ರಾಜ್ಯ ಸರ್ಕಾರ ಖಾಲಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಧಾರವಾಡದಲ್ಲಿ ಅಗಾಗ್ಗೆ ಉದ್ಯೋಗ ಆಕಾಂಕ್ಷಿಗಳು ಆಕ್ರೋಶ ಹೊರ ಹಾಕುತ್ತಲೇ ಬರುತ್ತಿದ್ದು, ಮತ್ತೆ ಇಂದು ಬೀದಿಗೆ ಇಳಿಯಲು ಸಜ್ಜಾಗಿದ್ದರು. ಇದರ ಭಾಗವಾಗಿ ಅಂಬೇಡ್ಕರ್ ಜಯಂತಿ ಅಂಗವಾಗಿ “ಭೀಮ ನಡಿಗೆ ಶೀಘ್ರ ನೇಮಕಾತಿಯಡಿಗೆ ಎಂಬ ಶೀರ್ಷಿಕೆಯಡಿಯಲ್ಲಿ ಸಿದ್ಧರಾಗುತ್ತಿದ್ದ ಉದ್ಯೋಗ ಅಕಾಂಕ್ಷಿಗಳಿಗೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರೇಟ್ ಶಾಕ್ ನೀಡಿದೆ. ಅದರ ಕುರಿತು ಒಂದು ವರದಿ ಇಲ್ಲಿದೆ ನೋಡಿ…
ಇತ್ತೀಚೆಗೆ ಕಳೆದ ಎರಡ್ಮೂರು ತಿಂಗಳಿಂದ ಧಾರವಾಡದಲ್ಲಿ ಉದ್ಯೋಗ ಆಕಾಂಕ್ಷಿಗಳ ಆಕ್ರೋಶ ಹೆಚ್ಚಾಗುತ್ತಲೇ ಇದೆ. ಉದ್ಯೋಗ ಆಕಾಂಕ್ಷಿಗಳು ಸರ್ಕಾರಿ ಖಾಲಿ ಹುದ್ದೆ ಭರ್ತಿ, ವಯೋಮಿತಿ ಸಡಿಲಿಕೆ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸುತ್ತಲೇ ಬರುತ್ತಿದ್ದಾರೆ. ಆದರೆ ಆಡಳಿತರೊಢ ಕಾಂಗ್ರೆಸ್ ಸರ್ಕಾರ ಉದ್ಯೋಗ ಆಕಾಂಕ್ಷಿಗಳ ಬೇಡಿಕೆಗೆ ಒತ್ತು ನೀಡದ ಹಿನ್ನಲೆಯಲ್ಲಿ ಹಾಗೂ ಸರ್ಕಾರಿ ಇಲಾಖೆಗಳ ಖಾಲಿ ಹುದ್ದೆಗಳ ಭರ್ತಿ ನಿರ್ಲಕ್ಷ್ಯದಿಂದ ಬೇಸತ್ತ ಉದ್ಯೋಗ ಆಕಾಂಕ್ಷಿಗಳು ಇಂದು ಮತ್ತೆ ಬೀದಿಗೆ ಇಳಿಯಲು ಸಜ್ಜಾಗಿದ್ದಾರು.
