Political News: ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು, ಇಂದು ಸಿ.ಟಿ.ರವಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಬಗ್ಗೆ ಅಶ್ಲೀಲ ಪದ ಬಳಸಿ ಮಾತನಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಪೊಲೀಸ್ ಠಾಣೆಗೆ ಲಕ್ಷ್ಮೀ ಹೆಬ್ಬಾಳ್ಕರ್ ದೂರು ದಾಖಲಿಸಿದ್ದು, ಸಿ.ಟಿ,ರವಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದ್ದು, ಪೊಲೀಸರು ಸಿ.ಟಿ.ರವಿ ಅವರನ್ನು ಸುವರ್ಣ ಸೌಧದಲ್ಲೇ ಬಂಧಿಸಿದ್ದಾರೆ.
ಸಿ.ಟಿ.ರವಿ ಪರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿದ್ದು, ಮಾನ್ಯ ಸಿ.ಟಿ.ರವಿ ಅವರು ಹಿರಿಯ ಶಾಸಕರಾಗಿ ಸುದೀರ್ಘ ಅನುಭವ ಹೊಂದಿದ ಸುಸಂಸ್ಕೃತ ಭಾಷೆ ಬಳಸುವ ಉತ್ತಮ ವಾಕ್ಪಟು. ಸಭ್ಯತೆಯ ಎಲ್ಲೆಮೀರಿ ಪದ ಸಂಸ್ಕೃತಿ ಇಲ್ಲದವರಂತೆ ಮಾತನಾಡಿದವರಲ್ಲ ಎಂದಿದ್ದಾರೆ.
ಅಲ್ಲದೇ, ಇಂದು ವಿಧಾನಪರಿಷತ್ತಿನಲ್ಲಿ ನಡೆದಿರುವ ಘಟನೆಯ ವೇಳೆ ಮಾನ್ಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಕುರಿತ ಪದಬಳಕೆಯ ಸಂಬಂಧ ಈಗಾಗಲೇ ಸೂಕ್ತ ಸ್ಪಷ್ಟನೆ ನೀಡಿ ಆರೋಪ ನಿರಾಕರಿಸಿದ್ದಾರೆ. ಮಾತೆಯನ್ನು ಪೂಜಿಸುವ ಸಂಸ್ಕಾರದ ನೆಲೆಗಟ್ಟಿನ ಸಂಘಟನೆಯಿಂದ ಬೆಳೆದು ಬಂದಿರುವ ಸಿಟಿ ರವಿ ಅವರನ್ನು ಕುರಿತು ಕಾಂಗ್ರೆಸ್ಸಿಗರು ವಿಧಾನಪರಿಷತ್ತಿನಲ್ಲಿ ನಡೆದ ಪ್ರತಿಭಟನೆಯ ವೇಳೆ ಬಳಸಿರುವ ‘ಕೊಲೆಗಡುಕ’ ಎಂಬ ಪದ ಸಹಜವಾಗಿಯೇ ಅವರ ಸಹನೆಯನ್ನು ಕೆಣಕಿರಬಹುದು ಎಂದು ಸಿ.ಟಿ.ರವಿ ಪರ ವಿಜಯೇಂದ್ರ ಬ್ಯಾಟ್ ಬೀಸಿದ್ದಾರೆ.
ಯಾವುದಾದರೂ ಒಂದು ವಿಷಯವನ್ನು ಸೃಷ್ಟಿಸಿ ಗದ್ದಲವೆಬ್ಬಿಸಿ ತಮಗೆ ಸುತ್ತಿಕೊಂಡಿರುವ ಅಭಿವೃದ್ಧಿ ವಿರೋಧಿ ಆಡಳಿತದ ಅಲೆಯ ವಿರುದ್ಧದ ಹಾಗೂ ಭ್ರಷ್ಟಾಚಾರದ ಹಗರಣಗಳ ಸುರುಳಿಯ ವಿಷಯವನ್ನು ಜನಮಾನಸದ ದಿಕ್ಕು ತಪ್ಪಿಸಲು ಅನಗತ್ಯ ಗೊಂದಲ ಸೃಷ್ಟಿಸುವ ಹೊಸ ವರಸೆಯನ್ನು ಕಾಂಗ್ರೆಸ್ಸಿಗರು ಶುರುವಿಟ್ಟುಕೊಂಡಿದ್ದಾರೆ. ಇಂದಿನ ಘಟನೆಯ ಹಿನ್ನೆಲೆಯಲ್ಲಿ ವಿಧಾನಮಂಡಲದೊಳಗೆ ಸಿ.ಟಿ. ರವಿ ಅವರ ಮೇಲೆ ಮಾರ್ಷಲ್ ಗಳ ಸಮ್ಮುಖದಲ್ಲೇ ಗೂಂಡಾಗಳಿಂದ ಹಲ್ಲೆಗೆ ಯತ್ನ ನಡೆದಿರುವ ಘಟನೆ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲಿನ ನೇರ ದಾಳಿಯಾಗಿದೆ ಎಂದು ವಿಜಯೇಂದ್ರ ಆರೋಪಿಸಿದ್ದಾರೆ.
ಗೂಂಡಾಗಿರಿ ರಾಜಕಾರಣಕ್ಕೆ ಹೆಸರಾಗಿರುವ ಕಾಂಗ್ರೆಸ್ಸಿಗರು ವಿಧಾನಮಂಡಲದೊಳಗೂ ಕೂಡ ಗೂಂಡಾಗಳನ್ನು ಕರೆತಂದು ದಾಂಧಲೆ ಎಬ್ಬಿಸುವ ಮಟ್ಟಿಗೆ ಪರಿಸ್ಥಿತಿ ಸೃಷ್ಟಿಸುತ್ತಿದ್ದಾರೆ ಎಂದರೆ ಇನ್ನು ಜನಸಾಮಾನ್ಯರ ಪಾಡೇನು ಎಂಬ ಆತಂಕ ರಾಜ್ಯದ ಜನತೆಯನ್ನು ಕಾಡದೇ ಇರದು.
ಪೊಲೀಸ್ ಸರ್ಪಗಾವಲಿನ ಸುವರ್ಣಸೌಧದೊಳಗೆ ಗೂಂಡಾಗಿರಿ ನಡೆಸಲು ಮಾನ್ಯ ಸಿಟಿ ರವಿ ಅವರ ಮೇಲೆ ಹಲ್ಲೆ ನಡೆಸಲು ಪ್ರಚೋದನೆ ನೀಡಿರುವ ಹಿಂದಿನ ಶಕ್ತಿ ಯಾವುದು ಎಂಬುದರ ಬಗ್ಗೆ ಉಭಯ ಸದನಗಳ ಸಭಾಧ್ಯಕ್ಷರು ಮತ್ತು ಸಭಾಪತಿಗಳು ಕೂಡಲೇ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತೇನೆ. ಸಿಟಿ ರವಿ ಅವರ ಮೇಲೆ ಹಲ್ಲೆ ನಡೆಸಲು ಮುಂದಾದ ಗೂಂಡಾಗಳನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳದಿದ್ದರೆ ಬಿಜೆಪಿ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳಲಿದೆ ಎಂದು ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.