ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯವರು ಕಾಮನ್‍ವೆಲ್ತ್ ಗೇಮ್ಸ್‍ನಲ್ಲಿ ಪದಕ ಗೆದ್ದು ಬಂದ ಕ್ರೀಡಾಳುಗಳಿಗೆ ಶನಿವಾರ ತಮ್ಮ ನಿವಾಸದಲ್ಲಿ ಆದರೋಪಚಾರ ನೀಡಿ ಗೌರವಿಸಿದರು. “ಇದು ನಮ್ಮ ಯುವಶಕ್ತಿಯ ಆರಂಭ ಭಾರತದ ಕ್ರೀಡೆಯ ಸ್ವರ್ಣ ಯುಗ ಈಗ ಆರಂಭವಾಗಿದೆ” ಎಂಬುದಾಗಿ ಮೋದಿಯವರು ನುಡಿದರು.
ಸಮಯಾವಕಾಶ ಮಾಡಿಕೊಂಡು ತಮ್ಮ ನಿವಾಸಕ್ಕೆ ಆಗಮಿಸಿದ ಕ್ರೀಡಾಳುಗಳಿಗೆ ಕೃತಜ್ಞತೆ ತಿಳಿಸಿದ ಪ್ರಧಾನಿಯವರು, “ದೇಶದ ಜನರೆಲ್ಲರೂ ನಿಮ್ಮ ಜತೆ ಸಂವಾದ ನಡೆಸಲು ಹೆಮ್ಮೆ ಪಡುವಂತೆಯೇ ನಾನು ಕೂಡ ನಿಮ್ಮೊಂದಿಗೆ ಸೇರಲು ಹೆಮ್ಮೆ ಪಡುತ್ತಿದ್ದೇನೆ ಎಂದರು.
“ಕಾಮನ್‍ವೆಲ್ತ್ ಗೇಮ್ಸ್‍ನ ನಿರ್ವಹಣೆಯನ್ನು ಕೇವಲ ಪದಕಗಳ ಸಂಖ್ಯೆಯಿಂದ ಅಳೆಯಲಾಗುವುದಿಲ್ಲ. ಪ್ರತಿಯೊಂದು ಸ್ಪರ್ಧೆಯಲ್ಲೂ ನಮ್ಮ ಕ್ರೀಡಾಳುಗಳು ನಿಕಟ ಸ್ಪರ್ಧೆ ನೀಡಿದ್ದಾರೆ. ಕೆಲವರು 1 ಸೆಕೆಂಡಿನಿಂದ ಅಥವಾ 1 ಸೆಂಟಿಮೀಟರ್‍ನಿಂದ ಪದಕ ವಂಚಿತರಾಗಿರಲೂ ಬಹುದು. ಮುಂದಿನ ದಿನಗಳಲ್ಲಿ ಅವರೆಲ್ಲರೂ ಪದಕ ಗೆಲ್ಲುವ ವಿಶ್ವಾಸವಿದೆ” ಎಂದು ಮೋದಿ ಹೇಳಿದರು.
“ಇದು ಆರಂಭ ಮಾತ್ರ. ನಾವು ಸುಮ್ಮನೆ ಕೂರುವಂತಿಲ್ಲ. ಕ್ರೀಡೆಯ ಸ್ವರ್ಣಯುಗವು ನಮ್ಮ ಬಾಗಿಲನ್ನು ತಟ್ಟುತ್ತಿದೆ. ಜಗತ್ತಿನಲ್ಲಿಯೇ ಶ್ರೇಷ್ಠವಾದ ಕ್ರೀಡಾ ವ್ಯವಸ್ಥೆಯನ್ನು ರೂಪಿಸುವ ಹೊಣೆಗಾರಿಕೆ ನಮ್ಮ ಮೇಲಿದೆ. ಯಾವುದೇ ಪ್ರತಿ`Éಯೂ ಅವಕಾಶವಂಚಿತವಾಗಬಾರದು ” ಎಂಬುದಾಗಿ ಮೋದಿ ನುಡಿದರು.
ನಾವು ಬಲಿಷ್ಠರಾಗಿದ್ದ ಕ್ರೀಡೆಗಳಲ್ಲಿ ಉತ್ತಮ ನಿರ್ವಹಣೆ ನೀಡಿರುವುದಷ್ಟೇ ಅಲ್ಲದೆ ಕೆಲವು ಹೊಸ ಕ್ರೀಡೆಗಳಲ್ಲೂ ನಮ್ಮ ಛಾಪು ಒತ್ತಿದ್ದೇವೆ. ನಾಲ್ಕು ಹೊಸ ಕ್ರೀಡೆಗಳಲ್ಲಿ ಪದಕಗಳನ್ನು ಗೆದ್ದಿದ್ದೇವೆ. ಲಾನ್ ಬೌಲ್ಸ್, ಅತ್ಲೆಟಿಕ್ಸ್‍ನಲ್ಲಿ ನಮ್ಮ ನಿರ್ವಹಣೆ ಗಮನಾರ್ಹವಾಗಿದೆ ಎಂದು ಮೋದಿ ಶ್ಲಾಘಿಸಿದರು.
ಮಹಿಳಾ ಕ್ರಿಕೆಟ್ ತಂಡದ ಸಾಧನೆಯನ್ನು ಉಲ್ಲೇಖಿಸಿದ ಮೋದಿಯವರು “ಹರ್ಮನ್‍ಪ್ರೀತ್ ಕೌರ್ ನಾಯಕತ್ವದಲ್ಲಿ ತಂಡವು ಉತ್ತಮ ನಿರ್ವಹಣೆ ನೀಡಿದೆ. ಪ್ರತಿಯೊಬ್ಬ ಆಟಗಾರ್ತಿಯೂ ಗಮನಾರ್ಹ ನಿರ್ವಹಣೆ ನೀಡಿದ್ದಾರೆ. ಅದರಲ್ಲಿಯೂ ರೇಣುಕಾ ಅವರ ಬೌಲಿಂಗ್ ಎದುರಿಸಲು ಯಾರಿಂದಲೂ ಆಗಲಿಲ್ಲ. ಟೂರ್ನಿಯಲ್ಲಿ ಇತರ ದೇಶಗಳ ಶ್ರೇಷ್ಠ ಆಟಗಾರ್ತಿಯರಿದ್ದರೂ ರೇಣುಕಾ ಅವರು ಗರಿಷ್ಠ ವಿಕೆಟ್ ಗಳಿಸಿದ್ದು ಸಣ್ಣ ಸಾಧನೆಯೇನಲ್ಲ” ಎಂದರು.
ಈ ನಿರ್ವಹಣೆಯು ಇನ್ನಷ್ಟು ಯುವಕರನ್ನು ಕ್ರೀಡೆಗೆ ಆಕರ್ಷಿಸುವುದು ಎಂಬ ವಿಶ್ವಾಸವನ್ನು ಮೋದಿ ವ್ಯಕ್ತಪಡಿಸಿದರು. ಈ ಸಾಧನೆಯು `ಏಕ ಭಾರತ ಶ್ರೇಷ್ಠ ಭಾರತ’ ಪರಿಕಲ್ಪನೆಗೆ ಇಂಬು ನೀಡಿದೆ ಎಂದು ಅವರು ಅಭಿನಂದಿಸಿದರು.