ಕರ್ನಾಟಕ ವಿದ್ಯಾವರ್ಧಕ ಸಂಘ, ಜನಸಾಮನ್ಯರ ವೇದಿಕೆ ಸೇರಿ ವಿವಿಧ ವಿದ್ಯಾರ್ಥಿಗಳ ಸಂಘಟನೆ ನೇತೃತ್ವದಲ್ಲಿ, ಡಾ. ಬಿಅರ್ ಅಂಬೇಡ್ಕರ್ ಜಯಂತಿ ನಿಮಿತ್ತವಾಗಿ, ಭೀಮ ನಡಿಗೆ ಶೀಘ್ರ ನೇಮಕಾತಿಯಡಿಗೆ ಎಂಬ ಶೀರ್ಷಿಕೆಯಡಿಯಲ್ಲಿ ಧಾರವಾಡದ ಜಯ ನಗರದ ಶಾರದಾ ಹೈಸ್ಕೂಲ್ ಬಳಿ ಧರಣಿ ಸತ್ಯಾಗ್ರಹಕ್ಕೆ ಮುಂದಾಗಿತ್ತು. ಆದರೆ ಈ ಧರಣಿ ಸತ್ಯಾಗ್ರಹಕ್ಕೆ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರೇಟ್ ಧರಣಿ ಕೈಗೊಂಡ ಸಂಘಟನೆಗಳಿಗೆ ಅನುಮತಿ ನಿರಾಕರಿಸಿತ್ತು.
ಇದರ ಮಧ್ಯ ಧರಣಿಗೆ ಸಜ್ಜಾಗುತ್ತಿದ್ದ ಉದ್ಯೋಗ ಆಕಾಂಕ್ಷಿಗಳಿಗೆ ಧಾರವಾಡ ವಿದ್ಯಾಗಿರಿ ಠಾಣೆಯ ಪೊಲೀಸರು ಶಾಕ್ ನೀಡಿ, ಪ್ರತಿಭಟನೆ ಧರಣಿಗೆ ಬಂದಿದ್ದ ಲಕ್ಷ್ಮೀಕಾಂತ ಸೇರಿ ಇನ್ನೋರ್ವನನ್ನು ವಶಕ್ಕೆ ಪಡೆದುಕೊಂಡರು. ಸಾಮನ್ಯ ಜನರ ಪ್ರತಿಭಟನೆ ಧ್ವನಿ ಹತ್ತಿಕುವ ಕೆಲಸ ರಾಜ್ಯ ಸರ್ಕಾರ ಮಾಡುತ್ತಿದೆ. ಪ್ರತಿಭಟನೆ ಮಾಡುವ ನಮ್ಮ ಸಂವಿಧಾನಿಕ ಹಕ್ಕುಗಳನ್ನು ಸರ್ಕಾರ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಷನರೇಟ ಮೂಲಕ ಮಾಡುತ್ತಿದೆ ಎಂದು ವಿದ್ಯಾರ್ಥಿ ನಾಯಕ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.
ಸದ್ಯ ರಾಜ್ಯದಲ್ಲಿ ಸುಮಾರು 2ಲಕ್ಷ 80 ಸಾವಿರಕ್ಕೂ ಅಧಿಕ ಸರ್ಕಾರಿ ಹುದ್ದೆಗಳು ಖಾಲಿ ಇದ್ದು, ಇವುಗಳನ್ನು ಭರ್ತಿ ಮಾಡಲು ಈಗಾಗಲೇ ಧಾರವಾಡದಲ್ಲಿ ಆರೇಳು ಬಾರಿ ವಿದ್ಯಾರ್ಥಿ ಸಂಘಟನೆಗಳ ಪ್ರತಿಭಟನೆ ಮಾಡಿ ಸರ್ಕಾರಕ್ಕೆ ಮನವಿ ಕೂಡಾ ಸಲ್ಲಿಸಿವೆ. ಇತ್ತೀಚೆಗೆ ವಿದ್ಯಾರ್ಥಿಗಳು ಹಾಗೂ ಉದ್ಯೋಗ ಆಕಾಂಕ್ಷಿಗಳ ಆಕ್ರೋಶ ಹೆಚ್ಚಾದ ಬೆನ್ನಲೇ, ಕಳೆದ ಅಧಿವೇಶನದಲ್ಲಿ ಸರ್ಕಾರ ಒಂದಿಷ್ಟು ಹುದ್ದೆಗಳ ಭರ್ತಿ ಮಾಡುವ ಭರವಸೆ ನೀಡಿತ್ತು, ಆದರೆ ಆ ಭರವಸೆಯು ಈಗಲೂ ಈಡೇರದ ಹಿನ್ನಲೆಯಲ್ಲಿ ಮತ್ತೆ ಉದ್ಯೋಗ ಆಕಾಂಕ್ಷಿಗಳು ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರೇಟ್ ಅನುಮತಿ ನಿರಾಕರಣೆ ಮಧ್ಯಯು ಪ್ರತಿಭಟನೆ ಧರಣಿಗೆ ಮುಂದಾಗಿದ್ದರು.
