ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಅಂದರೆ ಪಿಎಂ-ಕಿಸಾನ್ ಯೋಜನೆಯಡಿ ಆರ್ಥಿಕ ನೆರವು ಪಡೆಯುತ್ತಿರುವ ರೈತರಿಗೆ ಕೇಂದ್ರ ಸರ್ಕಾರದಿಂದ ಹೊಸ ಸೂಚನೆ ಹೊರಬಿದ್ದಿದೆ. ಈ ಯೋಜನೆಯಡಿ ಪ್ರೋತ್ಸಾಹಧನ ಮುಂದುವರೆಯಬೇಕಾದರೆ ಅರ್ಹ ರೈತರು ಪ್ರತಿವರ್ಷ ಕಡ್ಡಾಯವಾಗಿ ಬಯೋಮೆಟ್ರಿಕ್ ಇ-ಕೆವೈಸಿ ಮಾಡಿಸಬೇಕು ಎಂದು ಕೃಷಿ ನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ.
ಕೇಂದ್ರ ಸರ್ಕಾರದ ಮಾರ್ಗದರ್ಶನದಂತೆ, 2019ರ ಫೆಬ್ರವರಿ 1ಕ್ಕಿಂತ ಮುಂಚೆ ಭೂ ಒಡೆತನ ಹೊಂದಿರುವ ಪ್ರತಿ ಅರ್ಹ ರೈತ ಕುಟುಂಬಕ್ಕೆ ವರ್ಷಕ್ಕೆ ಒಟ್ಟು ಆರು ಸಾವಿರ ರೂಪಾಯಿಗಳನ್ನು, ಪ್ರತಿ ನಾಲ್ಕು ತಿಂಗಳಿಗೊಮ್ಮೆ ಎರಡು ಸಾವಿರ ರೂಪಾಯಿಯಂತೆ ಮೂರು ಕಂತುಗಳಲ್ಲಿ ನೇರವಾಗಿ ನೀಡಲಾಗುತ್ತಿದೆ. ಈ ಹಣದ ಮುಂದುವರಿಕೆಗಾಗಿ ಫ್ರೂಟ್ಸ್ ತಂತ್ರಾಂಶದ ಜೊತೆಗೆ ಈಗ ಅಗ್ರಿಸ್ಟ್ಯಾಕ್ ಯೋಜನೆಯಡಿ ಹೊಸ ಗುರುತಿನ ಸಂಖ್ಯೆಯನ್ನು ಸೃಷ್ಟಿಸುವುದು ಕಡ್ಡಾಯವಾಗಿದೆ.
ರೈತರು ಇ-ಕೆವೈಸಿ ಮಾಡಲು ಎರಡು ಸುಲಭ ಮಾರ್ಗಗಳಿವೆ. ಮೊದಲನೆಯದಾಗಿ, ಹತ್ತಿರದ ಸಾಮಾನ್ಯ ಸೇವಾ ಕೇಂದ್ರಗಳಿಗೆ ಅಂದರೆ ಸಿಎಸ್‌ಸಿ ಕೇಂದ್ರಗಳಿಗೆ ಆಧಾರ್ ಕಾರ್ಡ್ ತೆಗೆದುಕೊಂಡು ಹೋಗಿ ಬಯೋಮೆಟ್ರಿಕ್ ಮೂಲಕ ಇ-ಕೆವೈಸಿ ಮಾಡಿಸಬಹುದು. ಎರಡನೆಯದಾಗಿ, ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ‘ಪಿಎಂ-ಕಿಸಾನ್ ಫೇಸ್ ರೆಕಗ್ನಿಷನ್ ಆಪ್’ ಮೂಲಕ ಮುಖದ ದೃಢೀಕರಣದ ಆಧಾರದ ಮೇಲೆಯೂ ರೈತ ಸಂಪರ್ಕ ಕೇಂದ್ರಗಳಲ್ಲಿ ಇದನ್ನು ಮಾಡಿಕೊಳ್ಳಬಹುದು.
ಆದ್ದರಿಂದ ಎಲ್ಲಾ ಫಲಾನುಭವಿ ರೈತರು ಯಾವುದೇ ವಿಳಂಬವಿಲ್ಲದೆ ಹತ್ತಿರದ ಸಿಎಸ್‌ಸಿ ಅಥವಾ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ, ಬಾಕಿ ಇರುವ ಇ-ಕೆವೈಸಿಯನ್ನು ತಕ್ಷಣವೇ ಪೂರ್ಣಗೊಳಿಸಿ ಸರ್ಕಾರದ ಸೌಲಭ್ಯವನ್ನು ಪಡೆದುಕೊಳ್ಳುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.




