Koppala News: ಕೊಪ್ಪಳ:– ಜಿಲ್ಲೆಯಲ್ಲಿ ಸಾರ್ವಜನಿಕರ ಬದುಕಿಗೆ ಮಾರಕವಾಗಿರುವ ಗಂಭೀರ ಸಮಸ್ಯೆಗಳ ಬಗ್ಗೆ ‘ಕರ್ನಾಟಕ ರಕ್ಷಣಾ ಯುವಗಜ ವೇದಿಕೆ’ ಹಾಗೂ ಸಾರ್ವಜನಿಕರ ವತಿಯಿಂದ ಹಲವು ಬಾರಿ ಮನವಿ ಸಲ್ಲಿಸಿದರೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ಕರ್ತವ್ಯ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿತನ ತೋರಿಸುತ್ತಿದ್ದಾರೆ.
ಮರಳಿ ಮತ್ತು ಹೇಮಗುಡ್ಡ ಹೆದ್ದಾರಿಯಲ್ಲಿ ನಿಯಮಾವಳಿಗಳನ್ನು ಮೀರಿ ಕೇವಲ 24 ಕಿ.ಮೀ ಅಂತರದಲ್ಲಿ ಎರಡು ಟೋಲ್ ಗೇಟ್‌ಗಳನ್ನು ನಿರ್ಮಿಸಲಾಗಿದ್ದು, ಅಲ್ಲಿ ಶೌಚಾಲಯ ಹಾಗೂ ಕುಡಿಯುವ ನೀರಿನಂತಹ ಮೂಲಭೂತ ಸೌಕರ್ಯಗಳಿಲ್ಲದೆ, ತ್ಯಾಜ್ಯ ನೀರನ್ನು ಜಮೀನುಗಳಿಗೆ ಬಿಟ್ಟು ಪರಿಸರ ಹಾಗೂ ಅಂತರ್ಜಲ ಹಾಳುಮಾಡಲಾಗುತ್ತಿದೆ.
ನಿಯಮಬಾಹಿರವಾಗಿರುವ ಒಂದು ಟೋಲ್ ಗೇಟ್ ಅನ್ನು ತಕ್ಷಣವೇ ತೆರವುಗೊಳಿಸಿ, ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.
ಇದಲ್ಲದೆ, ಕೊಪ್ಪಳ ಜಿಲ್ಲೆಯ ಗಿಣಿಗೇರ ಗ್ರಾಮದ ವ್ಯಾಪ್ತಿಯಲ್ಲಿ ಅಕ್ರಮವಾಗಿ ನಡೆಯುತ್ತಿರುವ ಇಟ್ಟಿಗೆ ಭಟ್ಟಿಗಳಿಂದಾಗಿ ಧೂಳಿನ ಸಮಸ್ಯೆ ಹೆಚ್ಚಾಗಿ ಸಂಚಾರಕ್ಕೆ ತೊಂದರೆಯಾಗುತ್ತಿದ್ದು, ಪರಿಸರ ಮತ್ತು ಕಾರ್ಮಿಕ ಕಾಯ್ದೆಗಳ ಉಲ್ಲಂಘನೆಯಾಗುತ್ತಿದೆ. ಈ ಬಗ್ಗೆ ಮನವಿ ನೀಡಿದರೂ ಕ್ರಮ ಕೈಗೊಳ್ಳದ ಅಧಿಕಾರಿಗಳನ್ನು ಅಮಾನತುಗೊಳಿಸಿ, ಅಕ್ರಮ ಇಟ್ಟಿಗೆ ಭಟ್ಟಿಗಳನ್ನು ತಕ್ಷಣವೇ ಬಂದ್ ಮಾಡಿಸಬೇಕು.
ಅದರೊಂದಿಗೆ, ಬಡವರ ಪಾಲಿನ ಪಡಿತರ ಅಕ್ಕಿಯು ಕಾಳಸಂತೆಯಲ್ಲಿ ಅಕ್ರಮವಾಗಿ ಮಾರಾಟವಾಗುತ್ತಿದ್ದು, ವಿಶೇಷವಾಗಿ ಗಂಗಾವತಿ ಭಾಗದಲ್ಲಿ ಈ ದಂಧೆ ಹೆಚ್ಚಾಗಿದ್ದರೂ ಆಹಾರ ಇಲಾಖೆಯ ಅಧಿಕಾರಿಗಳು ಮೌನ ವಹಿಸಿರುವುದರಿಂದ, ಕರ್ತವ್ಯಲೋಪ ಎಸಗಿರುವ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಜರುಗಿಸಬೇಕಾಗಿದೆ.
ಕಾರಟಗಿಯ ನಾಗನಕಲ್‌ನಲ್ಲಿ ಪರಿಸರ ಹಾಗೂ ಸಾರ್ವಜನಿಕ ಆರೋಗ್ಯಕ್ಕೆ ಹಾನಿಕರವಾದ ಎಥನಾಲ್ ಫ್ಯಾಕ್ಟರಿ ನಿರ್ಮಾಣದ ಅನುಮತಿಯನ್ನು ರದ್ದುಪಡಿಸುವುದು ಸೇರಿದಂತೆ, ಮೇಲ್ಕಂಡ ಎಲ್ಲಾ ವಿಷಯಗಳನ್ನು ಜಿಲ್ಲಾಡಳಿತವು ಗಂಭೀರವಾಗಿ ಪರಿಗಣಿಸಬೇಕು. ಸಾರ್ವಜನಿಕರ ಸಮಸ್ಯೆಗಳಿಗೆ ತಕ್ಷಣವೇ ಶಾಶ್ವತ ಪರಿಹಾರ ಕಲ್ಪಿಸಿ, ಕರ್ತವ್ಯಲೋಪ ಎಸಗಿರುವ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ ಅಮಾನತುಗೊಳಿಸದಿದ್ದಲ್ಲಿ, ಸಂಘಟನೆಯ ವತಿಯಿಂದ ಶಾಂತಿಯುತ ಅನಿರ್ದಿಷ್ಟಾವಧಿ ಧರಣಿ ಹಾಗೂ ಉಗ್ರ ಸ್ವರೂಪದ ಹೋರಾಟವನ್ನು ಮುಂದುವರಿಸಲಾಗುವುದು.




