Hubli News: ಹುಬ್ಬಳ್ಳಿ: ಮಕ್ಕಳಿಗೆ ಹಣ್ಣು ಕೊಡುತ್ತೇನೆ, ಚಾಕೋಲೇಟ್ಸ್ ಕೊಡುತ್ತೇನೆ ಎಂದು ಆಸೆ ತೋರಿಸಿ, ಅಪಹರಣ ಮಾಡುತ್ತಿದ್ದ ವಿಕೃತ ಕಾಮಿಯನ್ನು ಹುಬ್ಬಳ್ಳಿಯಲ್ಲಿ ಅರೆಸ್ಟ್ ಮಾಡಲಾಗಿದೆ. ಈತ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿದ್ದು, ಮೊದಲು ಸಾರ್ವಜನಿಕರು ಚೆನ್ನಾಗಿ ಬಾರಿಸಿದ್ದು, ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ.
ಹುಬ್ಬಳ್ಳಿಯ ಕಮರಿಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಆದಿಲ್ ಅಂಕಲಗಿ ಅರೆಸ್ಟ್ ಆಗಿರುವ ವಿಕೃತ ಕಾಮಿಯಾಗಿದ್ದಾನೆ. ಓಣಿಯಲ್ಲಿ ಆಡುತ್ತಿದ್ದ ಮಕ್ಕಳನ್ನು ನೋಡಿಟ್ಟುಕೊಂಡು, ಬಳಿಕ ಬಂದು ಮಾತನಾಡಿಸುತ್ತಿದ್ದ. ಕೊನೆಗೆ ಅಲ್ಲಿ ನಾನು ಹಣ್ಣು, ಚಾಕೋಲೇಟ್ಸ್, ತಿಂಡಿ ತಂದಿದ್ದೇನೆ ಕೊಡುತ್ತೇನೆ ಬನ್ನಿ ಎಂದು ಹೇಳಿ, ಕರೆದೊಯ್ಯುತ್ತಿದ್ದ.
ಆದಿಲ್ ಹುಬ್ಬಳ್ಳಿಯ ಬೊಮ್ಮಾಪುರ ಓಣಿಯ ನಿವಾಸಿಯಾಗಿದ್ದು, ಈತನ ಕಚಡಾ ಕೆಲಸದ ದೃಶ್ಯ ಸ್ಥಳದಲ್ಲೇ ಇದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನು ಗಮನಿಸಿದ ಸರ್ವಜನಿಕರು, ಈತನನ್ನು ಹುಡುಕಿ, ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬಳಿಕ ಪೊಲೀಸ್ ಠಾಣೆಗೆ ತಂದೊಪ್ಪಿಸಿದ್ದಾರೆ. ಕಮರಿಪೇಟ್ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದ್ದಾರೆ.