Ramanagara News: ಅಂಗನವಾಡಿಯಲ್ಲಿ ಮಗು ಹಠ ಮಾಡುತ್ತಿದೆ ಎನ್ನುವ ಕಾರಣಕ್ಕೆ ಅಂಗನವಾಡಿ ಸಹಾಯಕಿಯೊಬ್ಬಳು ಕಂದಮ್ಮನ ಮೇಲೆ ಅಮಾನವೀಯ ಕೃತ್ಯವೆಸಗಿರುವ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಮಹಾರಾಜರ ಕಟ್ಟೆ ಗ್ರಾಮದ ಅಂಗನವಾಡಿ ಸಹಾಯಕಿ ಚಂದ್ರಮ್ಮ ಎನ್ನುವವಳ ವಿರುದ್ಧ ಪ್ರಕರಣ ದಾಖಲಾಗಿದೆ. ಅಂದಹಾಗೆ ಎರಡೂವರೆ ವರ್ಷದ ದೀಕ್ಷಿತ್ ಎಂಬ ಮಗು ಹಠ ಮಾಡುತ್ತಿದ್ದೆ ಎಂದು ಆರೋಪಿಸಿ ಡೈಪರಲ್ಲಿ ಕಾರದ ಪುಡಿ ಹಾಕಿ ವಿಕೃತಿ ಮೆರೆದಿದ್ದಾಳೆ. ಅಲ್ಲದೆ ಮಗುವಿನ ಕೈ ಮೇಲೆ ಬರೆಗಳನ್ನು ಎಳೆದು ಕ್ರೌರ್ಯ ತೋರಿದ್ದಾಳೆ.
ಇನ್ನೂ ಅದೇ ಗ್ರಾಮದ ರಮೇಶ್ ನಾಯಕ್ ಹಾಗೂ ಚೈತ್ರಾ ದಂಪತಿ ಮಗುವಾಗಿರುವ ದೀಕ್ಷಿತ್‌ನನ್ನು ಅಂಗನವಾಡಿಯಿಂದ ವಾಪಸ್ ಮನೆಗೆ ಕರೆತರಲು ಹೋದಾಗ ಮಗ ಅಳುತ್ತಿರುವುದನ್ನು ಗಮನಿಸಿದ್ದ ಪೋಷಕರಿಗೆ ಸಹಾಯಕಿ ಚಂದ್ರಮ್ಮಳ ಈ ಹೇಯ ಕೃತ್ಯ ತಿಳಿದಿದೆ. ಅಲ್ಲದೆ ತಕ್ಷಣವೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಗುವಿನ ಪೋಷಕರು ಸಿಡಿಪಿಒ ನಾರಾಯಣ್ ಅವರಿಗೆ ದೂರು ನೀಡಿದ್ದಾರೆ. ವಿಷಯ ತಿಳಿದು ಕೂಡಲೇ ಸ್ಥಳಕ್ಕೆ ಆಗಮಿಸಿದ್ದ ಅವರು ಪರಿಶೀಲನೆ ನಡೆಸಿದ್ದರು. ಬಳಿಕ ಅಂಗನವಾಡಿ ಸಹಾಯಕಿಯನ್ನು ವಿಚಾರಣೆ ನಡೆಸಿದ್ದರು. ಈ ಕುರಿತು ಮೇಲಧಿಕಾರಿಗಳ ಗಮನಕ್ಕೆ ತಂದು ತಪ್ಪಿತಸ್ಥ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಆದರೆ ಅಂಗನವಾಡಿ ಸಹಾಯಕಿ ಚಂದ್ರಮ್ಮ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಮಗುವಿನ ತಂದೆ ರಾಮನಗರ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ಸಿಬ್ಬಂದಿಯ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಒಟ್ನಲ್ಲಿ.. ಅಂಗನವಾಡಿಗಳೆಂದರೆ ಪುಟ್ಟ ಮಕ್ಕಳ ಭವಿಷ್ಯದ ಬೆಳವಣಿಗೆಗೆ ದಾರಿ ತೋರುವ ಜ್ಞಾನದ ಕೇಂದ್ರಗಳೆಂದು ಹೇಳುತ್ತೇವೆ. ಯಾಕೆಂದರೆ ಈ ಬಾಲ್ಯ ಅನ್ನೋದು ಪ್ರತಿಯೊಬ್ಬರ ಜೀವನದಲ್ಲಿ ಬಂದು ಹೋಗುವ ಅವಿಸ್ಮರಣೀಯ ನೆನಪು. ಆದರೆ ಬದುಕಿಗೆ ದಾರಿಯಾಗಬೇಕಿದ್ದ ಈ ಕೇಂದ್ರಗಳೇ ಜೀವಕ್ಕೆ ಅಪಾಯ ತರುವ ಕೂಪಗಳಾದರೆ..? ಇನ್ನೆಲ್ಲಿಯ ನಂಬಿಕೆ ಉಳಿಯುತ್ತದೆ.? ಹಾಗಂತ ಎಲ್ಲ ಅಂಗನವಾಡಿಗಳನ್ನು ದೂಷಿಸುವುದು ಸೂಕ್ತವಲ್ಲ, ಆದರೆ ಹೆತ್ತವರು ತಮ್ಮ ಮಕ್ಕಳ ಮೇಲೆ ಜೀವವನ್ನೇ ಇಟ್ಟುಕೊಂಡಿರುತ್ತಾರೆ. ಅದನೆಲ್ಲವನ್ನೂ ಮೀರಿ ಅಂಗನವಾಡಿಗಳಿಗೆ ಕಳುಹಿಸಿಕೊಟ್ಟು ಅವರ ಭವಿಷ್ಯದ ಕಡೆಗೆ ಗಮನ ಹರಿಸುತ್ತಾರೆ. ಅಷ್ಟಕ್ಕೂ ಯಾವ ಮಗು ಹಠ ಮಾಡುವುದಿಲ್ಲ ಹೇಳಿ.? ಮಕ್ಕಳೆಂದ ಮೇಲೆ ಅದು ಸಾಮಾನ್ಯ ಆದರೆ ಅದಕ್ಕೆ ಹೊಂದಿಕೊಂಡು ಹೋಗುವುದನ್ನು ಪ್ರತಿಯೊಬ್ಬರು ಕಲಿತುಕೊಳ್ಳಬೇಕಿದೆ. ಅದರಲ್ಲೂ ಒಬ್ಬ ಸಹಾಯಕಿಯಾಗಿ ಮಕ್ಕಳ ಬಗ್ಗೆ ಕಾಳಜಿ ತೋರುವುದನ್ನು ಬಿಟ್ಟು ಅವರ ಮೇಲೆಯೇ ಈ ವಿಕೃತಿ ಮೆರೆಯುವ ಇಂಥವರ ವಿರುದ್ಧ ಸೂಕ್ತ ಕ್ರಮವಾಗಬೇಕಿದೆ. ಅದೇನೆ ಇರಲಿ.. ಪುಟ್ಟ ಮಕ್ಕಳಿಗೆ ಅಂಗನವಾಡಿಯಾಗಲಿ ಅಥವಾ ಮನೆಯಾಗಲಿ ಅದು ಅವರ ಪಾಲಿಗೆ ಮನೆಯೇ ಆಗಿರುತ್ತದೆ. ಹೀಗೆ ಮನೆಯ ಮಕ್ಕಳಂತೆ ನೋಡಿಕೊಳ್ಳಬೇಕಿದ್ದ ಚಂದ್ರಮ್ಮ ಮಾತ್ರ ಪುಟ್ಟ ಮಗು ದೀಕ್ಷಿತ್ ಮೇಲೆ ತೋರಿರುವ ವಿಕೃತಿ ನಿಜಕ್ಕೂ ಅಕ್ಷಮ್ಯ..