ಈ ಹಿನ್ನಲೆಯಲ್ಲಿ ಪ್ರತಿಭಟನೆ ಧರಣಿ ಒಂದು ದಿನ ಮುಂಚೆಯೇ ಹತ್ತು ಜನ ವಿದ್ಯಾರ್ಥಿ ನಾಯಕರಿಗೆ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರೇಟ್ ನೋಟೀಸ್ ಜಾರಿ ಮಾಡಲಾಗಿದೆ. ಹತ್ತು ಜನ ವಿದ್ಯಾರ್ಥಿ ನಾಯಕರು ಯಾವುದೇ ತರಹದ ಹೋರಾಟ ಸಂಘಟಿಸುವಂತಿಲ್ಲ. ಜತೆಗೆ ಒಂದು ವರ್ಷ ಹೋರಾಟಗಳಲ್ಲಿ ಭಾಗವಹಿಸದಂತೆ ನೋಟೀಸ್ ನೀಡಲಾಗಿದ್ದು, ಇದು ಉದ್ಯೋಗ ಅಂಕಾಕ್ಷಿಗಳು ಸೇರಿದಂತೆ ವಿದ್ಯಾರ್ಥಿ ನಾಯಕರ ಆಕ್ರೋಶ ಮತ್ತಷ್ಟು ಹೆಚ್ಚಿಸಿದೆ.
ರಾಜ್ಯದಲ್ಲಿ ಆಡಳಿತ ಮಾಡುತ್ತಿರುವ ಸಿಎಂ ಸಿದ್ದರಾಮಯ್ಯನವರು, ಅಧಿಕಾರಕ್ಕೆ ಬರುವ ಮುಂಚೆ 1ಲಕ್ಷ ಸರ್ಕಾರಿ ಹುದ್ದೆ ತುಂಬಿಕೊಳ್ಳುವ ಭರವಸೆ ನೀಡಿದರು. ಈಗ ಅದನ್ನು ನಾವು ಕೇಳುತ್ತಿದ್ದೇವೆ, ಕೇಳುತ್ತಿದ್ದವರ ಧ್ವನಿ ಹತ್ತಿಕುವ ಕೆಲಸ ಸರ್ಕಾರ ಮಾಡುತ್ತಿದೆ. ಈ ಕೂಡಲೇ ಸರ್ಕಾರಿ ಖಾಲಿ ಹುದ್ದೆ ನೇಮಕಾತಿ ಪ್ರಾರಂಭಿಸದಿದ್ದರೆ ನಮ್ಮ ಹೋರಾಟ ಇನ್ನಷ್ಟು ತೀವ್ರಗೊಳ್ಳಿಸುವುದಾಗಿ ಸರ್ಕಾರಕ್ಕೆ ಉದ್ಯೋಗ ಅಕಾಂಕ್ಷಿಗಳು ಖಡಕ್ ಎಚ್ಚರಿಕೆ ನೀಡಿದ್ದು, ಸರ್ಕಾರ ಇದನ್ನು ಎಷ್ಟರಮಟ್ಟಿಗೆ ಗಂಭೀರವಾಗಿ ತೆಗೆದುಕೊಳ್ಳುತ್ತದೆ ಎಂಬುವುದು ಕಾದು ನೋಡಬೇಕಿದೆ.
ಸಂಗಮೇಶ ಸತ್ತಿಗೇರಿ, ಧಾರವಾಡ




