News: ಭಾರತ ದೇಶದಲ್ಲಿ ಜಲಕ್ಕೆ ಅದರಲ್ಲೂ ಗಂಗೆಗೆ ಒಂದು ವಿಶೇಷವಾದ ಸ್ಥಾನವನ್ನು ನೀಡಲಾಗಿದೆ. ನದಿಗಳನ್ನು ಆರಾಧಿಸಿ, ಅವುಗಳ ಸುತ್ತಲಿನ ನಿಶ್ಯಬ್ಧ ವಾತಾವರಣವನ್ನು ಆಸ್ವಾದಿಸುವುದನ್ನು ಸಾಮಾನ್ಯವಾಗಿ ನಾವೆಲ್ಲರೂ ಮಾಡುತ್ತಿರುತ್ತೇವೆ. ಅಲ್ಲದೆ ಈ ನದಿಗಳ ನೀರನ್ನು ಪವಿತ್ರ ಎನ್ನುವ ನಾವುಗಳೇ ಅವುಗಳ ಮಲೀನಕ್ಕೆ ಕಾರಣರಾಗುತ್ತಿದ್ದೇವೆ. ಅವುಗಳ ಸುತ್ತಲಿನ ಪ್ರದೇಶ ಸೇರಿದಂತೆ ನದಿಗಳನ್ನು ಇಂದು ಮಾನವ ಕಲುಷಿತಗೊಳಿಸುತ್ತಿದ್ದಾನೆ. ಇನ್ನೂ ಇದೀಗ ಈ ಬಗ್ಗೆ ಒಂದು ಮಹತ್ವದ ಮಾಹಿತಿ ಬಯಲಾಗಿದೆ. ರಾಜ್ಯದ 12 ನದಿಗಳ ನೀರು ಕುಡಿಯಲು ನೀರು ಯೋಗ್ಯವಲ್ಲ ಎಂಬ ಆಘಾತಕಾರಿ ಹೊರಬಿದ್ದಿದ್ದು, ಇದರಿಂದ ಸಾರ್ವಜನಿಕರಲ್ಲಿ ಆತಂಕ ಶುರುವಾಗಿದೆ. ಅಲ್ಲದೆ ಈ ನದಿಗಳ ಮಾಲಿನ್ಯತೆಯ ಪ್ರದೇಶದ ಉದ್ದಳತೆಯು 693.75 ಕಿಲೋ ಮೀಟರ್‌ಗಳಷ್ಟಿದೆ, ಇನ್ನೂ ಈ ವ್ಯಾಪ್ತಿಯಲಿ ಒಟ್ಟು 112 ಕಲುಷಿತಯುಕ್ತ ಚರಂಡಿಗಳನ್ನು ಗುರುತು ಮಾಡಲಾಗಿದೆ. ಇಂದಿಗೂ ಇವುಗಳಿಂದ ರಾಜ್ಯದ ನದಿಗಳಿಗೆ ತೆರಳುವ ಕಲ್ಮಶ ನೀರಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಯಾವುದೇ ರೀತಿಯ ಜವಾಬ್ದಾರಿಯುತ ಪ್ರಯತ್ನಗಳು ನಡೆದಿಲ್ಲ ಎನ್ನುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ.
