Political News: ಕಾಂಗ್ರೆಸ್ ಪಕ್ಷವನ್ನು ಸಿ.ಡಿ.ಫ್ಯಾಕ್ಟರಿ ಎಂದು ಟೀಕಿಸಿದ ಬಸನಗೌಡ ಪಾಟೀಲ್ ಯತ್ನಾಳ್

Political News: ಸದ್ಯ ರಾಜ್ಯ ರಾಜಕಾರಣದಲ್ಲಿ ಸ್ಟಿಂಗ್ ಆಪರೇಷನ್‌ದ್ದೇ ಸೌಂಡ್ ಜೋರಾಗಿದೆ. ಇದೀಗ ಬಸನಗೌಡ ಪಾಟೀಲ್ ಯತ್ನಾಳ್ ಕೂಡ ಹೆಚ್ಡಿಕೆ ಪರ ಬ್ಯಾಟ್ ಬೀಸಿದ್ದು, ಕಾಂಗ್ರೆಸ್ ಪಕ್ಷವನ್ನು ಸಿ.ಡಿ.ಫ್ಯಾಕ್ಟರಿ ಎಂದು ಟೀಕಿಸಿದ್ದಾರೆ.

ಆಡಳಿತದಲ್ಲಿರುವ ಸರ್ಕಾರಕ್ಕೆ ಅಧಿಕಾರದ ಹಪಾ ಹಪಿ , ಖುರ್ಚಿ ಗಟ್ಟಿ ಮಾಡಿಕೊಳ್ಳುವ ಪ್ರಯತ್ನ ಮಿತಿಮೀರಿದೆ. ರಾಜಕೀಯ ವೈರಿಗಳನ್ನು ಸದೆಬಡಿಯಲು ‘ಸ್ಟಿಂಗ್ ಆಪರೇಷನ್’ ಎಂಬ ಅಸ್ತ್ರವನ್ನು ಬಳಸಿಕೊಳ್ಳುತ್ತಿರುವುದು ಹೇಯ ಹಾಗೂ ಖಂಡನೀಯ. ನಿಕಟಪೂರ್ವ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ‘ಸಿ.ಡಿ. ಫ್ಯಾಕ್ಟರಿ ಮಾಫಿಯಾ’ ಬಿಟ್ಟಿಲ್ಲ. ರಾಜಕೀಯ ವೈರಿಗಳನ್ನು ಹಣಿಯಲು ಚಾರಿತ್ರ್ಯಹನನ ಮಾಡುವ ಈ ಅನೈತಿಕ ಪ್ರಯತ್ನಗಳು ಮೌಲ್ಯಯುತ ರಾಜಕಾರಣದ ಅಧಃಪತನದ ಸಂಕೇತ ಎಂದು ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.

ಸಿದ್ದರಾಮಯ್ಯನವರನ್ನು ಹಣಿಯಲು, ತೇಜೋವಧೆ ಮಾಡಲು ಅವರ ಪಕ್ಷದಲ್ಲೇ ಒಂದು ಗ್ಯಾಂಗ್ ಸಕ್ರಿಯವಾಗಿದೆ. ಹಿಂದುಳಿದ ವರ್ಗದ ನಾಯಕನನ್ನು ರಾಜಕೀಯವಾಗಿ ಹಣಿಯಲು ಮಾಡುವ ಪ್ರಯತ್ನವಿದು. ಅಭಿವೃದ್ಧಿ, ಜನೋಪಕಾರಿ, ಬಡವರ, ರೈತರ, ಶೋಷಿತರ ಹಾಗೂ ಶ್ರಮಿಕರ ಪರ ಕೆಲಸ ಮಾಡಬೇಕಾಗಿದ್ದ ಸರ್ಕಾರ ಹಾಗೂ ನಾಯಕರು, ತಮ್ಮ ರಾಜಕೀಯ ವೈರಿಗಳನ್ನು ಸದೆಬಡಿಯಲು ಕೆಲಸ ಮಾಡುತ್ತಿದ್ದಾರೆ. *ಗಾಯಗೊಂಡಿರುವ ಸಿಂಹದ ಉಸಿರು ಘರ್ಜನೆಗಿಂತ ಭಯಂಕರವಾಗಿರುತ್ತದೆ ಎಂದು ‘ಸಿ.ಡಿ. ಫ್ಯಾಕ್ಟರಿ’ ಯ ಸಂಸ್ಥಾಪಕರು ಹಾಗೂ ಅದರ ಸದಸ್ಯರು ಮರೆಯಬಾರದು ಎಂದು ಕಾಂಗ್ರೆಸ್ ಪಕ್ಷವನ್ನು ಯತ್ನಾಳ್ ಟೀಕಿಸಿದ್ದಾರೆ.

ಹಿಂದುಳಿದ ವರ್ಗಗಳ ನಾಯಕನಿಗೆ ಎಸಗಿದ ಅವಮಾನವನ್ನು ಅದೇ ಸಮುದಾಯದ ಜನ ಚುನಾವಣೆಯಲ್ಲಿ ಉತ್ತರಿಸಲಿದ್ದಾರೆ. ಬೆದರಿಕೆ, ಅನೈತಿಕ, ಹುರುಳಿಲ್ಲದ ಆರೋಪ, ತೇಜೋವಧೆ, ಚಾರಿತ್ರ್ಯಹನನ ರಾಜಕಾರಣಕ್ಕೆ ಜನರೇ ‘ಇತಿಶ್ರೀ’ ಹಾಡಲಿದ್ದಾರೆ. ಕುಟಿಲ ಮಾರ್ಗ ಅನುಸರಿಸುವ ರಾಜಕಾರಣಿಗಳಿಗೆ ಹಾಗೂ ಅವರ ಕೃಪಾಪೋಷಿತ ನಾಟಕ ಮಂಡಳಿಯ ಸದಸ್ಯರಿಗೆ ಹಿಂದುಳಿದ ಸಮುದಾಯದ ಮತದಾರರು, ಪ್ರಜ್ಞಾವಂತ ಮತದಾರರು ಸೂಕ್ತ ಪಾಠ ಕಲಿಸಲಿದ್ದಾರೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.

About The Author