Political News: ಇಂದು ದೇಶದೆಲ್ಲೆಡೆ ಮುಸ್ಲಿಂ ಬಾಂಧವರು ರಂಜಾನ್ ಹಬ್ಬವನ್ನು ಪ್ರೀತಿ-ಸೌಹಾರ್ದದಿಂದ ಆಚರಿಸಿದ್ದಾರೆ. ಮಸೀದಿಗೆ ಹೋಗಿ ನಮಾಜ್ ಸಲ್ಲಿಸುವ ಮೂಲಕ ದೇವರಲ್ಲಿ ಪ್ರಾರ್ಥಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಕೂಡ ಮುಸ್ಲಿಂ ಬಾಂಧವರ ಜತೆ ಸೇರಿ ರಂಜಾನ್ ಹಬ್ಬ ಆಚರಿಸಿದ್ದಾರೆ. ಇಂದು ಪವಿತ್ರ ರಂಜಾನ್ ಹಬ್ಬದ ಪ್ರಯುಕ್ತ ಬೆಂಗಳೂರಿನ ಮಿಲ್ಲರ್ಸ್ ರಸ್ತೆಯ ಮಸ್ಜಿದ್ – ಈ – ಖಾದ್ರಿಯಾದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿ, ರಾಜ್ಯದ ಮುಸ್ಲಿಂ ಬಾಂಧವರಿಗೆ ರಂಜಾನ್ ಹಬ್ಬದ ಶುಭ ಹಾರೈಸಿದ್ದಾರೆ.
ಈ ವೇಳೆ ಮಾತನಾಡಿರುವ ಸಿಎಂ, ಮಾನವಕುಲದ ಒಳಿತಿಗಾಗಿ ಸರ್ವರೂ ಪ್ರಾರ್ಥಿಸುವುದು ಅತ್ಯಂತ ಅವಶ್ಯ. ಮಾನವೀಯತೆಯಿಂದ ಪರಸ್ಪರ ಪ್ರೀತಿ – ವಿಶ್ವಾಸದಿಂದ ಬಾಳುವುದು ಮುಖ್ಯ. ಭಾರತ ದೇಶ ವಿವಿಧ ಜಾತಿ ಸಂಸ್ಕೃತಿಗಳಿಂದ ಕೂಡಿದೆ. ವಿವಿಧತೆಯಲ್ಲಿ ಏಕತೆಯಿರುವ ನಮ್ಮ ದೇಶದಲ್ಲಿ ಎಲ್ಲರೂ ಒಟ್ಟಾಗಿ ಬಾಳಬೇಕು. ಯಾವುದೇ ಧರ್ಮವೂ ದ್ವೇಷವನ್ನು ಬೋಧಿಸುವುದಿಲ್ಲ. ಎಲ್ಲ ಧರ್ಮಗಳೂ ಪ್ರೀತಿಯನ್ನು ಬೋಧಿಸುತ್ತವೆ. ಇದನ್ನು ಅರಿತು ಬಾಳಿದರೆ ಸಮಾಜದಲ್ಲಿ ಶಾಂತಿ – ಸೌಹಾರ್ದತೆ ನೆಲೆಸಲು ಸಾಧ್ಯ ಎಂದಿದ್ದಾರೆ.




