Political News: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಎದುರು ಸಂಭವಿಸಿದ್ದ ಭೀಕರ ಕಾಲ್ತುಳಿತದಲ್ಲಿ 11 ಜನ ಆರ್ಸಿಬಿಯ ಅಭಿಮಾನಿಗಳು ಉಸಿರು ಚೆಲ್ಲಿದ್ದಾರೆ. ಅಲ್ಲದೆ 47 ಜನರು ಗಾಯಗೊಂಡಿದ್ದಾರೆ. ಈ ನಡುವೆ ಘಟನೆಯ ಬಗ್ಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕಣ್ಣೀರಾಗಿ ಗದ್ಗದಿತರಾಗಿದ್ದಾರೆ.
ಬೆಂಗಳೂರಿನಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ವೇಳೆ ಅವರು ಭಾವನೆ ತಡೆಯಲಾರದೆ ಗಳಗಳನೆ ಕಣ್ಣೀರು ಹಾಕಿದ್ದಾರೆ. ಇದು ರಾಜ್ಯಕ್ಕೆ ಹೃದಯವಿದ್ರಾವಕ ಕ್ಷಣ ಎಂದು ಹೇಳಿದ್ದಾರೆ.
ನಾವು ಈ ಘಟನೆಯಿಂದ ಆಡಳಿತಾತ್ಮಕ ಪಾಠ ಕಲಿಯಬೇಕು, ಪ್ರತಿಪಕ್ಷಗಳು ಹೆಣಗಳ ಮೇಲೆ ರಾಜಕೀಯ ಮಾಡಲಿ. ಅವರು ಎಷ್ಟು ಮೃತ ದೇಹಗಳ ಮೇಲೆ ರಾಜಕೀಯ ಮಾಡಿದ್ದಾರೆಂದು ನಾನು ಪಟ್ಟಿ ಮಾಡುತ್ತೇನೆ. ಆದರೆ ಚಿಕ್ಕ ಮಕ್ಕಳನ್ನು ನೋಡುವುದು ನೋವುಂಟುಮಾಡುತ್ತದೆ. ಪಾಪ ಅವರ ನೋವನ್ನು ನೋಡಿದ್ದೇನೆ. 14-15 ವರ್ಷದ ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರು ಇದನ್ನು ಅರಗಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಭಾವುಕರಾಗಿದ್ದಾರೆ.
ನನಗೆ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಹೋಗುವ ಯೋಚನೆಯೇ ಇರಲಿಲ್ಲ..
ಪರಿಸ್ಥತಿಯನ್ನು ನೋಡಿ ಪೊಲೀಸ್ ಕಮಿಷನರ್ ಅವರು ತಕ್ಷಣ ಹತ್ತು ನಿಮಿಷಗಳಲ್ಲಿ ಎಲ್ಲವನ್ನೂ ತೆರವೂಗೊಳಿಸುವಂತೆ ಸೂಚಿಸಿದ್ದರು. ಅದರಂತೆಯೇ ನಾನು ಕೂಡಲೇ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ತಿಳಿಸಿದ್ದೆ. ನನಗೆ ಚಿನ್ನಸ್ವಾಮಿ ಸ್ಟೇಡಿಯಂಗೆ ಹೋಗುವ ಯೋಚನೆ ಇರಲಿಲ್ಲ, ಆದರೆ ಕ್ರಿಕೆಟ್ ಅಸೋಸಿಯೇಷನ್ ಪದಾಧಿಕಾರಿಗಳನ್ನು ತಲುಪಿಸೋಕೆ ಹೋಗಿದ್ದೆ. ನನಗೂ ಅಲ್ಲಿಗೆ ಹೋಗೋಕೆ ಆಗುತ್ತಿರಲಿಲ್ಲ, ಆದರೂ ನನ್ನ ಕಾರಿನಲ್ಲಿಯೇ ಅವರನ್ನು ಕರೆದುಕೊಂಡು ಹೋಗಿದ್ದೆ. ಬಳಿಕ ತಕ್ಷಣ ಅವರಿಗೂ ಮನವಿ ಮಾಡಿಕೊಂಡು ಕಾರ್ಯಕ್ರಮ ಮುಗಿಸೋಕೆ ತಿಳಿಸಿದ್ದೆ ಎಂದು ಹೇಳಿದ್ದಾರೆ.