ಇನ್ನೂ ನಾವು ಕುಡಿಯಲು ತುಂಗಾ ನದಿ ನೀರನ್ನು ಬಳಸುವುದು ಯೋಗ್ಯ ಎಂದು ಭಾವಿಸಿಕೊಂಡಿದ್ದೇವೆ. ಆದರೆ ಅಚ್ಚರಿಯೆಂದರೆ ಅದರಲ್ಲೂ ಸ್ವಚ್ಚತೆಯ ಸತ್ವ ಉಳಿದಿಲ್ಲ, ಬದಲಿಗೆ ನಿಗದಿತ ಪ್ರಮಾಣಕ್ಕಿಂತಲೂ ಹೆಚ್ಚಿನ ಆಲ್ಯೂಮಿನಿಯಂ ಕಂಟೆಂಟ್ ಪತ್ತೆಯಾಗಿದೆ. ಅಂದರೆ ಪ್ರತಿ ಲೀಟರ್ ನೀರಿನಲ್ಲಿ 0.03ಯಿಂದ 0.063 ಎಂಎಲ್‌ನಷ್ಟು ಆಲ್ಯೂಮಿನಿಯಂ ಅಂಶವಿರಬೇಕು. ಆದರೆ ಅದರಲ್ಲೀಗ ಅಧಿಕ ಪ್ರಮಾಣದಲ್ಲಿ 0.021ರಿಂದ 13.4 ಎಂಎಲ್‌ವರೆಗೆ ಕಂಡು ಬಂದಿದ್ದರ ಬಗ್ಗೆ ಈ ಮೊದಲೇ ರಾಜ್ಯ ಮಾಲಿನ್ಯ ನಿಯಂತ್ರಣ ಇಲಾಖೆಯು ತನ್ನ ವರದಿಯಲ್ಲಿ ತಿಳಿಸಿತ್ತು. ಇನ್ನೂ ಶಾಕಿಂಗ್! ಸಂಗತಿಯೆಂದರೆ ಶೃಂಗೇರಿಯಿಂದ ಆರಂಭವಾಗಿ ಗಂಗೆಯು ಕಲುಷಿತಗೊಳ್ಳುತ್ತಿದ್ದಾಳೆ, ಅಲ್ಲದೆ ಅದರಲ್ಲೂ ಹೆಚ್ಚು ಆಲ್ಯೂಮಿನಿಯಂ ಅಂಶವಿರುವುದು ಖಚಿತವಾಗಿದೆ.
ಆಮ್ಲಜನಕ ಬೇಡಿಕೆ ಹೆಚ್ಚು..
ಅಂದಹಾಗೆ ಪ್ರತಿಯೊಬ್ಬರ ಉಸಿರಿಗೆ ಬೇಕಾಗಿರುವ ಹಾಗೂ ನೀರಿನಲ್ಲಿಯೂ ಇರಬೇಕಾದ ಜೀವ ರಾಸಾಯನಿಕ ಆಮ್ಲಜನಕದ ಬೇಡಿಕೆ ಬಿಓಡಿಯು ಪ್ರತಿ ಲೀಟರ್‌ಗೆ 0.5ರಿಂದ 1 ಮಿಲಿ ಗ್ರಾಂ. ಗಳಷ್ಟಿರಬೇಕು. ಆದರೆ ಈ ಅರ್ಕಾವತಿ ನದಿಯಲ್ಲಿ 30 ಮಿಲಿ ಗ್ರಾಂ.ಗಿಂತಲೂ ಹೆಚ್ಚಾಗಿರುವುದು ಎಲ್ಲರನ್ನೂ ಆತಂಕಕ್ಕೆ ದೂಡಿದೆ. ಇನ್ನೂ ಭದ್ರಾ, ತುಂಗಭದ್ರಾ ಹಾಗೂ ಶಿಂಷಾ ನದಿಗಳಲ್ಲಿ ಇದರ ಪ್ರಮಾಣವು 6ರಿಂದ 10 ಮಿಲಿ ಗ್ರಾಂ. ಮಿತಿಯಲ್ಲಿದೆ. ಅಲ್ಲದೆ ಇನ್ನುಳಿದ 8 ನದಿಗಳು 3 ರಿಂದ 6 ಮಿಲಿ ಗ್ರಾಂ ಒಳಗಿದೆ. ಪ್ರಮುಖವಾಗಿ ಇವುಗಳನ್ನು ಹೊರತುಪಡಿಸಿ ಇತರ ನದಿಗಳಾದ ಅಘನಾಶಿನಿ, ಶರಾವತಿ, ದಕ್ಷಿಣ ಪಿನಾಕಿನಿ ಹಾಗೂ ಗಂಗಾವಳಿ ಈ ನದಿಗಳನ್ನು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ಮಲೀನ ನದಿಗಳ ಪಟ್ಟಿಗೆ ಸೇರಿಸಿತ್ತು. ಬಳಿಕ ಕಳೆದ 2022-23ನೇ ಸಾಲಿನಲ್ಲಿ ಇವುಗಳಲ್ಲಿಯ ಶರಾವತಿ, ಅಘನಾಶಿನಿ ಹಾಗೂ ಗಂಗಾವಳಿ ಇವುಗಳು ಕಲುಷಿತಗೊಂಡ ನದಿಗಳಲ್ಲ, ಇವುಗಳನ್ನು ಮಲೀನಗೊಂಡ ನದಿಗಳ ಲಿಸ್ಟ್‌ನಿಂದ ಕಿತ್ತು ಹಾಕುವಂತೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಕೇಂದ್ರದ ಮಾಲಿನ್ಯ ಮಂಡಳಿಗೆ ಮನವಿ ಮಾಡಿಕೊಂಡಿತ್ತು.
