Political News: ರಾಜಸ್ಥಾನದಲ್ಲಿ ಬಿಜೆಪಿ ಸರ್ಕಾರ ಒಂದು ವರ್ಷ ಪೂರೈಸಿದ ಹಿನ್ನೆಲೆ, ಪ್ರಧಾನಿ ಮೋದಿ ಇಂದು 50 ಸಾವಿರ ಕೋಟಿ ಮೌಲ್ಯದ ಯೋಜನೆಗಳಿಗೆ ಚಾಲನೆ ನೀಡಿದರು.
ರಾಜಸ್ಥಾನದ ಜೈಪುರದಲ್ಲಿ ಬಿಜೆಪಿ ಸಮಾವೇಶ ನಡೆದಿದ್ದು, ಪ್ರಧಾನಿ ಮೋದಿ, ರಾಜಸ್ಥಾನ ಮುಖ್ಯಮಂತ್ರಿ ಭಜನ್ ಲಾಲ್ ಸೇರಿ ಹಲವು ಬಿಜೆಪಿ ನಾಯಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಒಂದು ವರ್ಷ ಪೂರೈಸಿದ್ದಕ್ಕೆ ಪ್ರಧಾನಿ ಮೋದಿ, ಭಜನ್‌ಲಾಲ್ ಅವರನ್ನು ಅಭಿನಂದಿಸಿದರು.
ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ, ರಾಜಸ್ಥಾನದ ಅಭಿವೃದ್ಧಿಗಾಗಿ ಭಜನ್‌ಲಾಲ್ ತಂಡ ಬಹಳಷ್ಟು ಶ್ರಮ ಪಟ್ಟಿದೆ. ಇಂದು ಚಾಲನೆ ನೀಡಿದ ಯೋಜನೆಗಳು ಇಲ್ಲಿನ ನೀರಿನ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ರೈತರ ಎಲ್ಲಾ ಸಮಸ್ಯೆಗಳಿಗೆ ಈ ಯೋಜನೆಗಳು ಪರಿಹಾರ ನೀಡುತ್ತದೆ. ಅಲ್ಲದೇ, ಪ್ರವಾಸೋದ್ಯಮ ಸೇರಿ ಹಲವು ಉದ್ಯಮಗಳು ಈ ಯೋಜನೆಗಳಿಂದ ಅಭಿವೃದ್ಧಿ ಹೊಂದಬಹುದು ಎಂದು ಪ್ರಧಾನಿ ಮೋದಿ ಹೇಳಿದರು.
ಇನ್ನು ಇದೇ ವೇಳೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿರುವ ಪ್ರಧಾನಿ ಮೋದಿ, ನಾನು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ, ಗುಜರಾತಿನ ವಿವಿಧ ಭಾಗಗಳಿಗೆ ನರ್ಮದಾ ನದಿಯಿಂದ ನೀರು ತರಲು ದೊಡ್ಡ ಅಭಿಯಾನ ನಡೆಸಿದ್ದೆ. ಆಗ ನಮ್ಮ ಅಭಿಯಾನಕ್ಕೆ ಬೆಂಬಲ ಕೋರಬೇಕಿದ್ದ ಕಾಂಗ್ರೆಸ್ ಸರ್ಕಾರ, ಜಲವಿವಾದ ಹೆಚ್ಚಿಸಿತ್ತು ಎಂದು ಕಾಂಗ್ರೆಸ್ ವಿರುದ್ಧ ಮೋದಿ ವಾಗ್ದಾಳಿ ನಡೆಸಿದ್ದಾರೆ.




