡ, ಪಾಯಿಂಟ್ಸ್ ಟೇಬಲ್‌ನಲ್ಲಿ ನಾಲ್ಕನೇ ಸ್ಥಾನವನ್ನು ಗಳಿಸುವಲ್ಲಿ ಸಫಲರಾಗಿ ಸೆಮಿಫೈನಲ್‌ಗೆ ಅರ್ಹತೆ ಪಡೆಯಿತು.
ಸೆಮಿ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ಸವಾಲನ್ನು ಭಾರತ ಸ್ವೀಕರಿಸಿತು. ಆದರೆ ವಿಶೇಷವೆಂದರೆ ಹಿಂದಿನ ಪಂದ್ಯದಲ್ಲಿ ಕಿತ್ತಾಡಿಕೊಂಡ ಪಠಾಣ್ ಸಹೋದರಿಬ್ಬರು ಈ ಪಂದ್ಯದಲ್ಲಿ ಅದ್ಭುತ ಪ್ರದರ್ಶನವನ್ನು ನೀಡಿದರು ಮತ್ತು ಭಾರತ ತಂಡ ಲೆಜೆಂಡ್ಸ್ ಟ್ರೋಫಿ 2024ರ ಫೈನಲ್ ಪ್ರವೇಶಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ಈ ಜೋಡಿ 36ಎಸೆತಗಳಲ್ಲಿ ಬಿರುಸಿನ 95ರನ್ ಗಳ ಜೊತೆಯಾಟವಾಡಿತು. ಯೂಸುಫ್ 23ಎಸೆತಗಳಲ್ಲಿ 51ರನ್ ಗಳಿಸಿದರೆ, ಇರ್ಫಾನ್ 19ಎಸೆತಗಳಲ್ಲಿ 50ರನ್ ಗಳಿಸಿ ಮಿಂಚಿದರು. ಈ ಮೂಲಕ ಹಿಂದಿನ ಪಂದ್ಯದಲ್ಲಿ ಹೊಂದಾಣಿಕೆಯ ತಪ್ಪಿನಿಂದ ಆದ ತಪ್ಪನ್ನು ಸರಿಪಡಿಸಿಕೊಂಡು ಭರ್ಜರಿ ಕಮ್ ಬ್ಯಾಕ್ ಮಾಡಿದ್ದಾರೆ ಮಾತ್ರವಲ್ಲ ತಾವು ಯಾವತ್ತೂ ಬೆಸ್ಟ್ ಬ್ರದರ್ಸ್ ಎಂಬುದನ್ನು ಸಾಭೀತುಮಾಡಿದ್ದಾರೆ.