ಇನ್ನೂ ಇಷ್ಟೆಲ್ಲ ಮಲೀನವಾಗಿರುವ ನದಿಗಳ ನೀರಲ್ಲಿ ಕುಡಿಯಲು ಯೋಗ್ಯವಾದ ನೀರಿನಲ್ಲಿ ಎಷ್ಟು ಪ್ರಮಾಣದ ಬಿಓಡಿ ಮಟ್ಟ ಇರಬೇಕೆಂದು ನೋಡುವುದಾದರೆ. ಪ್ರಮುಖವಾಗಿ ಈ ಬಿಓಡಿಯ ಮಟ್ಟವು ಪ್ರತಿ ಲೀಟರ್‌ಗೆ 0.5-1 ಎಂಜಿ ಇದ್ದಾಗ ಅದು ಕುಡಿಯಲು ಸೂಕ್ತವಾದ ನೀರಾಗಿರುತ್ತದೆ ಎನ್ನುವುದು ಸೈಂಟಿಫಿಕಲ್ಲಿ ಪರಿಗಣಿಸಲಾಗುತ್ತದೆ. ಅಲ್ಲದೆ 2-8 ಇದ್ದರೆ ಅದು ಸ್ವಲ್ಪ ಪ್ರಮಾಣದಲ್ಲಿ ಮಲೀನವಾಗಿರುವ ನೀರು, 3 ರಿಂದ 5 ಇದ್ದರೆ ಅದು ಶುದ್ಧ ಕಲುಷಿತ ನೀರು ಗುರುತಿಸಲಾಗುತ್ತದೆ. 8 ಎಂ.ಜಿ.ಗಿಂತ ಹೆಚ್ಚಾಗಿದ್ದರೆ ಅದು ಅತೀ ಹೆಚ್ಚು ಮಾಲಿನ್ಯಗೊಂಡ ನೀರು ಎಂದು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಅಂತೆಯೇ ನಮ್ಮ ರಾಜ್ಯದಲ್ಲಿಯೂ ಈ ರೀತಿಯಾಗಿ ಕಲುಷಿತಗೊಂಡು ಕುಡಿಯಲು ಸೂಕ್ತವಾಗದ ನದಿಗಳೂ ಇವೆ, ಅದರಲ್ಲಿ ಮುಖ್ಯವಾಗಿ ಭದ್ರಾ, ತುಂಗಭದ್ರಾ ಹಾಗೂ ಶಿಂಷಾ ಈ ನದಿಗಳ ನೀರು ಮಾನವ ಸೇವನೆಗೆ ಅರ್ಹವಲ್ಲ. ಅಂದಹಾಗೆ ಇವುಗಳಲ್ಲಿಯೂ ಕೂಡ 6 ರಿಂದ 10 ಎಂ.ಜಿ.ಯಷ್ಟು ಬಿಓಡಿ ಜಾಸ್ತಿಯಾಗಿರುವುದು ಕಂಡು ಬಂದಿದೆ.
ಬಿಓಡಿ ಹೆಚ್ಚಳದಿಂದ ಭೀಕರ ಆರೋಗ್ಯ ಸಮಸ್ಯೆಗಳು..