ಕ್ರೀಡಾಂಗಣದಲ್ಲಿ 35 ಸಾವಿರ ಆಸನಗಳು, ಆದರೆ ಜನರು ಹೆಚ್ಚು ಬಂದಿದ್ದರು..!
ಈ ದುರ್ಘಟನೆ ಸಂಭವಿಸಬಾರದಿತ್ತು, ಅಲ್ಲದೆ ನಾವು ಇಷ್ಟೊಂದು ದೊಡ್ಡ ಜನಸಂದಣಿಯನ್ನು ಎಂದಿಗೂ ನಿರೀಕ್ಷಿಸಿರಲಿಲ್ಲ. ಕ್ರೀಡಾಂಗಣದ ಸಾಮರ್ಥ್ಯ 35,000, ಆದರೆ 3 ಲಕ್ಷಕ್ಕೂ ಹೆಚ್ಚು ಜನರು ಅಲ್ಲಿದ್ದರು…ಕ್ರೀಡಾಂಗಣದ ಗೇಟ್‌ಗಳು ಮುರಿದುಹೋಗಿವೆ… ಈ ಘಟನೆಗೆ ನಾವು ಕ್ಷಮೆಯಾಚಿಸುತ್ತೇವೆ. ನಾವು ಸತ್ಯಗಳನ್ನು ತಿಳಿದುಕೊಳ್ಳಲು ಮತ್ತು ಸ್ಪಷ್ಟ ಸಂದೇಶವನ್ನು ನೀಡಲು ಬಯಸುತ್ತೇವೆ ಎಂದು ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಈಗ ಅತ್ತರೇ ಏನು ಪ್ರಯೋಜನ, ಮೊದಲೇ ಯೋಚಿಸಬೇಕಿತ್ತು..
ಭಾರತೀಯ ಜನತಾ ಪಕ್ಷವು ಘಟನೆಯನ್ನು ರಾಜಕೀಯಗೊಳಿಸುತ್ತಿದೆ. ಘಟನೆಗಾಗಿ ನಮಗೆ ತುಂಬಾ ವಿಷಾದವಿದೆ. ಭವಿಷ್ಯದಲ್ಲಿ ನಾವು ಉತ್ತಮ ಪರಿಹಾರವನ್ನು ಕಂಡುಕೊಳ್ಳುತ್ತೇವೆ ಎಂದು ಅವರು ಹೇಳಿದ್ದಾರೆ. ಇನ್ನೂ ಡಿಕೆ ಶಿವಕುಮಾರ್ ಕಣ್ಣೀರಿನ ಕುರಿತು ವ್ಯಂಗ್ಯವಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಈಗ ಅತ್ತರೆ ಏನು ಪ್ರಯೋಜನ, ಕಣ್ಣೀರು ಹಾಕುವ ಮೊದಲೇ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕಿತ್ತು. ಇದಕ್ಕೇ ರಾಜ್ಯ ಸರ್ಕಾರವೇ ನೇರ ಹೊಣೆಯಾಗುತ್ತದೆ ಎಂದು ಅವರು ಆರೋಪಿಸಿದ್ದಾರೆ.
ಇನ್ನೂ ಅರ್‌ಸಿಬಿ ತಂಡದ ಐಪಿಎಲ್ ವಿಜಯೋತ್ಸವ ಆಚರಣೆಗೂ ಮುನ್ನ ತಮ್ಮ ನೆಚ್ಚಿನ ಆಟಗಾರರನ್ನು ನೋಡಲು ಸಾವಿರಾರು ಅಭಿಮಾನಿಗಳು ಜಮಾಯಿಸಿದ್ದ ಸಂದರ್ಭದಲ್ಲಿ ಐತಿಹಾಸಿಕ ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಸಂಭವಿಸಿದೆ. ಇದೇ ವಿಚಾರಕ್ಕೆ ಇದೀಗ ರಾಜಕೀಯ ಕೆಸರೆರಚಾಟ ಜೋರಾಗಿದ್ದು, ಆಡಳಿತ ಹಾಗೂ ವಿಪಕ್ಷಗಳ ನಡುವೆ ತೀವ್ರ ಜಟಾಪಟಿ ಮುಂದುವರೆದಿದೆ.