ಇನ್ನೂ ಈ ರೀತಿಯಾಗಿ ಕಲುಷಿತಗೊಂಡ ನದಿಗಳ ನೀರನ್ನು ಮನುಷ್ಯರು ಸೇವಿಸುವುದರಿಂದ ಕಾಲರಾ, ಟೈಫಾಯಿಡ್, ಭೇದಿ, ಹೆಪಟೈಟಿಸ್ ಸೇರಿದಂತೆ ದೀರ್ಘಕಾಲದ ಅನಾರೋಗ್ಯಕ್ಕೆ ಕಾರಣವಾಗುವ ರೋಗಗಳು ಉಲ್ಭಣಿಸುತ್ತವೆ. ಅಲ್ಲದೆ ನೀರಿನಲ್ಲಿ ಬಿಓಡಿಯ ಹೆಚ್ಚಳದಿಂದ ಹಾನಿಕಾರ ಬ್ಯಾಕ್ಟಿರಿಯಾ ಹಾಗೂ ಮಾನವ ಶರೀರಕ್ಕೆ ಮಾರಕವಾಗುವ ಅಂಶಗಳ ಬೆಳವಣಿಗೆಗೆ ಕಾರಣವಾಗುತ್ತದೆ. ನದಿಗಳಿಗೆ ಸೇರುವ ಕಾರ್ಖಾನೆಗಳ ತ್ಯಾಜ್ಯ , ಕೀಟ ನಾಶಕ, ವಿಷಕಾರಿ ಕೆಮಿಕಲ್‌ಗಳಿಂದ ನದಿಗಳು ಮಲೀನಗೊಳ್ಳುವುದರ ಜೊತೆಗೆ ಆ ನೀರನ್ನು ಸೇವಿಸುವ ಮನುಷ್ಯರೂ ಸಹ ವ್ಯತಿರಿಕ್ತ ಪರಿಣಾಮಗಳನ್ನು ಅನುಭವಿಸುವಂತಾಗುತ್ತದೆ.
ರಾಜ್ಯದ ಯಾವ್ಯಾವ ನದಿಗಳು ಕಲುಷಿತಗೊಂಡಿವೆ..?
ಅಂದಹಾಗೆ ಈಗಾಗಲೇ ನೋಡಿದಂತೆ ರಾಜ್ಯದಲ್ಲಿ ಮಲೀನಗೊಂಡಿರುವ ನದಿಗಳನ್ನು ಗಮನಿಸುವುದಾದರೆ, ತುಂಗ, ಭದ್ರಾ, ನೇತ್ರಾವತಿ, ಕಾವೇರಿ, ಕಬಿನಿ, ಅರ್ಕಾವತಿ, ಲಕ್ಷ್ಮಣ ತೀರ್ಥ, ಹೇಮಾವತಿ, ಕಾಗಿಣಿ, ಕೃಷ್ಣಾ, ಶಿಂಷಾ, ಹಾಗೂ ಬೀಮಾ ನದಿಗಳು ಚರಂಡಿಗಳ ಕಲುಷಿತ ನೀರು ಹಾಗೂ ಕಾರ್ಖಾನೆಗಳ ತ್ಯಾಜ್ಯಗಳಿಂದ ಮಲೀನವಾಗುತ್ತಿರುವುದು ಕಳವಳಕಾರಿಯಾಗಿದೆ. ಅಲ್ಲದೆ ನದಿಗಳ ಮಲೀನಕ್ಕೆ ಮಾನವನ ದುರಾಸೆಯೇ ಕಾರಣವಾಗಿದೆ ಎನ್ನುವ ಸಂಗತಿಯನ್ನು ನಾವು ಒಪ್ಪಿಕೊಳ್ಳಲೇಬೇಕು. ಇನ್ನೂ ಮುಖ್ಯವಾಗಿ ಈ ನದಿಗಳಿಗೆ ಜನವಸತಿ ಪ್ರದೇಶಗಳಿಂದ ಕೊಳಚೆ ನೀರು ಬಿಡುವುದು, ನದಿ ದಂಡೆಯನ್ನು ಅಕ್ರಮ ಒತ್ತುವರಿ ಮಾಡುವುದು, ಮನೆಗಳ ಕಸ, ಜಾನುವಾರುಗಳ ಮಾಂಸಗಳನ್ನು ನದಿಗಳಿಗೆ ಬಿಸಾಡುತ್ತಿರುವುದು ಈ ನದಿಗಳ ಮಾಲಿನ್ಯಕ್ಕೆ ಕಾರಣವಾಗುತ್ತಿದೆ. ಅಲ್ಲದೆ ಅಕ್ರಮವಾಗಿ ಹಾಗೂ ಅವೈಜ್ಞಾನಿಕವಾಗಿ ನದಿಗಳಲ್ಲಿ ಮರಳು ಗಾರಿಕೆ ಮಾಡುವುದು ಸೇರಿದಂತೆ ಇನ್ನೂ ಪ್ರಮುಖವಾಗಿ ನದಿ ನೀರನ್ನು ಶುಚಿಯಾಗಿಡುವ ಮೀನು, ಆಮೆಗಳಂತಹ ಈ ರೀತಿಯ ಅನೇಕ ಜಲಚರಗಳನ್ನು ನಾಶ ಮಾಡುತ್ತಿರುವುದೂ ಕೂಡ ನದಿಗಳ ಇಂದಿನ ಈ ಸ್ಥಿತಿಗೆ ಕಾರಣವಾಗಿದೆ.
ಒಟ್ನಲ್ಲಿ.. ಜಲಮೂಲಗಳ ಸಂರಕ್ಷಣೆ ನೀರು ಕುಡಿಯುವ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ನಮ್ಮ ಆಸೆಗಳನ್ನು ಈಡೇರಿಸಿಕೊಳ್ಳುವ ಭರದಲ್ಲಿ ನಾವೇ ನಮ್ಮ ಬದುಕಿಗೆ ಹಾಗೂ ಭವಿಷ್ಯಕ್ಕೆ ಸಂಚಕಾರ ತಂದುಕೊಳ್ಳುತ್ತಿದ್ದೇವೆ ಅನ್ನೋದನ್ನ ಇನ್ನಾದರೂ ನಾವು ಅರಿತುಕೊಳ್ಳಬೇಕಿದೆ. ಯಾಕೆಂದರೆ ಪ್ರಮುಖವಾಗಿ ನಾವು ಅದೆಷ್ಟೋ ತೀರ್ಥ ಕ್ಷೇತ್ರಗಳಿಗೆ ಮಿಂದೆದ್ದು ನಾವು ಪವಿತ್ರವಾಗಿದ್ದೇವೆ ಹೇಳಿಕೊಳ್ಳುತ್ತೇವೆ. ಅಲ್ಲದೆ ಆ ಸ್ನಾನದ ನೆಪದಲ್ಲಿ ನದಿಯ ಮಲೀನಕ್ಕೆ ನಾವೇ ಕಾರಣರಾಗಿರುತ್ತೇವೆ. ಅಷ್ಟಕ್ಕೂ ಇದೊಂದೆ ಅಲ್ಲ ಈ ರೀತಿಯಾಗಿ ಮಾಡುವ ನಮ್ಮ ಹಲವಾರು ಸ್ವಯಂ ಕೃತ ಅಪರಾಧಗಳು ನದಿಗಳ ಇಂದಿನ ದುಸ್ಥಿತಿಗೆ ಕಾರಣವಾಗಿವೆ. ಪ್ರತಿಯೊಬ್ಬರು ಗಂಭೀರವಾಗಿ ಚಿಂತಿಸಬೇಕಾದ ಸಮಯವಿದು, ನಾವು ಸೇವಿಸುತ್ತಿರುವುದು ನೀರಲ್ಲ, ಬದಲಿಗೆ ಮಾರಕ ಕೆಮಿಕಲ್ ಅನ್ನೋದು ಗೊತ್ತಿರಲಿ. ಅದೇನೆ ಇರಲಿ..ಗಂಗಾ ಸ್ನಾನ, ತುಂಗಾ ಪಾನ ಅನ್ನೋ ನಾಣ್ಣುಡಿಯು ಇದೀಗ ಅರ್ಥ ಕಳೆದುಕೊಳ್ಳುತ್ತಿದೆ. ಇನ್ನಾದರೂ ಸರ್ಕಾರದ ಜೊತೆಗೆ ಸಾರ್ವಜನಿಕರೂ ಸಹ ಕೈ ಜೋಡಿಸುವುದರ ಮೂಲಕ ಕಲುಷಿತವಾಗಿರುವ ನದಿಗಳ ಸ್ವಚ್ಚತೆಗೆ ಮುಂದಾಗಬೇಕಿದೆ. ಇಲ್ಲವಾದರೆ ಈ ನದಿಗಳಂತೆ ಇನ್ನುಳಿದವುಗಳೂ ಸಹ ಮಲೀನ ಅನ್ನೋ ಹಣೆಪಟ್ಟಿ ಕಟ್ಟಿಕೊಳ್ಳುವುದರಲ್ಲಿ ಸಂದೇಹವೇ ಇಲ್ಲ..